ಕಂದಾಯ ಇಲಾಖೆಯ ನಿವೃತ್ತ ಉದ್ಯೋಗಿ ನಾಗೇಶ್ ಕೆ.ರವರಿಗೆ ತಾ|ಸರಕಾರಿ ವಾಹನ ಚಾಲಕರ ಸಂಘದಿಂದ ಬೀಳ್ಕೊಡುಗೆ, ಸನ್ಮಾನ

0

ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ

ಪುತ್ತೂರು: ಕಂದಾಯ ಇಲಾಖೆಯಲ್ಲಿ ಹಲವಾರು ವರ್ಷ ಕರ್ತವ್ಯ ನಿರ್ವಹಿಸಿ ಇತ್ತೀಚೆಗೆ ಸೇವಾ ನಿವೃತ್ತಿ ಹೊಂದಿದ ತಾಲೂಕು ಸರಕಾರಿ ನೌಕರರ ಸಂಘದ ಕೋಶಾಧಿಕಾರಿಯಾಗಿರುವ ನಾಗೇಶ್ ಕೆ.ರವರಿಗೆ ಬೀಳ್ಕೊಡುಗೆ ಸನ್ಮಾನ ಕಾರ್ಯಕ್ರಮ ಜ.9 ರಂದು ತಾಲೂಕು ಸರಕಾರಿ ನೌಕರರ ಸಂಘದ ಸಭಾ ಭವನದಲ್ಲಿ ಜರಗಿತು.

ನಾಗೇಶ್‌ರವರೋರ್ವ ಮಾದರಿ ಅಧಿಕಾರಿ-ನವೀನ್ ಭಂಡಾರಿ:

ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಮಾತನಾಡಿ, ಸರಕಾರಿ ನೌಕರರಾಗಲು ಎಲ್ಲರಿಗೂ ಅವಕಾಶ ಸಿಗುವುದಿಲ್ಲ. ಸರಕಾರಿ ನೌಕರರು ಮಾದರಿ ಅಧಿಕಾರಿ ಅಥವಾ ಮಾದರಿ ನೌಕರ ಎಂಬ ಪದವಿ ಸಿಗಬೇಕೆಂಬುದು ಎಲ್ಲಾ ಸರಕಾರಿ ನೌಕರರ ಆಸೆಯಾಗಿದೆ. ಈ ನಿಟ್ಟಿನಲ್ಲಿ ಕಂದಾಯ ಇಲಾಖೆಯ ನಾಗೇಶ್ ರವರು ಮಾದರಿ ಅಧಿಕಾರಿ ಎಂಬ ಹೆಸರನ್ನು ಗಳಿಸಿರುವುದು ಹೆಮ್ಮೆ ಎನಿಸಿದೆ. ಅದರಂತೆ ಎಲ್ಲಾ ಸರಕಾರಿ ನೌಕರರು ನಾಗೇಶ್ ರವರಂತೆ ಎಲ್ಲರಿಗೂ ಮಾದರಿಯಾಗಬೇಕು ಎಂದರು.

ವೃತ್ತಿ ಜೀವನದಲ್ಲಿ ಉಪ ತಹಶೀಲ್ದಾರ್ ಆಗಿ ನಿವೃತ್ತಿ ಹೊಂದಬೇಕಿತ್ತು-ಮೌರಿಸ್ ಮಸ್ಕರೇನ್ಹಸ್:

