ಆದಿಚುಂಚನಗಿರಿ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಯವರಿಂದ ಮಹಾಲಿಂಗೇಶ್ವರ ಐಟಿಐ ಕೌಶಲ್ಯ ಸಭಾಭವನ, ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ

0

  •  ಕೌಶಲ್ಯತೆಯಲ್ಲಿ ಭವಿಷ್ಯವಿದೆ-ಡಾ| ನಿರ್ಮಲಾನಂದನಾಥ ಸ್ವಾಮೀಜಿ
  •  ಗುಣಮಟ್ಟದಲ್ಲಿ ಕಲಿತಾಗ ಕೌಶಲ್ಯತೆ ನಿಮ್ಮನ್ನು ಕಾಪಾಡುತ್ತದೆ- ಅಶ್ವಥ್‌ನಾರಾಯಣ್

ಪುತ್ತೂರು: ದ.ಕ.ಜಿಲ್ಲಾ ಗೌಡ ವಿದ್ಯಾ ಸಂಘ ಸುಳ್ಯ ಇದರ ಪ್ರಾಯೋಜಕತ್ವದಲ್ಲಿ ಕೊಂಬೆಟ್ಟಿನಲ್ಲಿರುವ ಶ್ರೀ ಮಹಾಲಿಂಗೇಶ್ವರ ಐಟಿಐ ಇದರ ನೂತನ ಕೌಶಲ್ಯ ಸಭಾಭವನ ಮತ್ತು ಕಂಪ್ಯೂಟರ್ ಲ್ಯಾಬ್ ಉದ್ಘಾಟನಾ ಸಮಾರಂಭವು ಜ.22ರಂದು ನಡೆಯಿತು. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾಗಿರುವ ಶ್ರೀ ಡಾ| ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಕೌಶಲ್ಯ ಸಭಾಭವನ ಮತ್ತು ಕಂಪ್ಯೂಟರ್ ಲ್ಯಾಬ್ ಉದ್ಘಾಟಿಸಿ ಅನುಗ್ರಹ ಸಂದೇಶ ನೀಡಿದರು. ಕಳೆದ ಬಾರಿ ಇಲ್ಲಿಗೆ ಬಂದಿದ್ದೆ. ಆಗ ಕೂಡಾ ಐಟಿಐ ಶಿಕ್ಷಣಕ್ಕೆ ಮಹತ್ವದ ಕುರಿತು ತಿಳಿಸಿದ್ದೆ. ಅದೇ ರೀತಿ ಕೌಶಲ್ಯತೆಯಲ್ಲಿ ಭವಿಷ್ಯವಿದೆ. ಹಾಗಾಗಿ ಉತ್ತಮ ರೀತಿಯಲ್ಲಿ ಕಲಿಯಿರಿ ಎಂದು ವಿದ್ಯಾರ್ಥಿಗಳಿಗೆ ಹಾರೈಸಿದರು.

ಗುಣಮಟ್ಟದಲ್ಲಿ ಕಲಿತಾಗ ಕೌಶಲ್ಯತೆ ನಿಮ್ಮನ್ನು ಕಾಪಾಡುತ್ತದೆ: ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಅವರು ಮಾತನಾಡಿ ಭಾರತದ ಜನಸಂಖ್ಯೆಯಲ್ಲಿ ಕೌಶಲ್ಯತೆ ಗೊತ್ತಿರುವುದು ಕೇವಲ ಶೇ.5 ಮಂದಿಗೆ ಮಾತ್ರ. ಸೌತ್ ಕೊರಿಯ, ಜಪಾನ್‌ನಲ್ಲಿ ಜ್ಞಾನದ ಜೊತೆಯಲ್ಲೇ ಶೇ.40 ಮಂದಿ ಕೌಶಲ್ಯತೆಯನ್ನು ಪಡೆಯುತ್ತಾರೆ. ಹಿಂದಿನ ಜನಾಂಗ ನಮ್ಮಲ್ಲಿ ಕೌಶಲ್ಯತೆಯನ್ನು ಪಡೆಯುತ್ತಿದ್ದರು. ಆದರೆ ಆಧುನಿಕತೆ ಹೆಚ್ಚಾದಂತೆ ಕೌಶಲ್ಯತೆ ಪಡೆಯುವುದರಲ್ಲಿ ಹಿಂದೆ ಇದ್ದೇವೆ. ಕರ್ನಾಟಕದಲ್ಲಿ ಐಟಿಐಯಲ್ಲಿ 1.5 ಲಕ್ಷ ಮಂದಿಗೆ ದಾಖಲಾತಿಗೆ ಅವಕಾಶ ಇದೆ. ಮುಖ್ಯಮಂತ್ರಿ ಕೌಶಲ್ಯ ಯೋಜನೆಯಲ್ಲೂ ಅವಕಾಶವಿದೆ. ಇದರ ಜೊತೆಗೆ ಸರಕಾರಿ ಐಟಿಐ ಅಪ್‌ಡೇಟ್ ಆಗಲಿದೆ. ಹಾಗಾಗಿ ಪ್ರತಿಯೊಬ್ಬ ವ್ಯಕ್ತಿಗೂ ಕೌಶಲ್ಯ ಪಡೆಯಲು ಅವಕಾಶ ಮಾಡಿಕೊಡುತ್ತಿದ್ದೇವೆ. ಐಟಿಐಯಲ್ಲಿ ನೂರಾರು ಸಾವಿರಾರು ಉದ್ಯೋಗ, ಟೊಯೋಟಾದಲ್ಲೂ 10 ಸಾವಿರ ಕೆಲಸ ಕೊಡಿಸುತ್ತೇವೆ. ಕಚ್ಚಾ ವಸ್ತುಗಳ ಉತ್ಪಾದನೆಗಳಿಗೆ ದೊಡ್ಡ ಅವಕಾಶ ಮಾಡಿಕೊಡುತ್ತೇವೆ. ಮುಂದಿನ ದಿನ ಇಂಡಸ್ಟ್ರೀ 4.0 ಕ್ರಾಂತಿಯನ್ನು ಅವಕಾಶ ಮಾಡಿಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಿ. ಸುಮ್ಮನೆ ಏನೋ ಕಲಿತರೆ ಉದ್ಯೋಗ ಸಿಗುವುದಿಲ್ಲ. ಚೆನ್ನಾಗಿ ಕಲಿಯಿರಿ, ಭರವಸೆ ಇಟ್ಟುಕೊಳ್ಳಿ, ವಿಶ್ವಾಸ ಇಟ್ಟುಕೊಳ್ಳಿ, ವಿಶ್ವಾಸದಿಂದ ಹೆಜ್ಜೆ ಇಡಿ. ಜಗತ್ತಿನ ಯಾವ ದೇಶಕ್ಕೂ ಹೋಗಬಹುದು, ಭಾರತದಲ್ಲೂ ಸೇವೆ ಸಲ್ಲಿಸಬಹುದು ಎಂದ ಅವರು ಗುಣಮಟ್ಟದಲ್ಲಿ ಕಲಿತಾಗ ಕೌಶಲ್ಯತೆ ನಿಮ್ಮನ್ನು ಕಾಪಾಡುತ್ತದೆ ಎಂದು ಹೇಳಿದರು.

