ಜ.30, 31: ಒಡಿಯೂರು ಸಂಸ್ಥಾನದಲ್ಲಿ ತುಳುನಾಡ ಜಾತ್ರೆ-ಶ್ರೀ ಒಡಿಯೂರು ರಥೋತ್ಸವ

0

  •  ತುಳು ಸಾಹಿತ್ಯ ಸಮ್ಮೇಳನ ಜ ವಿಚಾರಗೋಷ್ಠಿ
  •  ತುಳು ನಾಟ್ಯ ಪ್ರದರ್ಶನ-ಯಕ್ಷಗಾನ ಬಯಲಾಟ
  •  ಐವರು ಸಾಧಕರಿಗೆ ತುಳು ಪ್ರಶಸ್ತಿ ಪ್ರದಾನ

ವಿಟ್ಲ: ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದಲ್ಲಿ ಜ. 30 ಹಾಗೂ ಜ. 31ರಂದು ಶ್ರೀ ಗುರುದೇವಾನಂದ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ತುಳುನಾಡ ಜಾತ್ರೆ – ಶ್ರೀ ಒಡಿಯೂರು ರಥೋತ್ಸವವು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.

ತುಳು ಸಾಹಿತ್ಯ ಸಮ್ಮೇಳನ: ಆಕಾಶವಾಣಿಯ ನಿವೃತ್ತ ನಿಲಯ ನಿರ್ದೇಶಕ, ಸಾಹಿತಿ, ಕವಿ ಡಾ. ವಸಂತಕುಮಾರ ಪೆರ್ಲ ರವರ ಅಧ್ಯಕ್ಷತೆಯಲ್ಲಿ ಎರಡು ದಿನ ತುಳು ಸಾಹಿತ್ಯ ಸಮ್ಮೇಳನ ನಡೆಯಲಿದೆ.

ಜ.30ರಂದು ಬೆಳಿಗ್ಗೆ ತುಳು ಸಾಹಿತ್ಯ ಸಮ್ಮೇಳನವನ್ನು ಶ್ರೀ ಗುರುದೇವಾನಂದ ಸ್ವಾಮೀಜಿಯವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ. ಭಂಡಾರಿ, ತುಳುವೆರೆ ಚಾವಡಿ ಬೆಂಗಳೂರು ಇದರ ಗೌರವಾಧ್ಯಕ್ಷ ಪುರುಷೋತ್ತಮ ಚೇಂಡ್ಲ, ದ.ಕ. ಜಿಲ್ಲಾ ಕ್ಯಾಟರಿಂಗ್ ಎಸೋಸಿಯೇಶನ್‌ನ ಅಧ್ಯಕ್ಷ ರಾಜ್‌ಗೋಪಾಲ ರೈ ಭಾಗವಹಿಸಲಿರುವರು.

ವಿಚಾರಗೋಷ್ಠಿ: ಬೆಳಿಗ್ಗೆ ಗಂಟೆ 11.30ಕ್ಕೆ ಜರಗುವ ತುಳು ತುಲಿಪು ವಿಚಾರಗೋಷ್ಠಿಯಲ್ಲಿ ’ನೆಲ’ ಎಂಬ ವಿಚಾರವಾಗಿ ಆಳ್ವಾಸ್ ಕಾಲೇಜಿನ ಪ್ರಾಧ್ಯಾಪಕ ಡಾ| ಯೋಗೀಶ್ ಕೈರೋಡಿ, ’ಜಲ’ ಎಂಬ ವಿಚಾರದ ಬಗ್ಗೆ ಹಿರಿಯ ಪತ್ರಕರ್ತ ಯು.ಕೆ. ಕುಮಾರನಾಥ್, ’ನಲಿಕೆ-ತೆಲಿಕೆ’ ವಿಚಾರದ ಕುರಿತು ದೈವ ನರ್ತಕ ಕಿಟ್ಟು ಕಲ್ಲುಗುಡ್ಡೆ ವಿಚಾರ ಮಂಡಿಸಲಿದ್ದಾರೆ.

ನೃತ್ಯ ಪ್ರದರ್ಶನ, ಯಕ್ಷಗಾನ ಬಯಲಾಟ: ಮಧ್ಯಾಹ್ನ ಗಂಟೆ 1.30ರಿಂದ ತುಳು ಜಾನಪದ ನಲಿಕೆ-ತೆಲಿಕೆ ಪಂತೊ-ತುಳು ಜಾನಪದ ನೃತ್ಯ ಪ್ರದರ್ಶನ ನಡೆಯಲಿದೆ. ಸಂಜೆ ಗಂಟೆ 6.30ರಿಂದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಕೃಪಾಪೋಷಿತ ಯಕ್ಷಗಾನ ಮಂಡಳಿ, ನಾಗವೃಜ ಕ್ಷೇತ್ರ, ಪಾವಂಜೆ ಇವರಿಂದ ’ಪಾವನ ಪವನಾತ್ಮಜ’ಯಕ್ಷಗಾನ ಬಯಲಾಟ ನಡೆಯಲಿದೆ.

ಜ.31ರಂದು ಬೆಳಿಗ್ಗೆ ಗಂಟೆ 9.30ಕ್ಕೆ ವೇ|ಮೂ| ಚಂದ್ರಶೇಖರ ಉಪಾಧ್ಯಾಯರವರ ಪೌರೋಹಿತ್ಯದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಆರಂಭಗೊಳ್ಳಲಿದೆ. ಬಳಿಕ ಗಂಟೆ 10.30ರಿಂದ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ತುಳು ಸಾಹಿತ್ಯ ಸಮ್ಮೇಳನದ ಸಮಾರೋಪ, ಒಡಿಯೂರು ತುಳು ನಾಟಕೋತ್ಸವ-ತುಳು ನಾಟಕ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ.

