ಪುತ್ತೂರು: 2022-23ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪುಣ್ಯಕೋಟಿ ದತ್ತು ಯೋಜನೆಗೆ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವ್ಯಾಪ್ತಿಯಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಗೋಶಾಲೆಗಳಲ್ಲಿರುವ ಕನಿಷ್ಟ 2 ಗೋವುಗಳನ್ನು ದತ್ತು ಪಡೆಯಲು ಸರ್ಕಾರ ಆದೇಶಿಸಿದೆ.
ಗೋ ಸಂಪತ್ತಿನ ಸಂರಕ್ಷಣೆಗೆ ಹೆಚ್ಚಿನ ಮಹತ್ವ ನೀಡುವ ಉದ್ದೇಶದಿಂದ ಗೋಹತ್ಯಾ ನಿರ್ಬಂಧ ಕಾಯ್ದೆಯನ್ನು ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿದ್ದು, ಈ ಮೂಲಕ ಸಂರಕ್ಷಿಸಲ್ಪಟ್ಟ ಜಾನುವಾರುಗಳ ನಿರ್ವಹಣೆಗಾಗಿ ರಾಜ್ಯ ಸರ್ಕಾರವು ಪುಣ್ಯಕೋಟಿ ದತ್ತು ಯೋಜನೆಯನ್ನು 2022ರ ಜುಲೈ28ರಿಂದ ಜಾರಿಗೊಳಿಸಿರುತ್ತದೆ. ಪ್ರಸ್ತುತ ರಾಜ್ಯದಲ್ಲಿ 199 ಗೋಶಾಲೆಗಳು ಕಾರ್ಯಾಚರಣೆಯಲ್ಲಿದ್ದು, ಒಟ್ಟು 33801 ರಾಸುಗಳನ್ನು ಕರ್ನಾಟಕ ಸರ್ಕಾರದ ಪಶು ಸಂಗೋಪನಾ ಇಲಾಖೆಯಿಂದ ನಿರ್ವಹಣೆ ಮಾಡಲಾಗುತ್ತಿದೆ. ಪುಣ್ಯಕೋಟಿ, ದತ್ತು ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, ಪ್ರತಿ ಜಾನುವಾರುವಿಗೆ ರೂ.11000/- ಮೊತ್ತವನ್ನು ದೇಣಿಗೆ ರೂಪದಲ್ಲಿ ಪಾವತಿಸುವ ಮೂಲಕ ಗೋಶಾಲೆಗಳಲ್ಲಿನ ಗೋವುಗಳನ್ನು ಸಾರ್ವಜನಿಕರು ಮತ್ತು ಖಾಸಗಿ ಸಂಸ್ಥೆಗಳು ದತ್ತು ಪಡೆಯಲು ಅವಕಾಶವನ್ನು ಕಲ್ಪಿಸಲಾಗಿರುತ್ತದೆ. ದೇಣಿಗೆ ರೂಪದಲ್ಲಿ ಪಾವತಿ ಮಾಡಲಾಗುವ ಮೊತ್ತವನ್ನು ಗೋಶಾಲೆಗಳಲ್ಲಿರುವ ಜಾನುವಾರುಗಳ ಪೋಷಣೆ, ಮೇವು ಹಾಗೂ ವೈದ್ಯಕೀಯ ವೆಚ್ಚಕ್ಕಾಗಿ ಬಳಕೆ ಮಾಡಿಕೊಳ್ಳಲಾಗುತ್ತದೆ.
ಆದ್ದರಿಂದ, ಹಾಲು ಉತ್ಪಾದಕರ ಸಹಕಾರ ಸಂಘಗಳು ಸಂಘದಲ್ಲಿನ ರಾಸು ಅಭಿವೃದ್ಧಿ ನಿಧಿಯನ್ನು ಬಳಸಿಕೊಂಡು ಪ್ರತಿ ಗೋವಿಗೆ ರೂ.11000/- ದೇಣಿಗೆಯಂತೆ ಕನಿಷ್ಟ 2 ಗೋವುಗಳಿಗೆ ಒಟ್ಟು ಮೊತ್ತ ರೂ.22000/- ಗಳನ್ನು ದೇಣಿಗೆಯಾಗಿ ನೀಡುವಂತೆ ಆದೇಶದಲ್ಲಿ ತಿಳಿಸಿದೆ.