ಬಾಲ್ಯದಿಂದಲೇ ಉತ್ತಮ ಸಂಸ್ಕಾರ ದೊರಕಿದಾಗ ಭವ್ಯ ರಾಷ್ಟ್ರ ನಿರ್ಮಾಣ ಸಾಧ್ಯ- ಒಡಿಯೂರು ಶ್ರೀ
ಧರ್ಮವನ್ನು ಗಟ್ಟಿ ಮಾಡಬೇಕಾದರೆ ನಂಬಿಕೆ ಅಗತ್ಯ – ಎಸ್ ಅಂಗಾರ
ಕಾಣಿಯೂರು: ಸಮಾಜದಲ್ಲಿ ಧರ್ಮ, ಶಿಸ್ತು, ಶಾಂತಿ ನೆಲೆಯಾಗಬೇಕು. ಮಾಧವನಲ್ಲಿ ಭಕ್ತಿ ಇರಬೇಕು, ಮಾನವನಲ್ಲಿ ಪ್ರೀತಿ ಇರಬೇಕು. ಅಗ ಬದುಕು ಹಸನಾಗಲು ಸಾಧ್ಯ. ನಾವೆಲ್ಲರೂ ಧರ್ಮದ ಬೆಳವಣಿಗೆಗಾಗಿ ಧರ್ಮ ಸೇನಾನಿಯಾಗಬೇಕು. ಸಮಾಜದಲ್ಲಿ ಮಾನವೀಯ ಮೌಲ್ಯಗಳು ವೃದ್ಧಿಯಾಗಬೇಕು. ಬಾಲ್ಯದಿಂದಲೇ ಉತ್ತಮ ಸಂಸ್ಕಾರ ದೊರಕಿದಾಗ ಭವ್ಯ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ನ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.
ಅಗಳಿ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಜ 14ರಂದು ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ನಮ್ಮಿಂದ ಇನ್ನೊಬ್ಬರ ಬದುಕು ಕಟ್ಟುವ ಕೆಲಸವಾಗಲಿ. ಪ್ರತಿನಿತ್ಯವು ದೇವರ ನಾಮಸ್ಮರಣೆ ಮಾಡುವ ಮೂಲಕ ತಮ್ಮ ಜೀವನದಲ್ಲಿ ಸುವರ್ಣಮಯಗೊಳಿಸಬೇಕು. ಪರಿಶುದ್ಧತೆಯನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಜಗನ್ಮಾತೆಯ ಅನುಗ್ರಹ ಸದಾ ಇರುತ್ತದೆ ಎಂದವರು ಹೇಳಿದರು.
ಮೀನುಗಾರಿಕೆ ಬಂದರು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಮಾತನಾಡಿ, ದೈವ ದೇವರುಗಳನ್ನು ನಮ್ಮ ಹಿರಿಯರು ಭಕ್ತಿಯ ಮೂಲಕ ಒಲಿಸಿಕೊಳ್ಳುತ್ತಿದ್ದರು. ಮನಪೂರ್ವಕವಾದಂತಹ ಭಕ್ತಿಯಲ್ಲಿದ್ದಾಗ ನಮ್ಮ ಬದುಕಿನಲ್ಲಿಯೂ ನೆಮ್ಮದಿ ಪಡೆದುಕೊಳ್ಳಲು ಸಾಧ್ಯ. ನಮ್ಮ ಧರ್ಮವನ್ನು ಗಟ್ಟಿ ಮಾಡಬೇಕಾದರೆ ಪ್ರತಿಯೊಬ್ಬ ವ್ಯಕ್ತಿಯಲ್ಲಿ ನಂಬಿಕೆ ಬೇಕು. ಜೊತೆಗೆ ಭಕ್ತಿ ಕೂಡ ಇರಬೇಕು. ನಮ್ಮ ಧರ್ಮದ ರಕ್ಷಣೆಯನ್ನು ಮಾಡದೇ ಹೋದಲ್ಲಿ ಮುಂದಿನ ಪೀಳಿಗೆ ಹಾಗೂ ದೇಶದ ಭವಿಷ್ಯ ಏನಾಗಬಹುದು ಎಂಬುದಾಗಿ ಯೋಚಿಸುವ ಅನಿವಾರ್ಯತೆ ಇದೆ ಎಂದರು.
