ವಿವೇಕಾನಂದ ಮಹಾವಿದ್ಯಾಲಯದ ಆವರಣದಲ್ಲಿ ನಂದಿನಿ ಕ್ಷೀರ ಮಳಿಗೆ ಉದ್ಘಾಟನೆ

0

ಪುತ್ತೂರು: ನೆಹರೂನಗರದಲ್ಲಿರುವ ವಿವೇಕಾನಂದ ಮಹಾವಿದ್ಯಾಲಯದ ಆವರಣದಲ್ಲಿ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ಇದರ ವತಿಯಿಂದ ನೂತನವಾಗಿ ನಂದಿನಿ ಕ್ಷೀರ ಮಳಿಗೆ ಡಿ.31ರಂದು ಉದ್ಘಾಟನೆಗೊಂಡಿತ್ತು.


ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗ ಡಾ.ಕಲ್ಲಡ್ಕ ಪ್ರಭಾಕರ ಭಟ್ ಅವರು ನಂದಿನಿ ಕ್ಷೀರ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿ ಶುದ್ಧ ದೇಸೀ ಹಾಲಿನ ಉತ್ಪನ್ನಗಳು ಪ್ರಾಪ್ತವಾದರೆ ಆರೋಗ್ಯ ವೃದ್ಧಿಯಾಗುತ್ತದೆ. ಹೀಗಾಗಿ ನಂದಿನಿ ಕ್ಷೀರಮಳಿಗೆ ವಿವೇಕಾನಂದ ಸಂಸ್ಥೆಯ ಆವರಣದಲ್ಲಿ ತೆರೆಯುತ್ತಿರುವುದು ಸಕಾಲಿಕ ಎಂದರು.

ಪ್ರಧಾನಮಂತ್ರ ಆತ್ಮನಿರ್ಭರ ಯೋಜನೆ:
ದಕ್ಷಿಣಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ ಅವರು ಮಾತನಾಡಿ, ಈಗಾಗಲೇ ಮೂಡಬಿದ್ರೆ ಆಳ್ವಸ್‌ನಲ್ಲೂ ಮಳಿಗೆ ತೆರೆಯಲಾಗಿದೆ. ಇವತ್ತು ವಿವೇಕಾನಂದ ಕಾಲೇಜು ಆವರಣದಲ್ಲೂ ಮಳಿಗೆ ತೆರೆಯಲಾಗಿದೆ. ಹಾಲಿನ ಪರಿಶುದ್ಧತೆ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಆತ್ಮನಿರ್ಭರ ಯೋಜನೆಯಲ್ಲಿ ಒಕ್ಕೂಟದ ಕುಲಶೇಖರ ಡೇರಿಯಲ್ಲಿ ೯೦ ಲಕ್ಷ ರೂ.ಗಳ ಯಂತ್ರ ಕೆಲಸ ಮಾಡುತ್ತಿದೆ ಎಂದರು.

ಗುಣಮಟ್ಟದಲ್ಲಿ ನಮ್ಮ ಒಕ್ಕೂಟ ನಂಬರ್ ವನ್:
ಒಕ್ಕೂಟದ ಉಪಾಧ್ಯಕ್ಷ ಎಸ್.ಬಿ. ಜಯರಾಮ ರೈ ಮಾತನಾಡಿ, ೪ ಸಾವಿರ ಲೀಟರ್ ಹಾಲು ಸಂಗ್ರಹದೊಂದಿಗೆ ಆರಂಭಗೊಂಡ ಒಕ್ಕೂಟ ೬ ಲಕ್ಷ ಲೀಟರ್ ಸಂಗ್ರಹದವರೆಗೆ ಬೆಳೆದಿದೆ. ಗುಣಮಟ್ಟದಲ್ಲಿ ನಮ್ಮ ಒಕ್ಕೂಟ ನಂಬರ್ ವನ್ ಆಗಿದೆ. ತಿರುಪತಿ ದೇವಳಕ್ಕೂ ನಮ್ಮ ತುಪ್ಪ ಹೋಗುತ್ತಿದೆ ಎಂದರು. ವ್ಯವಸ್ಥಾಪಕ ನಿರ್ದೇಶಕ ಡಿ. ಅಶೋಕ್ ಮಾತನಾಡಿದರು. ಒಕ್ಕೂಟದ ನಿರ್ದೇಶಕ ನಾರಾಯಣ ಪ್ರಕಾಶ್ ಕೆ., ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕರಾದ ಡಾ. ರವಿರಾಜ್ ಉಡುಪ, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ. ಕೃಷ್ಣ ಭಟ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನೂತನ ಮಳಿಗೆ ನಿರ್ವಾಹಕ ರಾಜೇಶ್ ಪಡ್ನೂರು ಸಹಕರಿಸಿದರು.

1 ತಿಂಗಳು ಶೇ.20 ರಿಯಾಯಿತಿ
ಈ ಆರ್ಥಿಕ ವರ್ಷಾಂತ್ಯದಲ್ಲಿ ನಾಲ್ಕೈದು ಕ್ಯಾಂಪಸ್‌ಗಳಲ್ಲಿ ಮಳಿಗೆ ತೆರೆಯುವ ಉದ್ದೇಶವಿದೆ. ನೂತನ ಮಳಿಗೆಯಲ್ಲಿ ೧ ತಿಂಗಳ ಕಾಲ ಈ ಮಳಿಗೆಯಲ್ಲಿ ವಿದ್ಯಾರ್ಥಿಗಳಿಗೆ ೨೦ ಶೇ. ರಿಯಾಯಿತಿ ನೀಡಲಾಗುವುದು.
ಸುಚರಿತ ಶೆಟ್ಟಿ, ,ಅಧ್ಯಕ್ಷರು ಕೆಎಮ್‌ಎಫ್

LEAVE A REPLY

Please enter your comment!
Please enter your name here