ತಾಲೂಕು ಸರಕಾರಿ ನೌಕರರ ಸಂಘದ ನೂತನ ಕಟ್ಟಡದ ರೂವಾರಿ ಹಾಗೂ ನಿಕಟಪೂರ್ವ ಅಧ್ಯಕ್ಷ ಮೌರಿಸ್ ಮಸ್ಕರೇನ್ಹಸ್ ಮಾತನಾಡಿ, ನಾಗೇಶ್ ರವರು ಬಡತನದ ಹಿನ್ನೆಲೆಯಿಂದ ಬಂದವರು. ಚಿಕ್ಕಮಗಳೂರಿನಲ್ಲಿ ಸೇವೆ ಆರಂಭಿಸಿ ಬಳಿಕ ಎಲ್ಲೆಡೆ ಸೇವೆ ನಿರ್ವಹಿಸಿದ ಅವರು ಸರಕಾರಿ ಕೆಲಸ ದೇವರ ಕೆಲಸ ಎಂಬಂತೆ ಭಾವಿಸಿದವರು. ಯಾವುದೇ ಫಲಾಪೇಕ್ಷೆಯಿಲ್ಲದೆ ಸಾವಿರಾರು ಕಡತಗಳನ್ನು ಕಾನೂನಿನ ಚೌಕಟ್ಟಿನಡಿಯಲ್ಲಿ ವಿಲೇವಾರಿ ಮಾಡಿ ಜನರಿಗೆ ಸೂಕ್ತ ಸಮಯದಲ್ಲಿ ಸ್ಪಂದನೆ ನೀಡಿದಂತಹ ವ್ಯಕ್ತಿ ನಾಗೇಶ್ ರವರು. ತಮ್ಮ ವೃತ್ತಿ ಜೀವನದಲ್ಲಿ ಉಪತಹಶೀಲ್ದಾರ್ ಆಗಿ ನಿವೃತ್ತಿ ಹೊಂದಬೇಕಿತ್ತು ಎನ್ನುವ ಬೇಸರ ನಾಗೇಶ್ ರವರಲ್ಲಿದೆ. ಆದರೂ ಜನಸಾಮಾನ್ಯರ ಹೃದಯದಲ್ಲಿ ಈಗಲೂ ಅವರೋರ್ವ ಉತ್ತಮ ಅಧಿಕಾರಿ ಎನ್ನುವ ಗೌರವವನ್ನು ಇಟ್ಟುಕೊಂಡಿರುವುದು ಅವರ ಸೇವಾ ಕೈಂಕರ್ಯಕ್ಕೆ ಸಾಕ್ಷಿಯಾಗಿದೆ ಎಂದರು.

ಕಂದಾಯ ಇಲಾಖೆಯಲ್ಲಿನ ವಿಷಯಗಳನ್ನು ಇಂಚಿಂಚು ತಿಳಿದ ವ್ಯಕ್ತಿ ನಾಗೇಶ್‌ರವರು-ಕೆ.ಕೃಷ್ಣಪ್ಪ:

ತಾಲೂಕು ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಕೆ.ಕೃಷ್ಣಪ್ಪ ಮಾತನಾಡಿ, ಆಡಳಿತಾರೂಢ ಸರಕಾರದಲ್ಲಿ ಸರಕಾರಿ ನೌಕರರ ಪಾತ್ರ ಬಹಳ ಮಹತ್ವದ್ದು. ಇಲಾಖೆಯಲ್ಲಿ ಕೆಲಸ ಮಾಡುತ್ತಿರುವಾಗ ಮೇಲಾಧಿಕಾರಿಗಳ ಒತ್ತಡ, ರಾಜಕಾರಣಿಗಳ ಒತ್ತಡದ ನಡುವೆ ಕೆಲಸ ಮಾಡಬೇಕಾಗುತ್ತದೆ. ಇತಿಹಾಸ ತಿಳಿಯದವರು ಇತಿಹಾಸ ಸೃಷ್ಟಿಸಲು ಸಾಧ್ಯವಾಗದು. ಕಂದಾಯ ಇಲಾಖೆಯಲ್ಲಿನ ವಿಷಯಗಳನ್ನು ಇಂಚಿಂಚು ತಿಳಿದ ವ್ಯಕ್ತಿ ನಾಗೇಶ್ ರವರು. ಸರಕಾರಿ ಇಲಾಖೆಯಲ್ಲಿ ನಗುಮುಖದ ಸೇವೆ ನೀಡುವ ಮೂಲಕ ನಿವೃತ್ತಿ ಹೊಂದಿದ ನಾಗೇಶ್ ರವರ ನಿವೃತ್ತಿ ಬದುಕು ಹಸನಾಗಲಿ ಎಂದು ಹೇಳಿ ಶುಭ ಹಾರೈಸಿದರು.