ಅಗಳಿ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಪದ್ಮಯ್ಯ ಗೌಡ ಕರಂದ್ಲಾಜೆ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇವಸ್ಥಾನದ ಅಧ್ಯಕ್ಷನಾಗಿರುವ ಸಂದರ್ಭದಲ್ಲಿ ದೇವರಿಗೆ ಪುಷ್ಪ ಕನ್ನಡಿ ಸಮರ್ಪಣೆ, ದೇವಸ್ಥಾನಕ್ಕೆ ಆವರಣ ಗೋಡೆ ನಿರ್ಮಾಣ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯದಲ್ಲಿ ಕೈಜೋಡಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಕುದ್ಮಾರಿನ ಉದ್ಯಮಿ ಚೆನ್ನಪ್ಪ ಗೌಡ ನೂಜಿ, ಪುತ್ತೂರು ರೋಟರಿ ಸ್ವರ್ಣ ಅಧ್ಯಕ್ಷ ವೆಂಕಟ್ರಮಣ ಗೌಡ ಕಳುವಾಜೆ, ರಾಷ್ಟ್ರೀಯ ಕೃಷಿ ಪ್ರಶಸ್ತಿ ಪುರಸ್ಕೃತ ಕಡಮಜಲು ಸುಭಾಶ್ ರೈ, ಬೆಳಂದೂರು ಗ್ರಾ.ಪಂ.ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ, ಗ್ರಾ.ಪಂ.ಸದಸ್ಯರಾದ ಉಮೇಶ್ವರಿ ಅಗಳಿ, ಜಯರಾಮ ಬೆಳಂದೂರು, ಅಗಳಿ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಹರೀಶ್ ಮುಂಡಾಳ, ಭವಾನಿಶಂಕರ ಅಗಳಿ ಅತಿಥಿಗಳಾಗಿ ಭಾಗವಹಿಸಿದ್ದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಉದಯ ರೈ ಮಾದೋಡಿ, ಅನುವಂಶೀಯ ಮೊಕ್ತೇಸರರಾದ ಶಿವರಾಮ ಗೌಡ ಅಗಳಿ, ಉದಯ ಕುಮಾರ್ ಅಗಳಿ, ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಮರಕ್ಕಡ ಉಪಸ್ಥಿತರಿದ್ದರು. ಸಂಪತ್ ಕುಮಾರ್ ರೈ ಪಾತಾಜೆ, ಸತೀಶ್ ಮಾರ್ಕಾಜೆ, ಅವಿನಾಶ್ ಬೈತಡ್ಕ, ಸಂತೋಷ್ ಕುಮಾರ್ ಮರಕ್ಕಡ, ಉದಯ ರೈ ಮಾದೋಡಿ, ನಿತಿನ್ ಕಾಯರ್ ಪುಳಿ, ಹರೀಶ್ ತುಂಬ್ಯ, ಚಂದ್ರಹಾಸ ಗೌಡ ಅಗಳಿ, ಉಮೇಶ್ ಅಗಳಿ, ಗೀತಾ ಅಗಳಿ, ರೋಹಿತ್ ಅಗಳಿ, ರವಿಚಂದ್ರ ಮಾರ್ಕಾಜೆ ಅತಿಥಿಗಳಿಗೆ ಶಾಲು, ತಾಂಬೂಲ, ಸ್ಮರಣಿಕೆ ನೀಡಿ ಗೌರವಿಸಿದರು. ದೀಕ್ಷಾ ಮುಂಡಾಲ ಮತ್ತು ರಕ್ಷಿತಾ ಮುಂಡಾಲ ಪ್ರಾರ್ಥಿಸಿದರು.ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಮೋಹನ ಗೌಡ ಇಡ್ಯಡ್ಕ ಸ್ವಾಗತಿಸಿ, ಬ್ರಹ್ಮಕಲಶೋತ್ಸವ ಸಮಿತಿಯ ಲೆಕ್ಕಪರಿಶೋಧಕ ವಸಂತ ರೈ ಕಾರ್ಕಳ ಕಾರ್ಯಕ್ರಮ ನಿರೂಪಿಸಿದರು. ಬ್ರಹ್ಮಕಲಶ ಸಮಿತಿ ಉಪಾಧ್ಯಕ್ಷ ವೇಣುಗೋಪಾಲ್ ಕಳುವಾಜೆ ವಂದಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ: ರಾತ್ರಿ ನಾರ್ಯಬೈಲು ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ಮತ್ತು ಬೆಳಂದೂರು ಅಂಗನವಾಡಿ ಪುಟಾಣಿಗಳಿಂದ ವೈವಿಧ್ಯಮಯ ಕಾರ್ಯಕ್ರಮ ಹಾಗೂ ಕೃಷ್ಣಾಪುರ ಕಾಮಣ ಜೋಕಾಲಿ ಬಳಗ ಸದಸ್ಯರಿಂದ ಸುಬ್ಬು ಸಂಟ್ಯಾರ್ ನಿರ್ದೇಶನದ ಮುನ್ನೆ ಮುನಿಯೆನಾ ತುಳು ನಾಟಕ ನಡೆಯಿತು.