ಸಾಧ್ವಿ ಶ್ರೀ ಮಾತಾನಂದಮಯೀರವರು ಉಪಸ್ಥಿತರಿರಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಬಿ.ಜೆ.ಪಿ. ರಾಜ್ಯಾಧ್ಯಕ್ಷ, ದ.ಕ. ಸಂಸದ ನಳಿನ್ ಕುಮಾರ್ ಕಟೀಲು, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಯು., ಮುಂಬೈ ಹೇರಂಭ ಇಂಡಸ್ಟ್ರೀಸ್‌ನ ಅಧ್ಯಕ್ಷ ಸದಾಶಿವ ಶೆಟ್ಟಿ ಕೂಳೂರು ಕನ್ಯಾನ, ಮುಂಬೈನ ಸಂಜೀವನಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಸುರೇಶ್ ರಾವ್, ಮುಂಬೈ ಉದ್ಯಮಿಗಳಾದ ವಾಮಯ್ಯ ಬಿ. ಶೆಟ್ಟಿ, ದಯಾನಂದ ಹೆಗ್ಡೆ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಎ. ಸುರೇಶ್ ರೈ ಉಪಸ್ಥಿತರಿರುವರು.

ತುಳು ಪ್ರಶಸ್ತಿ ಪ್ರದಾನ: ಹಿರಿಯ ಮೃದಂಗ ವಾದಕ ವಿದ್ವಾನ್ ಬಾಬು ರೈ, ತುಳು ಸಾಹಿತಿ ಡಾ. ಸಾಯಿಗೀತಾ ತೋಕೂರುಗುತ್ತು, ದ.ಕ. ಹಾಲು ಉತ್ಪಾದಕರ ಒಕ್ಕೂಟದ ಉಪಾಧ್ಯಕ್ಷ ಎಸ್.ಬಿ. ಜಯರಾಮ ರೈ, ದತ್ತ ತುಳು ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸುಧಾಕರ ಶೆಟ್ಟಿ ಹಿರ್ಗಾನ, ಸಾವಯವ ಕೃಷಿಕ ರಾಮಣ್ಣ ಗೌಡ ಕಣಿಯೂರು ಇವರನ್ನು ’ತುಳುಸಿರಿ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಅಪರಾಹ್ನ 3ರಿಂದ ವೈಷ್ಣವಿ ನಾಟ್ಯಾಲಯ, ಪುತ್ತೂರು ಇವರಿಂದ ವಿದುಷಿ ಯೋಗೀಶ್ವರೀ ಜಯಪ್ರಕಾಶ್ ಇವರ ನಿರ್ದೇಶನದಲ್ಲಿ ’ನೃತ್ಯಾರ್ಪಣಮ್’ ಹಾಗೂ ಸಂಜೆ 5.30ರಿಂದ ಜರ್ನಿ ಥೇಟರ್ ಗ್ರೂಪ್, ಮಂಗಳೂರು ಇವರಿಂದ ಪ್ರೊ| ಅಮೃತ ಸೋಮೇಶ್ವರ ರಚಿಸಿ, ವಿದ್ದು ಉಚ್ಚಿಲ್ ನಿರ್ದೇಶನದ ’ಗೋಂದೊಳು’ ತುಳು ಜಾನಪದ ನಾಟಕ ನಡೆಯಲಿದೆ. ರಾತ್ರಿ ಗಂಟೆ 7.30ರಿಂದ ಶ್ರೀ ದತ್ತಾಂಜನೇಯ ದೇವರ ವೈಭವೋಪೇತ ರಥೋತ್ಸವ ನಡೆಯಲಿದೆ.

ನಾಳೆ ಹೊರೆಕಾಣಿಕೆ ಸಮರ್ಪಣೆ

ಒಡಿಯೂರು ಸಂಸ್ಥಾನದಲ್ಲಿ ಜ.30-31ರಂದು ನಡೆಯಲಿರುವ ತುಳುನಾಡ ಜಾತ್ರೆ – ಶ್ರೀ ಒಡಿಯೂರು ರಥೋತ್ಸವದ ಪ್ರಯುಕ್ತ ಜ.28ರಂದು ಹಸಿರುವಾಣಿ ಸಮರ್ಪಣೆ ನಡೆಯಲಿದೆ. ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ತಾಲೂಕುಗಳು ಸೇರಿದಂತೆ ದ.ಕ. ಜಿಲ್ಲೆ ಹಾಗೂ ಕಾಸರಗೋಡು ಜಿಲ್ಲೆಯ ವಿವಿಧ ಭಾಗಗಳಿಂದ ಭಕ್ತಾದಿಗಳು ಸಂಗ್ರಹಿಸಿದ ಹಸಿರುವಾಣಿಯ ವಾಹನಗಳು ಆ ದಿನ ಮಧ್ಯಾಹ್ನಕನ್ಯಾನ ತಲುಪಲಿದ್ದು, ಎಲ್ಲಾಭಾಗಗಳಿಂದ ಬಂದ ವಾಹನಗಳು ಕನ್ಯಾನದಲ್ಲಿ ಜೊತೆಯಾಗಿ ಅಲ್ಲಿಂದ ಮೆರವಣಿಗೆ ಮೂಲಕ ಕ್ಷೇತ್ರ ತಲುಪಲಿದೆ.

LEAVE A REPLY

Please enter your comment!
Please enter your name here