ಪುತ್ತೂರು: ಪುತ್ತೂರು ಕಸಬಾ ಗ್ರಾಮದ ಸೂತ್ರಬೆಟ್ಟುವಿನಲ್ಲಿರುವ ಬಾಡಿಗೆ ಮನೆಯೊಂದರಿಂದ ನಗದು ಹಾಗೂ ಸೊತ್ತು ಕಳವು ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪುತ್ತೂರು ನಗರ ಪೊಲೀಸರು ಬಂಧಿಸಿದ್ದಾರೆ.
ಸವಣೂರು ಚಾಪಳ್ಳದ ಶಮೀರ್ ಮತ್ತು ಕೂರ್ನಡ್ಕದ ಮಹಮ್ಮದ್ ಮುಸ್ತಾಫ ಬಂಧಿತ ಆರೋಪಿಗಳಾಗಿದ್ದಾರೆ. ಇವರು ಜ.7ರಂದು ಹಾಡಹಗಲೇ ಸೂತ್ರಬೆಟ್ಟುವಿನಲ್ಲಿ ಬಟ್ಟೆ ವ್ಯಾಪಾರಿ ಗೋಪಿನಾಥ್ ಎಂಬವರ ಬಾಡಿಗೆ ಮನೆಯೊಳಗೆ ನುಗ್ಗಿ ರೂ.18 ಸಾವಿರ ನಗದು, ಟಿವಿ, ಯುಪಿಎಸ್ ಬ್ಯಾಟರಿ, ಇಸ್ತ್ರಿ ಪೆಟ್ಟಿಗೆ, 5 ಮೊಬೈಲ್‌ಗಳು, ಚಾರ್ಜರ್ ಲೈಟ್, ಬ್ಲೂಟೂತ್ ಸ್ಪೀಕರ್, ಶರ್ಟ್, ಜೀನ್ಸ್ ಪ್ಯಾಂಟ್, ವಾಚ್ ಕಳವು ಮಾಡಿದ್ದರು. ಈ ಬಗ್ಗೆ ಗೋಪಿನಾಥ್ ಅವರ ಸಹೋದರ ವಿವೇಕಾನಂದ ಯಾನೆ ಸತ್ಯನಾರಾಯಣ ಅವರು ನೀಡಿದ ದೂರಿನಂತೆ ಪುತ್ತೂರು ನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಜ.10ರಂದು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ. ಕಳವು ನಡೆದ ದಿನವೇ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಗಳಿಬ್ಬರ ಮಾಹಿತಿಯನ್ನು ಸ್ಥಳೀಯರು ಪೊಲೀಸರಿಗೆ ನೀಡಿದ್ದರು. ಅದೇ ಜಾಡು ಹಿಡಿದ ಪೊಲೀಸರು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳ್ಳರಿಗೆ ಸುಲಭವಾಗಿ ಸಿಕ್ಕಿದ ಮನೆ ಬೀಗದ ಕೀ
ಮೂಲತಃ ಮುಧರೈ ನಿವಾಸಿಗಳಾದ ಗೋಪಿನಾಥ್ ಮತ್ತು ವಿವೇಕಾನಂದ ಯಾನೆ ಸತ್ಯನಾರಾಯಣ ಅವರು ಸಹೋದರರಾಗಿದ್ದು, ಸೂತ್ರಬೆಟ್ಟುವಿನಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೊಂದಿದ್ದು ಬಟ್ಟೆ ವ್ಯಾಪಾರ ನಡೆಸುತ್ತಿದ್ದರು. ಜ.೪ರಂದು ತಾಯಿಗೆ ಅನಾರೋಗ್ಯ ಎಂದು ಊರಿಗೆ ತೆರಳಿದ್ದರು. ಊರಿಗೆ ತೆರಳುವ ಸಂದರ್ಭ ಎರಡು ಜೊತೆಯಿದ್ದ ಮನೆಯ ಬೀಗದ ಕೀ ಪೈಕಿ ಒಂದು ಜೊತೆಯನ್ನು ಮನೆಯ ಮುಂದೆ ನಿಲ್ಲಿಸಿದ ಬೈಕ್‌ನ ಬಾಕ್ಸ್‌ನ ಒಳಗೆ ಇರಿಸಿ ತೆರಳಿದ್ದರು. ಕಳ್ಳರು ಬೈಕ್‌ನ ಬಾಕ್ಸ್‌ನಲ್ಲಿದ್ದ ಕೀಯ ಮೂಲಕ ಮನೆಯ ಬೀಗ ತೆರೆದು ಸೊತ್ತುಗಳನ್ನು ಕಳವು ಮಾಡಿದ್ದರು. ಜ.೮ರಂದು ಗೋಪಿನಾಥ್ ಸಹೋದರರು ಬಂದು ನೋಡಿದಾಗ ಮನೆಯ ಬಾಗಿಲ ಬೀಗ ಹಾಕಿದ ಸ್ಥಿತಿಯಲ್ಲಿತ್ತಾದರೂ ಮನೆಯ ಒಳಗಡೆ ಹೋಗಿ ನೋಡಿದಾಗ ಬಟ್ಟೆಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಟಿವಿ ಸಹಿತ ಹಲವು ಸೊತ್ತುಗಳೂ ಕಾಣೆಯಾಗಿತ್ತು. ಕಳ್ಳರು ಮನೆಯ ಬಾಗಿಲು ಮುರಿಯದೆ, ಬೀಗ ಒಡೆಯದೆ ಸುಲಭವಾಗಿ ತಮ್ಮ ಕೈಚಳಕ ತೋರಿದ್ದರು.