ಸ್ಥಳೀಯ ಸಾನಿಧ್ಯದ ಪೂರ್ಣಾನುಗ್ರಹ ಇದೆ-ಡಾ| ಶ್ರೀ ಧರ್ಮಪಾಲನಾಥ ಸ್ವಾಮೀಜಿ
ರಾಜಕೀಯ ರಹಿತವಾಗಿ ಒಟ್ಟು ಸಮಾಜದ ಹಿತ ಬಯಸುವ ಕಾರ್ಯಕ್ರಮ – ಸಂಜೀವ ಮಠಂದೂರು
ಪುತ್ತೂರಿನಲ್ಲಿ ಚಾರಿತ್ರಿಕ ಇತಿಹಾಸ ನಿರ್ಮಾಣವಾಗಬೇಕು – ಚಿದಾನಂದ ಬೈಲಾಡಿ
ಪುತ್ತೂರು:ಇನ್ನೊಬ್ಬರ ಬಗ್ಗೆ ಮಾತನಾಡುವ ಕೆಲಸ ಕಾರ್ಯ ಮಾಡದೆ, ಸಮಯ ವ್ಯರ್ಥ ಮಾಡದೆ ಸಿಕ್ಕಿದ ಅವಕಾಶವನ್ನು ಸದುಪಯೋಗ ಮಾಡಿಕೊಂಡು ಭೈರವೈಕ್ಯ ಶ್ರೀ ಡಾ| ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ 78ನೇ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ. ಸಂಘಟಿತ ಪ್ರಯತ್ನದಿಂದ ಕಾರ್ಯಕ್ರಮ ಯಶಸ್ಸಾಗಬೇಕು ಎಂದು ಜಯಂತ್ಯೋತ್ಸವ ಸಂಸ್ಮರಣಾ ಜಿಲ್ಲಾ ಸಮಿತಿ ಗೌರವಾಧ್ಯಕ್ಷರಾಗಿರುವ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಹೇಳಿದರು.
ಜ.22ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯಲ್ಲಿ ಜರುಗಲಿರುವ, ಭೈರವೈಕ್ಯ ಶ್ರೀ ಡಾ| ಬಾಲಗಂಗಾಧರನಾಥ ಸ್ವಾಮೀಜಿಯವರ 78ನೇ ಜಯಂತ್ಯೋತ್ಸವ, ಶ್ರೀ ಆದಿ ಚುಂಚನಗಿರಿ ಮಠದ ಪೀಠಾಧ್ಯಕ್ಷರಾಗಿ 10 ವರ್ಷ ಪೂರೈಸಿದ ಡಾ|ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ದಶಮಾನೋತ್ಸವ, ಮಂಗಳೂರು ಶಾಖಾ ಮಠದ ಡಾ| ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರಿಂದ ರಚಿಸಲ್ಪಟ್ಟ ‘ಡಾ| ಬಾಲಗಂಗಾಧರನಾಥ ಶ್ರೀಗಳ ಸಂಸ್ಕಾರ, ಸಂಸ್ಕೃತಿ’ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದ ಅಂಗವಾಗಿ ಜ.3ರಂದು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದ ಚುಂಚಶ್ರೀ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆ ಮತ್ತು ಗ್ರಾಮ ಮಟ್ಟಕ್ಕೆ ಆಮಂತ್ರಣ, ಸ್ಟಿಕ್ಕರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶ್ರೀಗಳ ಜಯಂತ್ಯೋತ್ಸವ ರಾಜ್ಯದಲ್ಲೇ ಅದ್ಭುತ ಕಾರ್ಯಕ್ರಮ ಎಂದು ತೋರಿಸಿಕೊಡಬೇಕು. ಆಗ ಇದು ವಿಧಾನ ಸಭೆಯ ಒಳಗೂ ಪ್ರತಿನಿಧಿಸುತ್ತದೆ.ನಾನೂ ಸಹಕಾರ ನೀಡುತ್ತೇನೆ ಎಂದು ಹೇಳಿದ ಡಿ.ವಿ.ಎಸ್.,ಸಮಾಜ ಬಾಂಧವರ ಸಹಕಾರವೂ ಬೇಕು.ಅದಕ್ಕಾಗಿ ನಮ್ಮೆಲ್ಲ ಕಾರ್ಯಕ್ರಮದಲ್ಲಿ ಹೊಸತನ ಬೇಕು.ಇದಕ್ಕಾಗಿ ಕಲೆಕ್ಟಿವ್ ವರ್ಕಿಂಗ್ ಸ್ಟೈಲ್ ಇರಬೇಕು.ಸಂಘಟಿತ ಪ್ರಯತ್ನವೇ ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಗಲಿದೆ.ಕಾರ್ಯಕ್ರಮದ ಯಶಸ್ಸಿಗೆ ಅವರವರು ಶಕ್ತಿ ಮೀರಿ ಪ್ರಯತ್ನ ಮಾಡಬೇಕು ಎಂದರು.
