ಮಾಣಿ ಮಠ ಸಪರಿವಾರ ರಾಮದೇವರ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ-ಧರ್ಮಸಭೆ

0

ಮಾಣಿ: ದುಂದುವೆಚ್ಚಕ್ಕೆ ಕಡಿವಾಣ ಹಾಕಿ, ಸರಳ ಜೀವನ ಅಳವಡಿಸಿಕೊಂಡು ಸಮಾಜದ ಶಾಶ್ವತ ಕಾರ್ಯಗಳಿಗೆ ಧರ್ಮಕಾರ್ಯಗಳಿಗೆ ಕೊಡುಗೆ ನೀಡುವ ಮೂಲಕ ಸತ್ಕಾರ್ಯದಲ್ಲಿ ತೊಡಗಿಸಿಕೊಳ್ಳೋಣ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಕರೆ ನೀಡಿದರು.

ಅವರು ಮಾಣಿ ಮಠದಲ್ಲಿ ನೂತನ ಶಿಲಾಮಯ ಗರ್ಭಾಗಾರದಲ್ಲಿ ಸಪರಿವಾರ ಶ್ರೀರಾಮದೇವರ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಜ. 23ರಂದು ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು.

ಸರಳ ಜೀವನದಲ್ಲಿರುವ ಸುಖ- ಶ್ರೇಯಸ್ಸು ಯಾವುದರಲ್ಲೂ ಇಲ್ಲ. ಒಂದು ತುತ್ತು ಕಡಿಮೆ ಉಂಡು ಅದನ್ನು ಸಮಾಜಕ್ಕೆ ನೀಡಿ ಎಂಬ ಪರಿಕಲ್ಪನೆಯಡಿ ಮುಷ್ಟಿಭಿಕ್ಷೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ. ನನ್ನ ಮನೆಯೊಳಗೆ ಅಧರ್ಮಕ್ಕೆ ಅವಕಾಶವಿಲ್ಲ ಎಂಬ ದೃಢಸಂಕಲ್ಪವನ್ನು ರೂಢಿಸಿಕೊಳ್ಳದಿದ್ದರೆ, ನಮ್ಮ ಸಮಾಜ ವ್ಯವಸ್ಥೆ ಉಳಿಯಲಾರದು ಎಂದು ರಾಘವೇಶ್ವರ ಶ್ರೀ ಹೇಳಿದರು.

ಶಿಲಾಮಯ ನಿರ್ಮಾಣಗಳಿಂದ ಅವುಗಳ ಮೇಲೆ ದಾಳಿಗಳು ನಡೆದಾಗಲೂ ಹಾಳುಗೆಡವಬಹುದೇ ವಿನಃ ಅದರ ಕುರುಹು ನಾಶಪಡಿಸಲು ಸಾಧ್ಯವಿಲ್ಲ. ಪೋರ್ಚ್‌ಗೀಸರಿಂದ ನಾಶವಾದ ಮೂಲಮಠ ಅಶೋಕೆಯ ಕುರುಹುಗಳು ಮಾತ್ರ ಇಂದು ಉಳಿದಿವೆ. ಮಠದ ಹಿತ್ಲು ಎಂಬ ಪ್ರದೇಶದಲ್ಲಿ ಮಠದ ಪಂಚಾಂಗ ಸಿಕ್ಕಿದೆ. ಮೂಲ ಮಠ ಅಲ್ಲಿ ಮತ್ತೆ ತಲೆ ಎತ್ತಿ ನಿಂತು ಸಮಾಜಕ್ಕೆ ಬೆಳಕಾಗಲಿದೆ ಎಂದು ಹೇಳಿದರು.

ಅತಿಥಿಗಳಾಗಿದ್ದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಬ್ರಿಟಿಷರು, ಮೊಗಲರು ಶ್ರದ್ಧಾ ಭಕ್ತಿ ಕೇಂದ್ರಗಳ ಮೇಲೆ ದಾಳಿ ಮಾಡಿ ಧ್ವಂಸ ಮಾಡಿದರೂ, ಕುಟುಂಬ ವ್ಯವಸ್ಥೆ ನಾಶಗೈಯಲು ಸಾಧ್ಯವಾಗಲಿಲ್ಲ. ಇಂಥ ಪವಿತ್ರ ವ್ಯವಸ್ಥೆ ನಮ್ಮಲ್ಲಿ ಉಳಿಸಿಕೊಂಡಿದ್ದೇವೆಯೇ ಎಂಬ ಬಗ್ಗೆ ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕು.