ನಾಗೇಶ್‌ರವರೋರ್ವ ‘ಸ್ಟ್ರಿಕ್ಟ್ ಆಫೀಸರ್’ ಎಂಬುದಾಗಿ ಗುರುತಿಸಲ್ಪಟ್ಟಿದ್ದಾರೆ-ಶಿವಾನಂದ ಆಚಾರ್ಯ:

ರಾಜ್ಯ ಸರಕಾರಿ ನೌಕರರ ಸಂಘದ ಪುತ್ತೂರು ಶಾಖೆಯ ಅಧ್ಯಕ್ಷ ಶಿವಾನಂದ ಆಚಾರ್ಯರವರು ಮಾತನಾಡಿ, ತಮ್ಮ ಸರಳತೆಯ ವೇಷಭೂಷಣ, ಇಲಾಖಾ ಕೆಲಸದಲ್ಲಿನ ನಿಯತ್ತು ಇವೆಲ್ಲವೂ ನಿವೃತ್ತ ನಾಗೇಶ್‌ರವರೋರ್ವ ‘ಸ್ಟ್ರಿಕ್ಟ್ ಆಫೀಸರ್’ ಎಂಬುದಾಗಿ ಗುರುತಿಸಲ್ಪಟ್ಟಿದ್ದಾರೆ. ನಾಗೇಶ್‌ರವರ ಕಾರ್ಯವೈಖರಿಗೆ ಜಿಲ್ಲಾ ಸರ್ವೋತ್ತಮ ಪ್ರಶಸ್ತಿಗೆ ಭಾಜನರಾಗಬೇಕಿತ್ತು. ತಾಲೂಕು ಸರಕಾರಿ ನೌಕರರ ಸಂಘದ ಕೋಶಾಧಿಕಾರಿಯಾಗಿದ್ದು ಸಂಘವನ್ನು ರಾಜ್ಯ ಮಟ್ಟದಲ್ಲಿ ಗುರುತಿಸುವಂತೆಯೂ ನಾಗೇಶ್‌ರವರು ಮಾಡಿರುತ್ತಾರೆ. ಅಪ್ಪಟ ದೇವರ ಭಕ್ತರಾಗಿರುವ ನಾಗೇಶ್‌ರವರ ಮುಂದಿನ ನಿವೃತ್ತಿ ಬದುಕು ಉತ್ತಮವಾಗಿರಲಿ ಎಂದು ಶುಭ ಹಾರೈಸಿದರು.

ನಾಗೇಶ್‌ರವರು ನಗುಮುಖದಿಂದ ಕರ್ತವ್ಯ ನಿರ್ವಹಿಸಿ ಮಾದರಿ-ಪುರುಷೋತ್ತಮ್ ಬಿ:

ತಾಲೂಕು ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಪುರುಷೋತ್ತಮ್ ಬಿ. ಮಾತನಾಡಿ, ಪ್ರಜಾಪ್ರಭುತ್ವದಲ್ಲಿನ ಮೂರು ಅಂಗಗಳ ಪೈಕಿ ಕಾರ್ಯಾಂಗ ಇಲಾಖೆಯಡಿಯಲ್ಲಿ ಸರಕಾರಿ ನೌಕರರು ಸೇವೆ ಸಲ್ಲಿಸುವವರಾಗಿದ್ದಾರೆ. ಬಡವರು, ಶ್ರೀಮಂತರು ಎನ್ನದೆ ಸರಕಾರಿ ನೌಕರರು ಒಂದಲ್ಲ ಒಂದು ರೀತಿಯಲ್ಲಿ ತಾಲೂಕು ಕಛೇರಿಗೆ ಹೋಗಲೇ ಬೇಕಾಗುತ್ತದೆ. ಕಂದಾಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ನಾಗೇಶ್‌ರವರು ಎಲ್ಲರೊಂದಿಗೆ ನಗುಮುಖದಿಂದ ಕರ್ತವ್ಯ ನಿರ್ವಹಿಸಿ ಮಾದರಿಯಾಗಿದ್ದು ಅವರ ನಿವೃತ್ತ ಬದುಕು ಆಯುರಾರೋಗ್ಯದಿಂದ ಕೂಡಿರಲಿ ಎಂದು ಹಾರೈಸಿದರು.

ತಾಲೂಕು ಸರಕಾರಿ ವಾಹನ ಚಾಲಕರ ಸಂಘದ ಮಾಜಿ ಅಧ್ಯಕ್ಷ ಸೀತಾರಾಮ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹರಿಣಿ ಗೌಡ ಹಾಗೂ ಕರಣ್ ಗೌಡ ಪ್ರಾರ್ಥಿಸಿದರು. ತಾಲೂಕು ಸರಕಾರಿ ವಾಹನ ಚಾಲಕರ ಸಂಘದ ಅಧ್ಯಕ್ಷ ಗಿರಿಧರ್ ಗೌಡ ಸ್ವಾಗತಿಸಿ, ನಿವೃತ್ತ ಸರಕಾರಿ ನೌಕರರ ಸಂಘದ ಸದಸ್ಯ ಕಮಾಲಾಕ್ಷ ವಂದಿಸಿದರು. ತಾಲೂಕು ಸರಕಾರಿ ವಾಹನ ಚಾಲಕರ ಸಂಘದ ಸದಸ್ಯ ಲೀಲಯ್ಯ ಸನ್ಮಾನಿತರ ಸನ್ಮಾನ ಪತ್ರ ವಾಚಿಸಿದರು. ತಾಲೂಕು ಸರಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಅಬ್ರಹಾಂ ಎಸ್.ಎ ಕಾರ್ಯಕ್ರಮ ನಿರೂಪಿಸಿದರು.