ಸ್ಥಳೀಯ ಸಾನಿಧ್ಯದ ಪೂರ್ಣಾನುಗ್ರಹ ಇದೆ: ಆದಿ ಚುಂಚನಗಿರಿ ಮಂಗಳೂರು ಶಾಖಾ ಮಠದ ಡಾ.ಶ್ರೀ ಧರ್ಮಪಾಲನಾಥ ಶ್ರೀಗಳು ಕಾರ್ಯಕ್ರಮದ ಯಶಸ್ಸಿಗೆ ಮಾರ್ಗದರ್ಶನ ನೀಡಿದರು. ಗೌಡ ಸಮಾಜದ ಪ್ರತಿಯೊಂದು ಕಾರ್ಯಕ್ರಮದ ಮೂಲ ಮಹಾಲಿಂಗೇಶ್ವರ ದೇವರ ಸನ್ನಿಧಿಯಿಂದಲೇ ಆಗಿದೆ. ಇಲ್ಲಿಂದಲೇ ಗೌಡ ಸಂಘದ ಪ್ರತಿಯೊಂದು ಕಾರ್ಯಕ್ರಮ ಆಗಿದ್ದರಿಂದ ಎಲ್ಲವೂ ಯಶಸ್ವಿಯಾಗಿದೆ. ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ, ಒಕ್ಕಲಿಗ ಸ್ವಸಹಾಯ ಸಂಘವು ಉತ್ತರೋತ್ತರ ಅಭಿವೃದ್ಧಿ ಹೊಂದುತ್ತಿದೆ. ಹಾಗಾಗಿ ಸ್ಥಳೀಯ ಸಾನಿಧ್ಯ ಶ್ರೀ ಮಹಾಲಿಂಗೇಶ್ವರ ದೇವರ ಪೂರ್ಣಾನುಗ್ರಹ ಇದೆ. ಮುಂದೆ ನಡೆಯುವ ಜಯಂತ್ಯೋತ್ಸವ ಕಾರ್ಯಕ್ರಮವು ಶ್ರೀ ಮಹಾಲಿಂಗೇಶ್ವರ ದೇವರ ಸಾನಿಧ್ಯದಲ್ಲೇ ನಡೆಯುತ್ತಿದೆ.ಈ ನಿಟ್ಟಿನಲ್ಲಿ ಸಮಾಜ ಬಾಂಧವರೆಲ್ಲರ ಮನದಲ್ಲಿ ಜಯಂತ್ಯೋತ್ಸವದ ಕಲ್ಪನೆಗಳನ್ನು ಇಟ್ಟುಕೊಂಡು ನನ್ನ ಕಾರ್ಯಕ್ರಮ, ನನ್ನ ಮನೆಯ ಕಾರ್ಯಕ್ರಮ ಎಂಬ ನೆಲೆಯಲ್ಲಿ ಯಶಸ್ವಿಗೊಳಿಸಿ.ಒಂದು ಮಾದರಿಯಾದ ದಿವ್ಯ ಸಂದೇಶ ಕೊಡುವ ಕಾರ್ಯಕ್ರಮ ಆಗಬೇಕೆಂದು ನನ್ನ ಮಹದಾಸೆಯಾಗಿದೆ ಎಂದರು.
