ರಾಮಕುಂಜ: ಕಡಬ ತಾಲೂಕಿನ ಕೊಯಿಲದಲ್ಲಿರುವ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರಕ್ಕೆ ಕಳೆದ 1 ತಿಂಗಳಿನಿಂದ ಪಶು ಆಹಾರ ಸರಬರಾಜು ಆಗದೇ ತಳಿ ಸಂರಕ್ಷಣೆ ಮತ್ತು ನಿರ್ವಹಣಾ ಕೇಂದ್ರದಲ್ಲಿನ ಮಲೆನಾಡು ಗಿಡ್ಡ ತಳಿಯ ಏಳೆಂಟು ಕರುಗಳು ಸಾವನ್ನಪ್ಪಿವೆ ಎಂದು ವರದಿಯಾಗಿದೆ. ಆದರೆ ಕೇಂದ್ರದ ಉಪನಿರ್ದೇಶಕರು ಇದನ್ನು ನಿರಾಕರಿಸಿದ್ದು ಹವಾಗುಣದಲ್ಲಿನ ಬದಲಾವಣೆಯಿಂದಾಗಿ ಆರು ಕರುಗಳು ಸಾವನ್ನಪ್ಪಿವೆ. ನಾಲ್ಕೈದು ದಿನ ಪಶು ಆಹಾರ ಸರಬರಾಜಿನಲ್ಲಿ ವಿಳಂಬವಾಗಿದ್ದು ಈಗ ಕೆಎಂಎಫ್ನಿಂದ ಪಶು ಆಹಾರ ತರಿಸಲಾಗಿದೆ ಎಂದು ಸ್ಪಷ್ಟಣೆ ನೀಡಿದ್ದಾರೆ.
ಕೊಯಿಲ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದಲ್ಲಿ ಮಲೆನಾಡು ಗಿಡ್ಡ ತಳಿಯ 700ಕ್ಕೂ ಹೆಚ್ಚು ಹಸು ಹಾಗೂ ಕರುಗಳಿವೆ. ಕೇಂದ್ರಕ್ಕೆ ಕೊಯಿಲದಲ್ಲಿ ಸಾವಿರಕ್ಕೂ ಮಿಕ್ಕಿ ಎಕ್ರೆ ಜಾಗವಿದ್ದು ಜಾನುವಾರುಗಳನ್ನು ಬೆಳಿಗ್ಗೆ ಹಾಗೂ ಸಂಜೆ ಮೇಯಲು ಬಿಡಲಾಗುತ್ತಿದೆ. ಆದರೆ ಈಗ ಹುಲ್ಲು ಒಣಗಿದ್ದು ಜಾನುವಾರುಗಳಿಗೆ ಬೇಕಾದಷ್ಟು ಪ್ರಮಾಣದಲ್ಲಿ ಹಸಿ ಹುಲ್ಲು ಸಿಗುತ್ತಿಲ್ಲ. ಇದರ ಜೊತೆಗೆ ಕಳೆದ 1 ತಿಂಗಳಿನಿಂದ ಪಶು ಆಹಾರ ಸರಬರಾಜೂ ಸ್ಥಗಿತಗೊಂಡು ಹಸು ಹಾಗೂ ಕರುಗಳಿಗೆ ಸಕಾಲದಲ್ಲಿ ಸಾಕಷ್ಟು ಪಶು ಆಹಾರವೂ ಸಿಗುತ್ತಿಲ್ಲ. ಇದರಿಂದಾಗಿ ಬಹುತೇಕ ಹಸು, ಕರುಗಳು ಅಶಕ್ತವಾಗಿವೆ. ಈ ಎಲ್ಲಾ ಕಾರಣಗಳಿಂದಾಗಿ ಕಳೆದ 1 ತಿಂಗಳ ಅವಧಿಯಲ್ಲಿ ಏಳೆಂಟು ಕರುಗಳು ಸಾವನ್ನಪ್ಪಿವೆ ಎಂದು ವರದಿಯಾಗಿದೆ.
ಕೊಯಿಲ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರಕ್ಕೆ ಪಶು ಆಹಾರ ಸರಬರಾಜಿಗೆ ಸಂಬಂಧಿಸಿ ಸರಕಾರದ ಮಟ್ಟದಲ್ಲೇ 1 ವರ್ಷಕ್ಕೆ ಟೆಂಡರ್ ಕರೆಯಲಾಗುತ್ತದೆ. ಚಲ್ಲಕೆರೆಯ ಕಂಪನಿಯೊಂದು ಪಶು ಆಹಾರ ಪೂರೈಕೆ ಟೆಂಡರ್ ಪಡೆದುಕೊಂಡು 1 ವರ್ಷ ಪಶು ಆಹಾರ ಪೂರೈಸಿದೆ. 1 ವರ್ಷ ಅವಧಿ ಮುಗಿದರೂ ಟೆಂಡರ್ ಷರತ್ತಿನಂತೆ ಕಂಪನಿ ಮತ್ತೆ 6 ತಿಂಗಳ ಕಾಲ ಪಶು ಆಹಾರ ಪೂರೈಸಿದೆ. ಆ ಬಳಿಕ ಕಂಪನಿಯವರು ಪಶು ಆಹಾರ ಪೂರೈಕೆ ಸ್ಥಗಿತಗೊಳಿಸಿದ್ದಾರೆ. ಇತ್ತ ಹೊಸ ಟೆಂಡರ್ ಸಹ ಕರೆದಿಲ್ಲ. ಇದರಿಂದಾಗಿ ಜಾನುವಾರು ಸಂವರ್ಧನಾ ಕೇಂದ್ರಕ್ಕೆ ಕಳೆದ 1 ತಿಂಗಳಿನಿಂದ ಪಶು ಆಹಾರ ಇಲ್ಲ. ಇದ್ದ ಹಸಿ ಹುಲ್ಲನ್ನೇ 700 ಜಾನುವಾರುಗಳಿಗೆ ಹಂಚಿ ಹಾಕಲಾಗಿದೆ. ಸಾಕಷ್ಟು ಪಶು ಆಹಾರ ಲಭಿಸದೆ ಏಳೆಂಟು ಕರುಗಳು ಸಾವನ್ನಪ್ಪಿವೆ ಎಂದು ವರದಿಯಾಗಿದೆ.