ಸನ್ಮಾನ: ಕೌಶಲ್ಯ ಸಭಾಭವನದ ನಿರ್ಮಾಣಕ್ಕೆ ಅನುದಾನ ತರಿಸುವಲ್ಲಿ ಪ್ರಮುಖರಾದ ಮಾಜಿ ಮುಖ್ಯಮಂತ್ರಿ ಹಾಲಿ ಸಂಸದ ಡಿ.ವಿ.ಸದಾನಂದ ಗೌಡ, ಕಂಪ್ಯೂಟರ್ ಲ್ಯಾಬ್‌ಗೆ ಸಂಬಂಧಿಸಿ ಸ್ಪಂದಿಸಿದ ಶಾಸಕ ಸಂಜೀವ ಮಠಂದೂರು ಸಹಿತ ದಾನಿಗಳಿಗೆ ಮತ್ತು ಸಂಸ್ಥೆಯ ಸಂಚಾಲಕ ಯು.ಪಿ.ರಾಮಕೃಷ್ಣ, ನಿರ್ದೇಶಕರಾದ ಚಿದಾನಂದ ಬೈಲಾಡಿ ಅವರನ್ನು ಶ್ರೀಗಳು ಗೌರವಿಸಿದರು. ಎಂ.ಎಲ್.ಸಿ ಬೋಜೆಗೌಡ, ದ.ಕ.ಜಿಲ್ಲಾ ಗೌಡ ವಿದ್ಯಾ ಸಂಘದ ಅಧ್ಯಕ್ಷ ಧನಂಜಯ ಅಡ್ಪಂಗಾಯ, ಕಾರ್ಯದರ್ಶಿ ರೇವತಿ ನಂದನ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗೌಡ ವಿದ್ಯಾ ಸಂಘದ ಖಜಾಂಜಿ ಮಾಧವ ಗೌಡ, ಮಹಾಲಿಂಗೇಶ್ವರ ಐಟಿಐ ನಿರ್ದೇಶಕರಾದ ಚಂದ್ರಕಲಾ ಸಿ.ಜೆ, ಸಲಹಾ ಸಮಿತಿ ಸದಸ್ಯ ಮುರಳೀಧರ ಕೆಮ್ಮಾರ, ನಿರ್ದೇಶಕರಾದ ಕಿಶೋರ್ ಕುಮಾರ್ ನೆಲ್ಲಿಕಟ್ಟೆ, ಜಯರಾಮ ಚಿಲ್ತಡ್ಕ ಸಹಿತ ಸಂಸ್ಥೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶ್ರೀ ಮಹಾಲಿಂಗೇಶ್ವರ ಐಟಿಐಯ ಪ್ರಾಚಾರ್ಯ ಪ್ರಕಾಶ್ ಪೈ ಸ್ವಾಗತಿಸಿ, ವಂದಿಸಿದರು. ನಿವೃತ್ತ ಪ್ರಾಂಶುಪಾಲ ಭವಾನಿ ಗೌಡ ಪರಂಗಾಜೆ, ನಿವೃತ್ತ ಕಚೇರಿ ಅಧೀಕ್ಷಕ ಉಮೇಶ್ ಎಂ, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಒಕ್ಕಲಿಗ ಸ್ವ ಸಹಾಯ ಸಂಘದ ಸ್ಥಾಪಕ ಅಧ್ಯಕ್ಷ ಎ.ವಿ.ನಾರಾಯಣ ಸಹಿತ ಹಲವಾರು ಮಂದಿ ಉಪಸ್ಥಿರಿದ್ದರು.

ಡಿ.ಕೆ.ಶಿವಕುಮಾರ್ ಭೇಟಿ: ಬೆಳಿಗ್ಗೆ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಐಟಿಗೆ ಭೇಟಿ ನೀಡಿ ಸಂಸ್ಥೆಯಿಂದ ವಿವಿಧ ಮಾಹಿತಿ ಪಡೆದುಕೊಂಡರು.ಈ ಸಂದರ್ಭದಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಸಹಿತ ಹಲವು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here