ಪದ್ಮುಂಜ ಸರಕಾರಿ ಪ್ರೌಢಶಾಲೆಯ ಕಂಪ್ಯೂಟರ್ ಕೊಠಡಿಯಿಂದ 16 ಬ್ಯಾಟರಿಗಳ ಕಳವು

0

ಪುತ್ತೂರು: ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಪದ್ಮುಂಜ ಸರಕಾರಿ ಪ್ರೌಢಶಾಲೆಯ ಕಂಪ್ಯೂಟರ್ ಕೊಠಡಿಯಿಂದ ಸುಮಾರು 20 ಸಾವಿರ ರೂ.ಬೆಲೆ ಬಾಳುವ 16 ಬ್ಯಾಟರಿಗಳು ಕಳವುಗೊಂಡಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ.

ಶಾಲಾ ಕಟ್ಟಡದ ಕೊನೆಯ ಭಾಗದಲ್ಲಿರುವ ಗಣಕಯಂತ್ರ ಕೊಠಡಿಯಿಂದ ಬ್ಯಾಟರಿಗಳು ಕಳವುಗೊಂಡಿದೆ. ಈ ಕೊಠಡಿಯ ಬಾಗಿಲನ್ನು ವಿದ್ಯಾರ್ಥಿಗಳ ಗಣಕಯಂತ್ರ ತರಗತಿಯ ಸಮಯದಲ್ಲಿ ಮಾತ್ರ ತೆರೆಯಲಾಗುತಿತ್ತು. ಅದರಂತೆ ಡಿ.19ರಂದು ಕೊನೆಯ ಕಂಪ್ಯೂಟರ್ ತರಗತಿ ಇದ್ದು, ಆ ದಿನ ಸಂಜೆ 4 ಗಂಟೆಯ ವೇಳೆಗೆ ತರಗತಿ ಮುಗಿಸಿ ಕೊಠಡಿಗೆ ಬೀಗ ಹಾಕಿ ತೆರಳಲಾಗಿತ್ತು. ಆ ಬಳಿಕ ಜ.11ರಂದು ಮಧ್ಯಾಹ್ನ 12 ಗಂಟೆಗೆ ವಿದ್ಯಾರ್ಥಿಗಳಿಗೆ ಗಣಕಯಂತ್ರ ತರಗತಿ ನಡೆಸಲೆಂದು ಸದ್ರಿ ಕೊಠಡಿಯ ಬಳಿ ಶಿಕ್ಷಕರು ಹೋದ ವೇಳೆ ಕೊಠಡಿಯ ಶಟರ್ ಬಾಗಿಲಿಗೆ ಹಾಕಿದ್ದ ಬೀಗದ ಕೊಂಡಿ ತುಂಡರಿಸಿ ಬಾಗಿಲಿಗೆ ಸಿಕ್ಕಿಸಿರುವುದು ಕಂಡು ಬಂದಿದೆ. ಬಳಿಕ ಕೊಠಡಿಯ ಬಾಗಿಲು ತೆರೆದು ಒಳಗೆ ಪ್ರವೇಶಿಸಿ ನೋಡಿದಾಗ ಗಣಕ ಯಂತ್ರಗಳಿಂದ ಕಳಚಿ ಪ್ರತ್ಯೇಕವಾಗಿ ತೆಗೆದಿರಿಸಿದ್ದ 16 ಬ್ಯಾಟರಿಗಳು ಕಳವಾಗಿರುವುದು ಬೆಳಕಿಗೆ ಬಂದಿದೆ. ಸದರಿ ಕೊಠಡಿಯಲ್ಲಿರುವ ಉಳಿದ ಎಲ್ಲಾ ಸೊತ್ತುಗಳು ಯಥಾಸ್ಥಿತಿಯಲ್ಲಿವೆ. ಕಳವಾದ 16 ಬ್ಯಾಟರಿಗಳ ಅಂದಾಜು ಮೌಲ್ಯ 20 ಸಾವಿರ ರೂ.ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಶಾಲೆಯ ಚಿತ್ರಕಲಾ ಶಿಕ್ಷಕ ಸದಾನಂದ ಬಿರಾದಾರ ಎಂಬವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸರು ಕಲಂ: 454, 457, 380 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here