ಎಳವೆಯಲ್ಲಿ ಪಡೆದ ಶಿಕ್ಷಣ ಬದುಕಿಗೆ ಆಧಾರವಾಗುತ್ತದೆ: ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ
ರಾಮಕುಂಜ: ಶ್ರೀ ರಾಮಕುಂಜೇಶ್ವರ ಸಂಸ್ಕೃತ ಹಿ.ಪ್ರಾ.ಶಾಲೆ ಮತ್ತು ಶ್ರೀ ರಾಮಕುಂಜೇಶ್ವರ ಸಂಸ್ಕೃತ ಪಾಠ ಶಾಲೆಯ 20222-23 ನೇ ಸಾಲಿನ ಶಾಲಾ ವಾರ್ಷಿಕೋತ್ಸವ ‘ಮಕ್ಕಳ ಹಬ್ಬ 2022-23’ ಡಿ.29ರಂದು ಬೆಳಿಗ್ಗೆ ವಿಶ್ವೇಶತೀರ್ಥ ಸಭಾಭವನದ ವೇದಿಕೆಯಲ್ಲಿ ನಡೆಯಿತು.
ಬೆಳಿಗ್ಗೆ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಉಡುಪಿ ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು, ಎಳವೆಯಲ್ಲಿ ಪಡೆದ ಶಿಕ್ಷಣ ಬದುಕಿಗೆ ಆಧಾರವಾಗಿ ನಿಲ್ಲುತ್ತದೆ. ಓದು ಬರಹದಿಂದ ಸ್ವತಂತ್ರವಾಗಿ ಬದುಕಬಲ್ಲೆ ಎಂಬ ಆತ್ಮಸ್ಥೈರ್ಯ ಮಕ್ಕಳಲ್ಲಿ ತುಂಬುವ ಶಿಕ್ಷಣ ಸಿಗಬೇಕು. ಶ್ರೀ ರಾಮಕುಂಜೇಶ್ವರ ಶಿಕ್ಷಣ ಸಂಸ್ಥೆಗಳಲ್ಲಿ ಈ ರೀತಿಯ ಶಿಕ್ಷಣ ಸಿಗುತ್ತಿದೆ. ಇದು ಈ ಊರಿನ ಮಕ್ಕಳ ಭಾಗ್ಯ. ಇಲ್ಲಿನ ಸ್ವಚ್ಛ ಪರಿಸರದಲ್ಲಿ ಕಲಿಯುತ್ತಿರುವ ಮಕ್ಕಳೇ ಧನ್ಯರು ಎಂದು ನುಡಿದರು. ಹಳ್ಳಿಯಲ್ಲಿರುವ ಶಿಕ್ಷಣ ಸಂಸ್ಥೆ ಉತ್ತುಂಗಕ್ಕೇರುವಲ್ಲಿ ಊರಿನವರ, ಪೋಷಕರ ಸಹಕಾರ ಬೇಕು. ಈ ನಿಟ್ಟಿನಲ್ಲಿ ಶಾಲಾ ವಾರ್ಷಿಕೋತ್ಸವವು ಊರಿನವರೆಲ್ಲರೂ ಸೇರಿಕೊಂಡು ಆಚರಿಸುವ ಊರಿನ ಹಬ್ಬ ಆಗಿದೆ ಎಂದು ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಕರ್ಣಾಟಕ ಬ್ಯಾಂಕ್ನ ನಿವೃತ್ತ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಶ್ರೀನಿವಾಸ ದೇಶಪಾಂಡೆ ಅವರು ಮಾತನಾಡಿ, ವೃಂದಾವನಸ್ಥ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಹುಟ್ಟೂರು ಪುಣ್ಯ ಭೂಮಿ. ಇಂತಹ ಪರಿಸರದಲ್ಲಿ ಬೆಳೆಯುತ್ತಿರುವ ಮಕ್ಕಳ ಭವಿಷ್ಯ ಉಜ್ವಲವಾಗಲಿದೆ. ಹಿಂದಿನ ಮೆಕಾಲೆ ಶಿಕ್ಷಣ ಪದ್ಧತಿಯಿಂದ ಎಲ್ಲವೂ ಕುರುಡಾಗಿದೆ. ಇದರಿಂದಾಗಿ ನಮ್ಮ ಹಬ್ಬ, ಆಚಾರ, ಆಚರಣೆ, ವಿಚಾರಗಳು ಗೌನವಾಗಿವೆ ಎಂದು ಹೇಳಿದ ಅವರು, ಇಲ್ಲಿ ಟಿ.