ಸನ್ಮಾನ: ಅಗಳಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿದ ನರಸಿಂಹ ಪ್ರಸಾದ್ ಪಂಗಣ್ಣಾಯ ಕುವೆತ್ತೋಡಿ ಅವರನ್ನು ಸನ್ಮಾನಿಸಲಾಯಿತು.
ಜ 15 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ಕಾಯಿಮಣ ಕೃಷ್ಣಾಪುರ ಜೋಕಾಲಿ ಭಜನಾ ಮಂಡಳಿ ಮತ್ತು ಚಾರ್ವಾಕ ಶ್ರೀ ಸಾಕ್ಷಾತ್ ಶಿವ ಭಜನಾ ಮಂಡಳಿ ಸದಸ್ಯರಿಂದ ಭಜನಾ ಸೇವೆ , ಚಾರ್ವಾಕ ಗೋಪಾಲಕೃಷ್ಣ ಪಟೇಲ್ ಇವರ ನೇತೃತ್ವದಲ್ಲಿ ಕಾಣಿಯೂರು ಶ್ರೀ ನರಹರಿ ಯಕ್ಷಗಾನ ಕಲಾಕೇಂದ್ರದ ವಿದ್ಯಾರ್ಥಿಗಳಿಂದ ಯಕ್ಷಗಾನ ರಂಗಪ್ರವೇಶ, ಅಪರಾಹ್ನ ಪಾದೆ ಬಂಬಿಲ ಶಕ್ತಿನಗರ ಶ್ರೀ ದುರ್ಗಾ ಭಜನಾ ಮಂಡಳಿ, ದೇವಸ್ಯ ಶ್ರೀ ಹರಿ ಭಜನಾ ಮಂಡಳಿ, ಬೆಳಂದೂರು ವಲಯ ಶ್ರೀ ಲಕ್ಷ್ಮೀಪ್ರಿಯ ಭಜನಾ ಮಂಡಳಿ ಸದಸ್ಯರಿಂದ ಭಜನಾ ಸೇವೆ, ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಂಗಳೂರು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.
ಅಗಳಿ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಉದಯ ರೈ ಮಾದೋಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್, ಬೆಂಗಳೂರು ಕರ್ನಾಟಕ ರಾಜ್ಯ ಒಕ್ಕಲಿಗ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಡಾ| ಕೆ.ವಿ. ರೇಣುಕಾಪ್ರಸಾದ್, ಮಂಗಳೂರು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳೀಕೃಷ್ಣ ಹಸಂತಡ್ಕ, ಪುತ್ತೂರು ಮಹಾವೀರ ಆಸ್ಪತ್ರೆಯ ವೈದ್ಯರಾದ ಡಾ.ಸುರೇಶ್ ಪುತ್ತೂರಾಯ, ಶ್ರೀ ಕ್ಷೇ. ಧ.ಗ್ರಾ.ಯೋಜನೆಯ ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ ಗೌಡ ನಾವೂರು ಸೇರಿದಂತೆ ಹಲವಾರು ಮಂದಿ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಳಂದೂರು ಸ.ಹಿ.ಪ್ರಾ.ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾಜ್ಯ ಪ್ರಶಸ್ತಿ ವಿಜೇತ ಕೊಳಲು ಮಾಂತ್ರಿಕ ಲಿಂಗಪ್ಪ ಗೌಡ ಕಡೆಂಗ ಇವರಿಂದ ಕೊಳಲು ವಾದನ, ಬೆಳಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಕಾರ್ಯಕ್ರಮ ನಡೆಯಲಿದೆ..