ಸಾಮರ್ಥ್ಯ 200, ಇರುವುದು 700:
ಕೊಯಿಲದಲ್ಲಿರುವ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದಲ್ಲಿ 200 ಹಸು ಹಾಗೂ ಕರುಗಳ ಸಾಕಾಣಿಕೆ ಸಾಮರ್ಥ್ಯವಿದೆ. ಆದರೆ ಈಗ ಇಲ್ಲಿ 700 ಹಸು ಹಾಗೂ ಕರುಗಳಿವೆ. ಕಳೆದ ಮೂರು ವರ್ಷಗಳಿಂದ ಜಾನುವಾರುಗಳ ಮಾರಾಟ ಟೆಂಡರ್ ಪ್ರಕ್ರಿಯೆ ನಡೆಯದೇ ಇರುವುದೂ ಜಾನುವಾರುಗಳ ಸಾಮರ್ಥ್ಯಕ್ಕೆ ಹೆಚ್ಚಳ ಕಾರಣವಾಗಿದೆ. ಪ್ರತಿ ವರ್ಷವೂ ಟೆಂಡರ್ ಕರೆದು ಹೋರಿ, ಗಂಡು ಕರುಗಳ ಮಾರಾಟ ಮಾಡಲಾಗುತ್ತಿದೆ. ಆದರೆ ಮೂರು ವರ್ಷದಿಂದ ಟೆಂಡರ್ ಪ್ರಕ್ರಿಯೆ ನಡೆಯದೇ ಇರುವುದರಿಂದ ಜಾನುವಾರುಗಳ ಸಂಖ್ಯೆಯೂ ಏರಿಕೆಯಾಗಿದೆ. ಅಮೃತಸಿರಿ ಯೋಜನೆಯ ಮೂಲಕ ಶಾಸಕರ ಶಿಫಾರಸ್ಸಿನ ಮೇರೆಗೆ ಪ್ರತಿವರ್ಷ ಇಲ್ಲಿಂದ 75 ಹೆಣ್ಣು ಕರುಗಳನ್ನು ಹೈನುಗಾರರಿಗೆ ನೀಡಲಾಗುತ್ತಿದೆ. ಕೇಂದ್ರಕ್ಕೆ ಬರುವ ಪಶು ಆಹಾರವನ್ನು ಎಲ್ಲಾ ಜಾನುವಾರುಗಳಿಗೆ ಹಂಚಬೇಕಾಗಿದೆ. ಕೇಂದ್ರದಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಜಾನುವಾರುಗಳು ಇರುವುದರಿಂದ ಜಾನುವಾರುಗಳಿಗೆ ಪಶು ಆಹಾರವೂ ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಆಹಾರ ಕೊರತೆ ಇಲ್ಲ
ಕೇಂದ್ರಕ್ಕೆ ಪಶು ಆಹಾರ ಸರಬರಾಜು ಆಗುವಲ್ಲಿ ನಾಲ್ಕೈದು ದಿನ ವಿಳಂಬ ಆಗಿದೆ. ಹಾಗಂತ ಜಾನುವಾರುಗಳಿಗೆ ಆಹಾರದ ಕೊರತೆ ಆಗಿಲ್ಲ. ಕೇಂದ್ರದಲ್ಲಿ ಬೆಳೆಸಿರುವ ಹಸಿ ಹುಲ್ಲು ಕಟಾವು ಮಾಡಿ ನೀಡಲಾಗಿದೆ. ಈ ಹಿಂದೆ ಜಾನುವಾರು ಸಂವರ್ಧನಾ ಕೇಂದ್ರಕ್ಕೆ ಪಶು ಆಹಾರ ಸರಬರಾಜು ಮಾಡುತ್ತಿದ್ದ ಕಂಪನಿಯವರ ಟೆಂಡರ್ ಅವಧಿ ಮುಗಿದಿದೆ. ಇದರಿಂದ ನಾಲ್ಕೈದು ದಿನಗಳಿಂದ ಸಮಸ್ಯೆ ಆಗಿತ್ತು. ಈಗ ಕೆಎಂಎಫ್ನಿಂದ ಪಶು ಆಹಾರ ತರಿಸಲಾಗಿದೆ. ಕೇಂದ್ರದಲ್ಲಿ 700ಹಸು ಹಾಗೂ ಕರುಗಳಿವೆ. ಸಾಮರ್ಥ್ಯಕ್ಕಿಂತ ಹೆಚ್ಚು ಜಾನುವಾರುಗಳಿರುವುದರಿಂದಲೂ ಸಮಸ್ಯೆಯಾಗಿದೆ. ಹವಮಾನದಲ್ಲಿನ ಬದಲಾವಣೆಯಿಂದಾಗಿ ಆರು ಕರುಗಳು ಸಾವನ್ನಪ್ಪಿವೆ ಎಂದು ಉಪನಿರ್ದೇಶಕ ಡಾ.ವೆಂಕಟೇಶ್ರವರು ‘ಸುದ್ದಿ’ಗೆ ತಿಳಿಸಿದ್ದಾರೆ.