ರಾಜಕೀಯ ರಹಿತವಾಗಿ ಒಟ್ಟು ಸಮಾಜದ ಹಿತ ಬಯಸುವ ಕಾರ್ಯಕ್ರಮ: ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಸಮಾಜದ ಪೀಠದ ವಿಚಾರವನ್ನು ಕರ್ನಾಟಕಕ್ಕೆ ಬಿತ್ತರಿಸುವ ಕಾರ್ಯಕ್ರಮ ಪುತ್ತೂರಿನಲ್ಲಿ ನಡೆಯುತ್ತದೆ. 78ನೇ ಜಯಂತ್ಯೋತ್ಸವ ಪುತ್ತೂರಿನಲ್ಲಿ ಯಾಕೆ ಎಂಬ ಜಿಜ್ಞಾಸೆ ಇರಬಹುದು. ಮುಂದಿನ ದಿನಗಳಲ್ಲಿ ಬಹುಸಂಖ್ಯಾತರು ತಮ್ಮ ಛಾಪನ್ನು ತೋರಿಸಬೇಕು. ಈಗಾಗಲೇ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ಸ್ಥಾಪನೆ ಸೂರ್ತಿ ಕೊಟ್ಟಿದೆ. ಒಕ್ಕಲಿಗರು ಒಕ್ಕಲುತನ ಮಾತ್ರವಲ್ಲ ಕತ್ತಿ ಹಿಡಿಯಲು, ಕುದುರೆ ಏರಲು, ನೇಣುಗಂಬ ಎರಲೂ ಸಿದ್ಧ. ಆಗ ಪ್ರಜಾಪ್ರಭುತ್ವದಲ್ಲಿ ನಮ್ಮನ್ನು ಗುರುತಿಸುತ್ತಾರೆ. ಸಂಖ್ಯೆಯ ಆಧಾರದಲ್ಲಿ ಸ್ಥಾನಮಾನ ಸಿಗುತ್ತದೆ. ಯುವ ಸಮುದಾಯ ಮುಂದೆ ನಿಂತು ಈ ಸಮಾಜಕ್ಕೆ ಆದ್ಯತೆ ಕೊಡಬೇಕು. ಅದೇ ರೀತಿ ಕಾರ್ಯಕ್ರಮದಲ್ಲಿ ಶ್ರೀಗಳಿಗೆ ನೀಡಿದ ಕೊಡುಗೆ ಪೀಠಕ್ಕೆ ಕೊಡುವ ಹೃದಯ ಶ್ರೀಮಂತಿಕೆಗೆ ಸಮಾನವಾಗಲಿದೆ. ಹಾಗಾಗಿ ಜಯಂತ್ಯೋತ್ಸವ ಕಾರ್ಯಕ್ರಮ ಸಂದೇಶ ಕೊಡುವ, ಭಾವನಾತ್ಮಕ ಕಾರ್ಯಕ್ರಮ ಆಗಬೇಕು. ನಮ್ಮ ಸಮುದಾಯದ ರಾಜಕೀಯ ರಹಿತವಾಗಿ, ಒಟ್ಟು ಸಮಾಜದ ಹಿತ ಬಯಸುವ ಒಕ್ಕಲಿಗ ಸಮಾಜಕ್ಕೆ ದಿಕ್ಕು ದಿಸೆ ತೋರಿಸುವ ಕಾರ್ಯಕ್ರಮ ಆಗಬೇಕು ಎಂದರು.
