ಉಪ್ಪಿನಂಗಡಿ; ಮನುಷ್ಯ ಪರಿಪೂರ್ಣತೆಯಡೆಗೆ ಸಾಗಬೇಕಾದರೆ ಆತನಿಗೆ ಬಾಲ್ಯದಲ್ಲಿ ಸಂಸ್ಕಾರಭರಿತ ಶಿಕ್ಷಣ ದೊರೆಯಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆತರೆ ಅಂತಹ ಮಕ್ಕಳು ಯಾವುದೇ ಸನ್ನಿವೇಶದಲ್ಲಿಯೂ ಧೃತಿಗೆಡುವುದಿಲ್ಲ. ಆದಿಚುಂಚನಗಿರಿ ಮಠದ ಆಶ್ರಯದಲ್ಲಿರುವ ಪೆರಿಯಡ್ಕ ಸರ್ವೋದಯ ಪ್ರೌಢಶಾಲೆಯಲ್ಲಿ ಅಂತಹ ಶೈಕ್ಷಣಿಕ ವ್ಯವಸ್ಥೆಯನ್ನು ಮಕ್ಕಳಿಗೆ ಕಲ್ಪಿಸುವಲ್ಲಿ ನಿರಂತರವಾದ ಪ್ರಯತ್ನ ನಡೆಸಲಾಗುತ್ತಿದೆ ಎಂದು ಆದಿಚುಂಚನಗಿರಿ ಮಂಗಳೂರು ಶಾಖಾ ಮಠ ಹಾಗು ಪೆರಿಯಡ್ಕ ಪ್ರೌಢಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ. ಧರ್ಮಪಾಲನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ಅವರು ಪೆರಿಯಡ್ಕ ಬಿಜಿಎಸ್ ಸರ್ವೋದಯ ಪ್ರೌಢಶಾಲೆಯ ಪ್ರತಿಭಾ ಪುರಸ್ಕಾರ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಬದುಕಿನಲ್ಲಿ ಮಹಾಪುರುಷರ ಬದುಕಿನ ಕಥೆಗಳ ಪ್ರಭಾವವನ್ನು ಹೆಚ್ಚಿಸುವ ಕೆಲಸ ನಡೆಯಬೇಕು. ಇದರ ಜತೆಗೆ ಹೊಸ ಆವಿಷ್ಕಾರಗಳತ್ತ ಮಕ್ಕಳ ದೃಷ್ಟಿ ಹರಿಯುವಂತಾಗಬೇಕು. ಇದಕ್ಕೆ ಶಿಕ್ಷಕರ ಜತೆಗೆ ಪೋಷಕರ ಶ್ರಮವೂ ಅಗತ್ಯ. ಬದುಕಿನ ಉತ್ತಮ ಮೌಲ್ಯಗಳನ್ನು ಮಕ್ಕಳ ಮನಸ್ಸಿನಲ್ಲಿ ತುಂಬಿಸುವ ಕಾರ್ಯ ನಿರಂತರವಾಗಿ ನಡೆಯಬೇಕಾಗಿರುವುದು ಇಂದಿನ ಅನಿವಾರ್ಯತೆ ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಅವರು ಮಾತನಾಡಿ, ಮಕ್ಕಳ ಬಾಲ್ಯದಿಂದಲೇ ತಮ್ಮ ಭವಿಷ್ಯದ ಕುರಿತಾಗಿ ಕನಸುಗಳನ್ನು ಬಿತ್ತುವ ಕಾರ್ಯದೊಂದಿಗೆ ಸಂಸ್ಕಾರ ಸಹಿತ ಶಿಕ್ಷಣ ನೀಡುವಲ್ಲಿ ಶಿಕ್ಷಕರು ಮುಂದಾಗಬೇಕು. ಮಕ್ಕಳು ಮೊಬೈಲ್ ವ್ಯಾಮೋಹದಿಂದ ದೂರವಾಗಿ ಪುಸ್ತಕ ಪ್ರೀತಿ ಬೆಳೆಸಿಕೊಳ್ಳುವ ಸನ್ನಿವೇಶಗಳನ್ನು ಶೈಕ್ಷಣಿಕ ವ್ಯವಸ್ಥೆ ಸೃಷ್ಟಿಸಬೇಕು. ಈ ವಿಚಾರಗಳು ಶಿಕ್ಷಕ-ಪೋಷಕರ ವಿಶೇಷ ಪ್ರಯತ್ನಗಳಿಂದ ಸಾಧ್ಯ ಎಂದು ಹೇಳಿದರು.
ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ ಮಾತನಾಡಿ, ಸರ್ವೋದಯ ಪ್ರೌಢಶಾಲೆಗೆ ಹೊಸ ಚೈತನ್ಯದ ರೂಪ ನೀಡಲು ಸ್ವಾಮೀಜಿ ಮುಂದಾಗಿದ್ದಾರೆ. ಇದಕ್ಕೆ ಸಮಾಜ ಬಂಧುಗಳ ಸಹಕಾರ ಅತೀ ಅಗತ್ಯ ಎಂದರು.
ಉದ್ಯಮಿ ಸುಂದರ ಗೌಡ ಮಾತನಾಡಿ, ಶೈಕ್ಷಣಿಕ ವ್ಯವಸ್ಥೆಯಲ್ಲಿ ಶಿಕ್ಷಕರು-ಪೋಷಕರು ಹಾಗೂ ಮಕ್ಕಳ ನಡುವೆ ಉತ್ತಮ ಭಾಂದವ್ಯ ಉಂಟಾದಾಗ ಮಾತ್ರ ಮಾದರಿ ಶಾಲೆಯ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.
ವೇದಿಕೆಯಲ್ಲಿ ಎಸ್ಡಿಎಂಸಿ ಅಧ್ಯಕ್ಷ ರಾಮಚಂದ್ರ ಗೌಡ ಉಪಸ್ಥಿತರಿದ್ದರು. ಶಾಲಾ ನಾಯಕಿ ಪುಣ್ಯಶ್ರೀ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಶಾಲಾ ಪರಿವೀಕ್ಷಕ ಬಾಲಕೃಷ್ಣ ಗೌಡ ಸ್ವಾಗತಿಸಿದರು. ಮುಖ್ಯೋಪಾಧ್ಯಾಯಿನಿ ಲಕ್ಷ್ಮೀ. ಪಿ ಅವರು ವಾರ್ಷಿಕ ವರದಿ ವಾಚಿಸಿದರು. ಶಿಕ್ಷಕಿ ಸವಿತಾ ವಂದಿಸಿದರು. ಶಿಕ್ಷಕರಾದ ಶಕುಂತಳಾ, ಮೋಹನ್, ರಜನಿ ಸಾಂಸ್ಕೃತಿಕ-ಕ್ರೀಡಾ ವಿಭಾಗದ ಬಹುಮಾನಿತರ ವರದಿ ವಾಚಿಸಿದರು. ವಿದ್ಯಾರ್ಥಿಗಳಾದ ಪ್ರೇಮಾ ಮತ್ತು ಲಕ್ಷ್ಮೀಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
ಆಂಗ್ಲಮಾಧ್ಯಮ ಶಾಲಾ ಕಟ್ಟಡ ಶಿಲಾನ್ಯಾಸ
ಪೆರಿಯಡ್ಕ ಸರ್ವೋದಯ ಪ್ರೌಢಶಾಲಾ ಆವರಣದಲ್ಲಿ 2023ರ ಜನವರಿ 22ರಂದು ನೂತನ ಆಂಗ್ಲಮಾಧ್ಯಮ ಶಾಲಾ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ. ಆದಿಚುಂಚನಗಿರಿ ಮಹಾಸಂಸ್ಥಾನದ ನಿರ್ಮಲಾನಂದ ಸ್ವಾಮೀಜಿ ಅವರು ಶಿಲಾನ್ಯಾಸ ನಡೆಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸ್ವಾಮೀಜಿಗಳು, ಸಚಿವರು,ಶಾಸಕರು ಭಾಗಿಯಾಗಲಿದ್ದಾರೆ. ಈ ಕಾರ್ಯಕ್ಕೆ ಊರವರ ಸಹಕಾರ ಅಗತ್ಯವಾಗಿದೆ.
– ಡಾ. ಧರ್ಮಪಾಲನಾಥ ಸ್ವಾಮೀಜಿ ಆದಿಚುಂಚನಗಿರಿ ಮಂಗಳೂರು ಶಾಖಾ ಮಠ.