ಸಡಿಲಗೊಳ್ಳುತ್ತಿರುವ ಕುಟುಂಬ ವ್ಯವಸ್ಥೆಯನ್ನು ಬಲಪಡಿಸಬೇಕು. ಮಾನವೀಯ ಹಾಗೂ ಭಾವನಾತ್ಮಕ ಸಂಬಂಧಗಳನ್ನು ಉಳಿಸಿಕೊಳ್ಳುವ ಬಗ್ಗೆ ಯುವಜನರಿಗೆ ಮಾರ್ಗದರ್ಶನ ನೀಡಬೇಕು. ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ನೀಡಿದ್ದು, ಶಾಂತಿಯಿಂದ ಉಂಟಾದ ಜನಾಂದೋಲನದ ಜತೆಗೆ ಸುಭಾಷ್‌ಚಂದ್ರ ಬೋಸ್ ಅವರಂಥ ಕ್ರಾಂತಿಕಾರಿ ನಾಯಕರ ಹೋರಾಟದ ಕಾರಣದಿಂದ ಎಂದು ಹೇಳಿದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ, ಹಿಂದೂಗಳು ಎಂದು ಎದೆ ತಟ್ಟಿ ಹೇಳಿಕೊಳ್ಳಲು ಇಂದು ಹಿಂಜರಿಕೆ ಇದೆ. ಕಲ್ಲಿನಲ್ಲಿ ದೇವರನ್ನು ಕಂಡವರು ನಾವು. ನದಿ ನೀರನ್ನು ಪವಿತ್ರತೀರ್ಥ ಎಂದು ಪರಿಗಣಿಸಿದವರು ನಾವು; ಗೋವು ನಮಗೆ ಕೇವಲ ಹಾಲು ನೀಡುವ ಪ್ರಾಣಿಯಲ್ಲ; ಅದನ್ನು ಗೋಮಾತೆ ಎಂದು ಪರಿಗಣಿಸುತ್ತೇವೆ ನಾವು. ಭರತಭೂಮಿಯ ಜತೆಗೆ ವಿಶೇಷ ನಂಟು ಹೊಂದಿರುವ ಪ್ರತಿಯೊಬ್ಬರೂ ಹಿಂದೂಗಳು ಎಂದು ಹೇಳಿದರು.

ಸಂಸದ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಮಾತನಾಡಿ, ಶಂಕರಾಚಾರ್ಯರು ನಿರ್ಮಿಸಿದ ಇತಿಹಾಸವನ್ನು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಮತ್ತೆ ಸೃಷ್ಟಿಸುತ್ತಿದ್ದಾರೆ. ಭಕ್ತಿಯ ಅದ್ಭುತ ಶ್ರದ್ಧಾಕೇಂದ್ರವಾಗಿ ಮಾಣಿ ಮಠ ಬೆಳೆದಿದೆ ಎಂದರು.

ಸಚಿವ ಎಸ್. ಅಂಗಾರ ಮಾತನಾಡಿ, ಕಳೆದ ಮೂರು ದಶಕಗಳಲ್ಲಿ ಮಾಣಿ ಮಠದಲ್ಲಿ ಅದ್ಭುತ ಬದಲಾವಣೆಗಳು ಆಗಿವೆ. ಇಡೀ ಸಮಾಜದ ಶ್ರದ್ಧಾ ಭಕ್ತಿಯ ಕೇಂದ್ರವಾಗಿ ಶ್ರೀಮಠ ರೂಪುಗೊಂಡಿದೆ. ಧರ್ಮರಕ್ಷಣೆಯ ನಿಟ್ಟಿನಲ್ಲಿ ಇಡೀ ಸಮಾಜ ಒಗ್ಗೂಡಬೇಕು. ಇದಕ್ಕೆ ಮಠಮಾನ್ಯಗಳು ಮಾರ್ಗದರ್ಶನ ನೀಡಬೇಕು ಎಂದು ಸಚಿವ ಎಸ್. ಅಂಗಾರ ಮಾತನಾಡಿ, ಶಾಸಕ ಸಂಜೀವ ಮಠಂದೂರು ಮಾತನಾಡಿ, ಶ್ರೀರಾಮನ ಆದರ್ಶ ನಮಗೆಲ್ಲರಿಗೆ ಮಾದರಿ ಎಂದು ಅಭಿಪ್ರಾಯಪಟ್ಟರು.

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಮೊಕ್ತೇಸರ ವಾಸುದೇವ ಅಸ್ರಣ್ಣ ಮಾತನಾಡಿ, ಹಿಂದೂ ಧರ್ಮವನ್ನು ಸಂಘಟಿತವಾಗಿ ಮುಂದೆ ಕೊಂಡೊಯ್ಯುವಲ್ಲಿ ರಾಘವೇಶ್ವರ ಶ್ರೀಗಳ ಪಾತ್ರ ಪ್ರಮುಖವಾದದ್ದು ಎಂದು ಬಣ್ಣಿಸಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಮಾತನಾಡಿ, ನಮ್ಮ ಸನಾತನ ಧರ್ಮ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುವಲ್ಲಿ ಭಾರತೀಯ ಗುರುಪರಂಪರೆ, ಗುರುತತ್ವ ಪ್ರಮುಖ ಪಾತ್ರ ವಹಿಸಿದೆ. ಸರ್ಕಾರದ ಅಧೀನದಲ್ಲಿರುವ ದೇವಸ್ಥಾನಗಳು ಧರ್ಮದ ಉಳಿವಿಗೆ ಮಾಡಬೇಕಾದ ಕಾರ್ಯವನ್ನು ಮಾಡುತ್ತಿಲ್ಲ. ಸನಾತನ ಧರ್ಮದ ಬಗ್ಗೆ ತಿಳಿವಳಿಕೆ ಮೂಡಿಸುವ ಕಾರ್ಯ ಆಗದಿದ್ದರೆ ಮುಂದಿನ ಪೀಳಿಗೆಗೆ ಕೊಡಲಿಯೇಟು ನೀಡಿದಂತಾಗುತ್ತದೆ ಎಂದು ಎಚ್ಚರಿಸಿದರು.

