ಉಪ್ಪಿನಂಗಡಿ: ಚಿಕನ್ ಖಾದ್ಯದಲ್ಲಿ ಹುಳ -ಆರೋಪ: ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ವೈರಲ್-ಅಧಿಕಾರಿಗಳ ದಾಳಿ-ಹೊಟೇಲ್‌ಗೆ ಬೀಗ

0

ಉಪ್ಪಿನಂಗಡಿ: ಹುಳವಿದ್ದ ಚಿಕನ್ ಖಾದ್ಯವನ್ನು ಗ್ರಾಹಕರಿಗೆ ನೀಡಿದ್ದಾರೆಂಬ ಆಪಾದನೆಯ ಸಚಿತ್ರ ಮಾಹಿತಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿದ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ದ,ಕ ಜಿಲ್ಲಾಧಿಕಾರಿಯವರ ನಿರ್ದೇಶನದಂತೆ ಪುತ್ತೂರು ತಹಶೀಲ್ದಾರ್ ನೇತೃತ್ವದ ತಂಡ ದಾಳಿ ನಡೆಸಿ ಹೋಟೇಲನ್ನು ಮುಚ್ಚಿಸಿದ ಘಟನೆ ಉಪ್ಪಿನಂಗಡಿಯಿಂದ ವರದಿಯಾಗಿದೆ.

ಉಪ್ಪಿನಂಗಡಿಯ ಹಳೇ ಬಸ್ ನಿಲ್ದಾಣದ ಪರಿಸರದಲ್ಲಿನ ನ್ಯೂ ಸಿಟಿ ಲ್ಯಾಂಡ್ ಮಾಂಸಾಹಾರಿ ಹೋಟೇಲಲ್ಲಿ ಗ್ರಾಹಕನಿಗೆ ನೀಡಲಾದ ಚಿಕನ್ ಫ್ರೈಯಲ್ಲಿ ಹುಳವೊಂದು ಕಾಣಿಸಿಕೊಂಡಿದ್ದು, ಈ ಬಗ್ಗೆ ವಿಚಾರಿಸಿದಾಗ ನಾವು ಫ್ರೆಶ್ ಚಿಕನ್ ತರಿಸುವುದು ಎಂದು ತಿಳಿಸಿದರೆಂದೂ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿಯನ್ನು ಹರಿಯ ಬಿಡಲಾಗಿತ್ತು. ಈ ಮಾಹಿತಿಯು ವೈರಲ್ ಆದಾಗ ಎಚ್ಚೆತ್ತ ಜಿಲ್ಲಾಡಳಿತ ಈ ಬಗ್ಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಸತ್ಯ ಶೋಧನೆ ನಡೆಸಲು ನಿರ್ದೇಶನ ನೀಡಿತು. ಅದರಂತೆ ಪುತ್ತೂರು ತಹಶೀಲ್ದಾರ್ ನಿಸರ್ಗ ಪ್ರಿಯ, ಉಪ್ಪಿನಂಗಡಿ ಉಪ ತಹಶೀಲ್ದಾರ್ ಚೆನ್ನಪ್ಪ ಗೌಡ , ಪಿಡಿಒ ವಿಲ್ಪ್ರೆಡ್ ಲಾರೆನ್ಸ್ ರೋಡ್ರಿಗಸ್, ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ರಾಜೇಶ್ ಕೆ ವಿ, ವಿಎ ಮಹೇಶ್, ಕಂದಾಯ ಇಲಾಖಾ ಸಿಬ್ಬಂದಿ ಯತೀಶ್ ಮಡಿವಾಳ್ ಮತ್ತಿತರರನ್ನು ಒಳಗೊಂಡ ಅಧಿಕಾರಿಗಳ ತಂಡ ಗುರುವಾರ ರಾತ್ರಿ ಡಿಢೀರ್ ದಾಳಿ ನಡೆಸಿ ಆಹಾರ ಖಾದ್ಯಗಳ ತಪಾಸಣೆ ನಡೆಸಿತು. ಮಾಂಸ ಸಂಗ್ರಹಣಾ ಫ್ರಿಡ್ಜ್ ಗಳನ್ನು ಪರಿಶೀಲಿಸಿತು. ಕೆಲವೊಂದು ಖಾದ್ಯಗಳ ಸ್ಯಾಂಪಲ್‌ಗಳನ್ನು ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲು ಸಂಗ್ರಹಿಸಲಾಯಿತು.

ಹೋಟೇಲ್ ಉದ್ಯಮಕ್ಕೆ ಸಂಬಂಧಿಸಿ ಪಂಚಾಯತ್ ಪರವಾನಿಗೆಯನ್ನಾಗಲಿ, ಆಹಾರ ವಿಭಾಗದ ಪರವಾನಿಗೆ, ಆರೋಗ್ಯ ಇಲಾಖಾ ಪರವಾನಿಗೆಯನ್ನು ಹೊಂದದೇ ಇರುವುದು ಕಂಡು ಬಂದಾಗ ತಹಶೀಲ್ದಾರ್ ರವರು ಹೋಟೇಲನ್ನ್ ಮುಚ್ಚಿಸಲು ನಿರ್ದೇಶನ ನೀಡಿದರು. ಅದರಂತೆ ಅಧಿಕಾರಿಗಳು ಹೋಟೇಲನ್ನು ಬಂದ್ ಮಾಡಿಸಿದರು. ದಾಳಿ ವೇಳೆ ಸ್ಥಳೀಯ ಪೊಲೀಸರು ಸೂಕ್ತ ಬಂದೋ ಬಸ್ತು ಕೈಗೊಂಡಿದ್ದರು.

LEAVE A REPLY

Please enter your comment!
Please enter your name here