ಕ್ರಿಮಿನಲ್ ಕೇಸು ದಾಖಲಿಸಲು ಕ್ರಮ-ರಮೇಶ್ ಬಾಬು
ಸವಣೂರು : ಸವಣೂರು ಗ್ರಾಮದ ಕಂಚಿಗಾರ ಕೆರೆ ಒತ್ತುವರಿ ತೆರವು ವಿಚಾರ ಕುರಿತಂತೆ ಸವಣೂರು ಗ್ರಾ.ಪಂ.ನ ಕುಮಾರಧಾರ ಸಭಾಂಗಣದಲ್ಲಿ ಜ.23ರಂದು ಕಡಬ ತಹಶೀಲ್ದಾರ್ ನೇತೃತ್ವದಲ್ಲಿ ತುರ್ತು ಸಭೆ ನಡೆಯಿತು.
ಸಭೆಯಲ್ಲಿ ಕೆರೆ ಒತ್ತುವರಿ ತೆರವು ಕುರಿತಂತೆ ಕಳೆದ 2 ವರ್ಷಗಳಿಂದ ನಿರಂತರವಾಗಿ ಕಾನೂನಾತ್ಮಕವಾಗಿ ಗ್ರಾ.ಪಂ.ಆಡಳಿತ ಮಂಡಳಿ ನಿರಂತರವಾಗಿ ಹೋರಾಟ ಮಾಡುತ್ತಿದ್ದರೂ, ಈವರೆಗೆ ಕೆರೆ ಒತ್ತುವರಿ ಕುರಿತಂತೆ ಯಾವುದೇ ಪ್ರಗತಿ ಕಂಡಿಲ್ಲ ಎಂದು ಗ್ರಾ.ಪಂ.ಸದಸ್ಯರು ಸಭೆಯಲ್ಲಿ ವಿವರಿಸಿದರು.
ತಹಶೀಲ್ದಾರ್ ರಮೇಶ್ ಬಾಬು ಮಾತನಾಡಿ, ಮತ್ತೆ ಕೆರೆ ಹಾಗೂ ಸರಕಾರಿ ಜಾಗದ ಸರ್ವೆ ನಡೆಸಲಾಗುವುದು, ಕೆರೆ ಒತ್ತುವರಿ ತೆರವು ಕುರಿತಂತೆ ಜಿಲ್ಲಾಧಿಕಾರಿಗಳ ಸೂಚನೆಯಂತೆ ಒತ್ತುವರಿದಾರರ ವಿರುದ್ದ ಕ್ರಿಮಿನಲ್ ಕೇಸು ದಾಖಲಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಪಲ್ಲತಮೂಲೆಯಲ್ಲಿ ಟ್ಯಾಂಕ್ ನಿರ್ಮಾಣಕ್ಕೆ ಅಡ್ಡಿ
ಸವಣೂರು ಗ್ರಾಮದ ಪಲ್ಲತಮೂಲೆಯಲ್ಲಿರುವ ಸರಕಾರಿ ಜಾಗದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಟ್ಯಾಂಕ್ ನಿರ್ಮಾಣ ಕುರಿತಂತೆ ವಿಚಾರಕ್ಕೆ ಸ್ಥಳೀಯ ವ್ಯಕ್ತಿಯೊಬ್ಬರು ಅಡ್ಡಿ ವ್ಯಕ್ತಪಡಿಸಿದ್ದು, ಈ ಕುರಿತೂ ಹೋರಾಟ ನಡೆಸಲಿದ್ದೇವೆ, ಅಡ್ಡಿ ಪಡಿಸುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ರಫೀಕ್ ಎಂ.ಎ. ಗಮನ ಸೆಳೆದರು.
ಈ ಕುರಿತು ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್ ತಿಳಿಸಿದರು.
ಅಧಿಕಾರಿಗಳಿಂದ ಒತ್ತುವರಿದಾರರಿಗೆ ಮಾಹಿತಿ ?
ಕೆರೆ ಒತ್ತುವರಿ ವಿಚಾರ ಕುರಿತಂತೆ ಕಂದಾಯ ಇಲಾಖೆಗೆ ಗ್ರಾ.ಪಂ.ಯಾವುದೇ ಮಾಹಿತಿ ನೀಡಿದರೂ, ಅದನ್ನು ಒತ್ತುವರಿದಾರರಿಗೆ ಅಧಿಕಾರಿಗಳೇ ಮಾಹಿತಿ ನೀಡುತ್ತಿದ್ದಾರೆ. ಈ ಮೂಲಕ ಪರೋಕ್ಷವಾಗಿ ಅಧಿಕಾರಿಗಳೇ ಒತ್ತುವರಿದಾರರಿಗೆ ಬೆಂಬಲವಾಗಿ ನಿಂತಿದ್ದಾರೆ ಎಂದು ಗ್ರಾ.ಪಂ.ಸದಸ್ಯರು ಸಂಶಯ ವ್ಯಕ್ತಪಡಿಸಿದರು.