ಪುತ್ತೂರಿನಲ್ಲಿ ಚಾರಿತ್ರಿಕ ಇತಿಹಾಸ ನಿರ್ಮಾಣವಾಗಬೇಕು: ಜಯಂತ್ಯೋತ್ಸವ ಸಂಸ್ಮರಣ ಸಮಿತಿ ಜಿಲ್ಲಾ ಸಂಚಾಲಕ ಚಿದಾನಂದ ಬೈಲಾಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಪುತ್ತೂರಿನಲ್ಲಿ ಚಾರಿತ್ರಿಕ ಇತಿಹಾಸ ಆಗಬೇಕೆಂಬ ನಿಟ್ಟಿನಲ್ಲಿ ಜಯಂತ್ಯೋತ್ಸವ ಯಶಸ್ವಿಯಾಗಿ ನಡೆಯಬೇಕು. ಈಗಾಗಲೇ ಕಾರ್ಯಕ್ರಮದ ಪೂರ್ವ ಸಿದ್ಧತೆಯಾಗಿ 10 ಸಭೆಗಳನ್ನು ಮಾಡಿದ್ದೇವೆ. 7 ವಲಯಗಳಲ್ಲಿ ಪೂರ್ವ ಸಿದ್ದತಾ ಕಾರ್ಯಕ್ರಮ ನಡೆಯಲಿದೆ. ಜಯಂತ್ಯೋತ್ಸವ ಕಾರ್ಯಕ್ರಮದ ದಿನ ಶ್ರೀ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರ ದಶಮಾನೋತ್ಸವ ಕಾರ್ಯಕ್ರಮ ನಡೆಯಲಿದ್ದು, ಇದರ ಅಂಗವಾಗಿ ಶ್ರೀಗಳಿಗೆ ಬೆಳ್ಳಿಯ ತುಲಾಭಾರ ಮಾಡಲಾಗುವುದು. ಮಂಗಳೂರು ಶಾಖಾ ಮಠದ ಡಾ| ಧರ್ಮಪಾಲನಾಥ ಸ್ವಾಮೀಜಿಯವರು ಬರೆದ ‘ಡಾ.ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಸಂಸ್ಕಾರ, ಸಂಸ್ಕೃತಿ ಗ್ರಂಥ ಲೋಕಾರ್ಪಣೆ ಮಾಡಲಾಗುವುದು. ಕೊಂಬೆಟ್ಟು ಶ್ರೀ ಮಹಾಲಿಂಗೇಶ್ವರ ಐಟಿಐ ಸಭಾಭವನದ ಉದ್ಘಾಟನಾ ಕಾರ್ಯಕ್ರಮವೂ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳ ಯಶಸ್ವಿಗಾಗಿ ವಿವಿಧ ಉಪಸಮಿತಿಗಳನ್ನು ಮಾಡಲಾಗಿದೆ ಎಂದರು.
ಸುಳ್ಯ ಗೌಡ ಯುವ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್, ಕಡಬ ತಾಲೂಕಿನ ನಿಯೋಜಿತ ಅಧ್ಯಕ್ಷ ಸುರೇಶ್ ಬೈಲು, ಬಂಟ್ವಾಳ ತಾಲೂಕಿನ ಅಧ್ಯಕ್ಷ ಮೋನಪ್ಪ ಗೌಡ , ಉಡುಪಿ ತಾಲೂಕಿನ ಸುರೇಶ್, ಬೆಳ್ತಂಗಡಿ ತಾಲೂಕಿನ ಅಧ್ಯಕ್ಷ ಬಾಲಕೃಷ್ಣ ಕೇರಿಮಾರ್, ಮಂಗಳೂರು ತಾಲೂಕಿನ ಗೌಡ ಯಾನೆ ಒಕ್ಕಲಿಗರ ಸಂಘದ ಅಧ್ಯಕ್ಷ ಸದಾನಂದ ಗೌಡ ಡಿ.ಪಿ, ಸಂಸ್ಮರಣಾ ಸಮಿತಿ ತಾಲೂಕು ಸಂಚಾಲಕ ದಿನೇಶ್ ಮೆದು ತಮ್ಮ ಅಭಿಪ್ರಾಯ ಮಂಡಿಸಿ ತಾಲೂಕಿನಿಂದ ಬರುವ ಸಂಖ್ಯೆ ಕುರಿತು ಮಾಹಿತಿ ನೀಡಿದರು.