ಗುಡ್‌ಬೈ ಟು ಟೆನ್ಸನ್..ವೆಲ್‌ಕಂ ಟು ಪೆನ್ಸನ್..

ಒಂದೆಡೆ ಸಾರ್ವಜನಿಕರಿಂದ ಒತ್ತಡ, ಮತ್ತೊಂದೆಡೆ ಮೇಲಾಧಿಕಾರಿಗಳಿಂದ ಒತ್ತಡ ಬಂದಾಗ ಕೆಲಸದಲ್ಲಿ ಟೆನ್ಸನ್ ಕಾಣಿಸುವುದು ಸಾಮಾನ್ಯ. ಆದರೆ ಮೇಲಾಧಿಕಾರಿಗಳು ನನ್ನಲ್ಲಿ ಒತ್ತಡ ಹಾಕದೆ ತುಂಬಾ ಬೆಂಬಲ ನೀಡಿರುತ್ತಾರೆ. ಯಾವುದೇ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಇಲಾಖೆಗೆ ಬರುವಂತಹ ಸಾರ್ವಜನಿಕರನ್ನು ನಾವು ದೇವರಂತೆ ಕಾಣಬೇಕು. ಕೆಲಸದಲ್ಲಿ ಯಾವುದೇ ತಪ್ಪುಗಳನ್ನು ಎಸಗದೆ ತುಂಬಾ ಪ್ರಾಮಾಣಿಕತೆಯಿಂದ ನಿರ್ವಹಿಸಬೇಕು. ಕೆಲಸ ಕಾರ್ಯಗಳಲ್ಲಿ ಗಡಿಬಿಡಿ ಮಾಡಿ ತಪ್ಪುಗಳನ್ನು ಮಾಡುವ ಬದಲು ಹೆಚ್ಚುವರಿ ಸಮಯ ತೆಗೆದುಕೊಂಡು ಕೆಲಸ ಮಾಡಿದಾಗ ತಪ್ಪುಗಳು ಆಗಲಾರದು. ಇದೀಗ ತಾನು ಕರ್ತವ್ಯದಿಂದ ನಿವೃತ್ತಿ ಹೊಂದಿದ್ದು ಗುಡ್‌ಬೈ ಟು ಟೆನ್ಸನ್, ವೆಲ್‌ಕಂ ಟು ಪೆನ್ಸನ್ ಎಂದು ಹೇಳಲು ಇಚ್ಚಿಸುತ್ತೇನೆ.

-ನಾಗೇಶ್ ಕೆ, ನಿವೃತ್ತ ಕಂದಾಯ ಇಲಾಖೆಯ ಉದ್ಯೋಗಿ

ಮೌನ ಪ್ರಾರ್ಥನೆ..

ಇತ್ತೀಚೆಗೆ ಅಗಲಿದ ಪಿಡಬ್ಲ್ಯೂಡಿ ಇಲಾಖೆಯ ನಿವೃತ್ತ ವಾಹನ ಚಾಲಕ ಜೋನ್ ಡಿ’ಸೋಜ ಹಾಗೂ ಆರೋಗ್ಯ ಇಲಾಖೆಯಲ್ಲಿನ ನಿವೃತ್ತ ವಾಹನ ಚಾಲಕ ಮೈಕಲ್ ಡಿ’ಸೋಜರವರ ಆತ್ಮಕ್ಕೆ ಚಿರಶಾಂತಿ ಕರುಣಿಸಲೆಂದು ಭಗವಂತನಲ್ಲಿ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಿ ಶ್ರದ್ಧಾಂಜಲಿ ಕೋರಲಾಯಿತು.

LEAVE A REPLY

Please enter your comment!
Please enter your name here