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಭಟ್, ವಿವಿ ಗೌರವಾಧ್ಯಕ್ಷ ಡಿ.ಡಿ.ಹೆಗಡೆ, ಶ್ರೀಕ್ಷೇತ್ರ ಗೋಕರ್ಣದ ತಂತ್ರಿಗಳಾದ ವೇದಮೂರ್ತಿ ಅಮೃತೇಶ ಭಟ್ ಹಿರೇ, ವಾಸ್ತು ತಜ್ಞ ಮಹೇಶ್ ಮುನಿಯಂಗಳ, ಕುಂಟಾರು ರವೀಶ್ ತಂತ್ರಿ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ.ಗಿರಿಧರ ಕಜೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಿಮ್ಮಪ್ಪ ಶೆಟ್ಟಿ ಚನಿಲ, ಕಾಂಗ್ರೆಸ್ ಮುಖಂಡ ಅಶೋಕ್ ಕುಮಾರ್ ರೈ, ಪುತ್ತೂರು ನಗರಸಭಾಧ್ಯಕ್ಷ ಜೀವಂದರ್ ಜೈನ್ ಉಪಸ್ಥಿತರಿದ್ದರು.

ಯಕ್ಷಧ್ರುವ ಪ್ರತಿಷ್ಠಾನದ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿಯವರು ಆಶಯಗೀತೆ ಪ್ರಸ್ತುತಪಡಿಸಿದರು. ಮಾಣಿಮಠ ಮಹಾಸಮಿತಿ ಅಧ್ಯಕ್ಷ ಹಾರಕೆರೆ ನಾರಾಯಣ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮಠದ ಲೋಕಸಂಪರ್ಕಾಧಿಕಾರಿ ಹರಿಪ್ರಸಾದ್ ಪೆರಿಯಾಪು, ಮಾಣಿಮಠದ ಸಮಿತಿ ಕಾರ್ಯದರ್ಶಿ ಬಂಗಾರಡ್ಕ ಜನಾರ್ದನ ಭಟ್, ಕೋಶಾಧಿಕಾರಿ ಮೈಕೆ ಗಣೇಶ ಭಟ್, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ಉಪಾಧ್ಯಕ್ಷೆ ಶೈಲಜಾ ಕೆ.ಟಿ.ಭಟ್, ಮಂಡಲ ಗುರಿಕ್ಕಾರರಾದ ಉದಯಕುಮಾರ್ ಖಂಡಿಗ, ಬ್ರಹ್ಮಕಲಶ ಸಮಿತಿ ಕಾರ್ಯದರ್ಶಿ ವೇಣುಗೋಪಾಲ ಕೆದ್ಲ, ಮೂರು ಮಂಡಲಗಳ ಅಧ್ಯಕ್ಷರಾದ ಪರಮೇಶ್ವರ ಭಟ್, ಗಣೇಶಮೋಹನ ಕಾಶಿಮಠ, ಬಾಲಸುಬ್ರಹ್ಮಣ್ಯ ಭಟ್ ಸರ್ಪಮೂಲೆ ಭಾಗವಹಿಸಿದ್ದರು. ದೇಗುಲ ಶಿಲ್ಪವನ್ನು ನಿರ್ಮಿಸಿಕೊಟ್ಟ ಕೃಷ್ಣ ಶಿಲ್ಪಿ ಹಾಗೂ ವಾಸ್ತುತಜ್ಞ ಮಹೇಶ್ ಮುನಿಯಂಗಳ ಅವರನ್ನು ಸನ್ಮಾನಿಸಲಾಯಿತು. ಬಂಗಾರಡ್ಕ ಜನಾರ್ದನ ಭಟ್ ವಂದಿಸಿದರು. ಡಾ.ಗೌತಮ ಕುಳಮರ್ವ ಅಭಿವೃದ್ಧಿಪಡಿಸಿದ ದಾನಧಾರ ಯೋಜನೆಯನ್ನು ಈ ಸಂದರ್ಭ ಸಮರ್ಪಿಸಲಾಯಿತು. ಆಂಜನೇಯ ಪೂಜಾ ವಿಧಿ ಕೃತಿಯನ್ನು ಲೋಕಾರ್ಪಣೆ ಮಾಡಲಾಯಿತು.

LEAVE A REPLY

Please enter your comment!
Please enter your name here