ನಾರಾಯಣ ಭಟ್ರವರಂತಹ ಆದರ್ಶ ಶಿಕ್ಷಕರಿದ್ದಾರೆ. ಅವರ ಕೃತಿಗಳನ್ನು ಪಠ್ಯದ ಜೊತೆಗೆ ಪಠ್ಯೇತರವಾಗಿ ರೂಢಿಸಿಕೊಳ್ಳಬೇಕು. ಮಕ್ಕಳಲ್ಲಿ ಓದುವ ಹವ್ಯಾಸ ತುಂಬಬೇಕು. ಮಕ್ಕಳಲ್ಲಿ ಸದ್ವಿಚಾರ ಬೆಳೆಸಬೇಕೆಂದು ಪೋಷಕರಿಗೆ ಕಿವಿಮಾತು ಹೇಳಿದರು. ಇನ್ನೋರ್ವ ಅತಿಥಿ ಸಿಎ ಗಣೇಶ್ ಕೆ.ರಾವ್ರವರು ಮಾತನಾಡಿ, ಹಿಂದೆ ಗುರು, ಮುಂದೆ ಗುರಿ ಇರಬೇಕು. ಆಗ ಬದುಕು ಸಾರ್ಥಕವಾಗಲಿದೆ. ಗುರುಗಳ ಮಾರ್ಗದರ್ಶನ ಪಡೆದುಕೊಂಡು ಸತ್ಪ್ರಜೆಗಳಾಗಿ ಮಕ್ಕಳು ಬೆಳೆಯಬೇಕು. ರಾಮಕುಂಜದಲ್ಲಿ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಅಧ್ಯಯನ ಕೇಂದ್ರ ಸ್ಥಾಪನೆಯಾಗಬೇಕು. ಇದರಿಂದ ಶ್ರೀಗಳ ಜೀವನ ಮೌಲ್ಯಗಳು ಮಕ್ಕಳಿಗೆ ಸಿಗಲಿದೆ ಎಂದರು. ಆಪ್ತ ಮಾರ್ಗದರ್ಶಕರಾದ ಎ.ಮಾಧವ ಆಚಾರ್ಯ ಇಜ್ಜಾವುರವರು ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು.
ದತ್ತಿನಿಧಿ/ಸನ್ಮಾನ: ವಿದ್ಯಾರ್ಥಿಗಳಿಗೆ ದತ್ತಿನಿಧಿ ವಿತರಣೆ ಹಾಗೂ ದಾನಿಗಳಿಗೆ, ಅತಿಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಸುಬ್ರಹ್ಮಣ್ಯ ಕಾರಂತ, ನಿವೃತ್ತ ಶಿಕ್ಷಕಿ ಇಂದಿರಾ, ಹರಿನಾರಾಯಣ ಆಚಾರ್ ಹಾಗೂ ಭಾಗ್ಯಲಕ್ಷ್ಮೀ ದಂಪತಿಯನ್ನು ಸಂಸ್ಥೆಯ ಪರವಾಗಿ ಸ್ವಾಮೀಜಿಯವರು ಗೌರವಿಸಿದರು. ಕಲಿಕೆಯಲ್ಲಿ ಸಾಧನೆ ಮಾಡಿದ ಹಿರಿಯ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಶಿಕ್ಷಕಿ ನಿರ್ಮಲಾದೇವಿಯವರು ವಿದ್ಯಾರ್ಥಿಗಳ ಹಾಗೂ ಸನ್ಮಾನಿತರ ಹೆಸರು ವಾಚಿಸಿದರು.
ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್., ಕೋಶಾಧಿಕಾರಿ ಸೇಸಪ್ಪ ರೈ, ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಶಿಕ್ಷಕ ಸತೀಶ್ ಭಟ್, ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜಿನ ಪ್ರಾಂಶುಪಾಲ ಗಣರಾಜ್ ಕುಂಬ್ಳೆ, ನಿವೃತ್ತ ಶಿಕ್ಷಕಿ ಇಂದಿರಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಸಂಚಾಲಕರೂ ಆದ, ನಿವೃತ್ತ ಮುಖ್ಯಶಿಕ್ಷಕ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಟಿ.ನಾರಾಯಣ ಭಟ್ರವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ರಾಮಕುಂಜೇಶ್ವರ ಸಂಸ್ಕೃತ ಪಾಠ ಶಾಲೆಯ ಮುಖ್ಯಶಿಕ್ಷಕ ಜನಾರ್ದನ ಕೆ.ಜೆ.ವಂದಿಸಿದರು. ಮುಖ್ಯಶಿಕ್ಷಕಿ ಸುಶೀಲಾ ವರದಿ ವಾಚಿಸಿ, ಕಾರ್ಯಕ್ರಮ ನಿರೂಪಿಸಿದರು. ಪ್ರಣಮ್ಯ ಹೆಚ್.ಕೆ.ಪ್ರಾರ್ಥಿಸಿದರು. ಬೆಳಿಗ್ಗೆ ೯ರಿಂದ ಸಂಜೆ ೪ ಗಂಟೆಯ ತನಕ ಮಕ್ಕಳಿಂದ ವಿವಿಧ ನೃತ್ಯ, ನಾಟಕಗಳು ಪ್ರದರ್ಶನಗೊಂಡಿತು.
ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪುಣ್ಯಸ್ಮರಣೆ
2019 ರ ಡಿ.29ರಂದು ವೃಂದಾವನಸ್ಥರಾದ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪುಣ್ಯಸ್ಮರಣೆ ಈ ಸಂದರ್ಭದಲ್ಲಿ ನಡೆಯಿತು. ವೇದಿಕೆಯಲ್ಲಿ ಉಪಸ್ಥಿತರಿದ್ದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಭಾವಚಿತ್ರಕ್ಕೆ ತುಳಸಿ ಮಾಲಾರ್ಪಣೆ ಮಾಡಿದರು. ಈ ವೇಳೆ ಮಾತನಾಡಿದ ಟಿ.ನಾರಾಯಣ ಭಟ್ರವರು, ಶ್ರೀ ವಿಶ್ವೇಶತೀರ್ಥ ಶ್ರೀಗಳು 2019 ರ ಡಿ.19ರಂದು ನಡೆದ ಶಾಲೆಯ ವಾರ್ಷಿಕೋತ್ಸವಕ್ಕೆ ಜ್ವರದ ನಡುವೆಯೇ ಬಂದು ಆಶೀರ್ವಚನ ನೀಡಿದ್ದರು. ಅದುವೇ ರಾಮಕುಂಜಕ್ಕೆ ಅವರ ಕೊನೆಯ ಭೇಟಿಯಾಗಿದೆ. ಮರುದಿನ ಆಸ್ಪತ್ರೆಗೆ ಸೇರಿದ ಅವರು ಮತ್ತೆ ಮಾತನಾಡಲಿಲ್ಲ. ರಾಮಕುಂಜದ ಶಿಕ್ಷಣ ಸಂಸ್ಥೆಗಳು ಅವರ ಕನಸಿನ ಕೂಸು ಆಗಿದೆ ಎಂದರು.