ಉಪಸಮಿತಿ ಸಂಚಾಲಕರು ತಮ್ಮ ತಮ್ಮ ತಯಾರಿ ಕುರಿತು ಮಾಹಿತಿ ನೀಡಿದರು. ಹೊರೆಕಾಣಿಕೆ ಸಮಿತಿ ಸಂಚಾಲಕ ಪ್ರವೀಣ್ ಕುಂಟ್ಯಾನ, ಮೆರವಣಿಗೆ ಸಮಿತಿ ಸಂಚಾಲಕ ರಾಧಾಕೃಷ್ಣ ಗೌಡ ನಂದಿಲ, ಪ್ರಚಾರ ಸಮಿತಿಯ ಸಂಚಾಲಕ ಎ.ವಿ.ನಾರಾಯಣ, ಆರ್ಥಿಕ ಸಮಿತಿ ಸಂಚಾಲಕ ಉಮೇಶ್ ಬೆಳ್ಳಾರೆ, ಆಹಾರ ಸಮಿತಿ ಸಂಚಾಲಕ ಸೀತಾರಾಮ ಪೆರಿಯತ್ತೋಡಿ, ವೇದಿಕೆ ಸಮಿತಿ ಸಂಚಾಲಕ ಪುರುಷೋತ್ತಮ ಮುಂಗ್ಲಿಮನೆ, ಸ್ವಯಂಸೇವಕ ಸಮಿತಿ ಸಂಚಾಲಕ ಸುಧಾಕರ್, ಬ್ಯಾನರ್ ಕುರಿತು ಅಮರನಾಥ್ ಬಪ್ಪಳಿಗೆ ಮಾಹಿತಿ ನೀಡಿದರು. ದ.ಕ ಕೊಡಗು ಗೌಡ ಅಭಿವೃದ್ದಿ ಸಂಘ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಮಾಜಿ ಶಾಸಕ ಗಂಗಾಧರ ಗೌಡ ಬೆಳ್ತಂಗಡಿ, ದ ಕ ಗೌಡ ವಿದ್ಯಾ ಸಂಘದ ಅಧ್ಯಕ್ಷ ಧನಂಜಯ ಅಡ್ಪಂಗಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಂಸ್ಮರಣಾ ಸಮಿತಿ ಕಾರ್ಯದರ್ಶಿ ನಾಗೇಶ್ ಕಡೆಂಜಿ ವಂದಿಸಿದರು.
ಡಿಕೆಶಿಯವರಲ್ಲಿ ಹೋಗುತ್ತೇನೆ ಕುಮಾರಸ್ವಾಮಿಯವರಲ್ಲೂ ಹೋಗುತ್ತೇನೆ ಆದರೆ ಬಿಜೆಪಿಯಲ್ಲೇ ಇರುತ್ತೇನೆ
ನಿಮ್ಮಲ್ಲಿಂದ ಒಂದು ದಿನ ಯಾರಾದರೂ ಬೆಂಗಳೂರಿಗೆ ಬರುವವರಿದ್ದರೆ ಬರಬಹುದು. ಮಂತ್ರಿಗಳನ್ನು, ಪ್ರಮುಖರನ್ನು ಭೇಟಿ ಮಾಡಿ ಅವರನ್ನು ಕಾರ್ಯಕ್ರಮಕ್ಕೆ ಕರೆಸುವ ವ್ಯವಸ್ಥೆ ಮಾಡೋಣ. ನಾನು ಕಾಂಗ್ರೆಸ್ನ ಡಿ.ಕೆ.ಶಿವಕುಮಾರ್ ಅವರಲ್ಲಿಗೂ ಹೋಗುತ್ತೇನೆ. ಜನತಾದಳದ ಕುಮಾರ ಸ್ವಾಮಿ ಅವರಲ್ಲಿಗೂ ಹೋಗುತ್ತೇನೆ. ಆದರೆ ನಾನು ಮಾತ್ರ ಬಿಜೆಪಿಯಲ್ಲೇ ಇರುತ್ತೇನೆ. ಯಾವುದೇ ವ್ಯತ್ಯಾಸ ಇಲ್ಲ.ಈ ಜಯಂತ್ಯೋತ್ಸವಕ್ಕಾಗಿ ಎಲ್ಲರ ಮನೆ ಮುಂದೆ ಹೋಗಿಯೇ ಹೋಗುತ್ತೇನೆ. ಅವರನ್ನು ಕಾರ್ಯಕ್ರಮಕ್ಕೆ ಕರೆಸುವ ನಿಟ್ಟಿನಲ್ಲಿ ನನ್ನೆಲ್ಲ ಪ್ರಯತ್ನ ಮಾಡುತ್ತೇನೆ. ಆದರೆ ರಾಜಕೀಯ ವಲಯದಲ್ಲಿ ನಾನು ಬಿಜೆಪಿ ಬಿಟ್ಟು ಹೋಗುವುದಿಲ್ಲ
-ಡಿ.ವಿ.ಸದಾನಂದ ಗೌಡ, ಮಾಜಿ ಮುಖ್ಯಮಂತ್ರಿ