ಸಭೆಯಲ್ಲಿ ಗ್ರಾ.ಪಂ.ಅಧ್ಯಕ್ಷೆ ರಾಜೀವಿ ವಿ.ಶೆಟ್ಟಿ, ಸದಸ್ಯರಾದ ಅಬ್ದುಲ್ ರಝಾಕ್, ಬಾಬು ಎನ್., ಭರತ್ ರೈ, ತಾರಾನಾಥ ಬೊಳಿಯಾಲ, ತೀರ್ಥರಾಮ ಕೆಡೆಂಜಿ, ಸತೀಶ್ ಅಂಗಡಿಮೂಲೆ, ರಫೀಕ್ ಎಂ.ಎ., ಸುಂದರಿ ಬಂಬಿಲ, ಯಶೋಧಾ, ಜಯಶ್ರೀ, ಇಂದಿರಾ ಬೇರಿಕೆ, ವಿನೋದಾ ರೈ, ಚೆನ್ನು, ಚಂದ್ರಾವತಿ ಸುಣ್ಣಾಜೆ, ಹರೀಶ್ ಕೆ.ಜಿ., ಪಿಡಿಓ ಮನ್ಮಥ ಎ, ಗ್ರಾಮ ಲೆಕ್ಕಾಧಿಕಾರಿ ಬಸವರಾಜ್, ಗ್ರಾಮ ಸಹಾಯಕ ದಯಾನಂದ, ಗ್ರಾ.ಪಂ. ಸಿಬಂದಿಗಳಾದ ಪ್ರಮೋದ್ ಕುಮಾರ್ ರೈ, ದಯಾನಂದ ಮಾಲೆತ್ತಾರು, ಯತೀಶ್ ಕುಮಾರ್, ಗ್ರಾ.ಪಂ.ಮಾಜಿ ಸದಸ್ಯ ಸತೀಶ್ ಬಲ್ಯಾಯ, ಜಯರಾಮ ಮೊದಲಾದವರು ಉಪಸ್ಥಿತರಿದ್ದರು.
ಕೆರೆ ಒತ್ತುವರಿ ಮಾಡಿಲ್ಲ: ಸುಜಿತ್ ಶೆಟ್ಟಿ
ಕೆರೆ ಒತ್ತುವರಿ ವಿಷಯದ ಕುರಿತು ಸುಜಿತ್ ಕುಮಾರ್ ಶೆಟ್ಟಿಯವರು ಪ್ರತಿಕ್ರಿಯೆ ನೀಡಿದ್ದಾರೆ. ನಾವು ಯಾವುದೇ ಕೆರೆಯನ್ನು ಒತ್ತುವರಿ ಮಾಡಿಲ್ಲ. ಕೆರೆಯ ಸುತ್ತಲೂ ನೀರಾವರಿ ಇಲಾಖೆಯವರು ಅಳವಡಿಸಿದ ಬೇಲಿ ಇದೆ ಮತ್ತು ಈ ಕೆರೆ ಹೊರತುಪಡಿಸಿ ಉಳಿದ ಜಮೀನುಗಳು ತನ್ನ ಪಟ್ಟಾ ಕದೀಂ ಜಮೀನುಗಳ ಕುಮ್ಮಿ ಆಗಿದೆ. ಈ ಜಮೀನು ಹಲವಾರು ವರ್ಷಗಳಿಂದ ತನ್ನ ಸ್ವಾಧೀನ ಇದೆ ಮತ್ತು ಅದರಲ್ಲಿ ತನ್ನ ಕೃಷಿ ಅಭಿವೃದ್ಧಿ ಇರುವುದಾಗಿ ತಿಳಿಸಿರುವ ಅವರು ಈ ಜಮೀನಿನ ಸ್ವಾಧೀನತೆಗೆ ತೊಂದರೆ ಕೊಡದಂತೆ ನ್ಯಾಯಾಲಯ ಆದೇಶಿಸಿದೆ. ಅಲ್ಲದೆ ಸ್ವಾಧೀನತೆ ಬಗ್ಗೆ ಯಥಾಸ್ಥಿತಿ ಕಾಪಾಡುವಂತೆ ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ. ಆದುದರಿಂದ ತನ್ನ ಸ್ವಾಧಿನತೆಗೆ ತಹಶೀಲ್ದಾರವರು ಯಾ ಇತರ ಯಾರೇ ಆದರೂ ತೊಂದರೆ ನೀಡಿದಲ್ಲಿ ನ್ಯಾಯಾಲಯದ ಆದೇಶದ ಉಲ್ಲಂಘನೆ ಆಗುತ್ತದೆ. ತಪ್ಪಿತಸ್ಥರ ವಿರುದ್ಧ ತಾನು ಕೇಸು ದಾಖಲಿಸುತ್ತೇನೆ ಎಂದು ತಿಳಿಸಿದ್ದಾರೆ.