ಪುತ್ತೂರು: ಹುಟ್ಟುಹಬ್ಬ ಎಂದರೆ ಅದು ಮನುಷ್ಯನಿಗೆ ಸಂತೋಷ ಕೊಡುವ ವಿಚಾರ. ಮಾನವನ ಜೀವಿತದಲ್ಲಿ ಹುಟ್ಟುಹಬ್ಬ ಎಂಬುದು ಪ್ರಮುಖವಾದ ಘಟ್ಟವಾಗಿದೆ. ಕೆಲವರು ತಮ್ಮ ಬೆಳ್ಳಿಹಬ್ಬ, ಸುವರ್ಣ ಹುಟ್ಟುಹಬ್ಬ, ವಜ್ರಮಹೋತ್ಸವವನ್ನು ವಿಜ್ರಂಭಣೆಯಿಂದ ಆಚರಿಸುತ್ತಿರುವುದು ನಾವು ಕಂಡಿದ್ದೇವೆ. ಆದರೆ ಇಲ್ಲೊಬ್ಬರು ತನ್ನ ಸುವರ್ಣ ವರ್ಷದ ಹುಟ್ಟುಹಬ್ಬವನ್ನು ವಿಶೇಷಚೇತನರ ಆಶ್ರಮದಲ್ಲಿ ಬಹಳ ಸರಳತೆಯಿಂದ ಆಚರಿಸಿ ಸರಳತೆಯ ಭಾಷ್ಯವನ್ನು ಮೆರೆದು ಎಲ್ಲರಿಗೂ ಮಾದರಿಯಾಗಿದ್ದಾರೆ.
ಮುಕ್ರಂಪಾಡಿಯ ಬೀರಮಲೆ ಎಂಬಲ್ಲಿನ ವಿಶೇಷಚೇತನರ ಆಶ್ರಮವೆನಿಸಿದ ಪ್ರಜ್ಞಾ ಆಶ್ರಮ ಕೇಂದ್ರದಲ್ಲಿನ ವಿಶೇಷಚೇತನರೊಂದಿಗೆ ಸಹ ಭೋಜನ ಮಾಡುವ ಮೂಲಕ ಸರಳತೆ ಮೆರೆದ ವ್ಯಕ್ತಿಯೇ ಉದ್ಯಮಿ ಶಿವರಾಂ ಆಳ್ವ ಬಳ್ಳಮಜಲುರವರು. ಜ.26 ದೇಶದ ಸಂವಿಧಾನ ದಿನವಾದ ಗಣರಾಜ್ಯೋತ್ಸವದಂದು ಉದ್ಯಮಿ ಶಿವರಾಂ ಆಳ್ವರವರು ಹುಟ್ಟಿದ್ದು ಪ್ರಸಕ್ತ ವರ್ಷ ಅವರಿಗೆ ಜೀವನದ 50ನೇ ಹುಟ್ಟುಹಬ್ಬದ ಸಂಭ್ರಮವಾಗಿದೆ. ಕಳೆದ ವರ್ಷ ಶಿವರಾಂ ಆಳ್ವ ಹಾಗೂ ಸೀಮಾ ಶಿವರಾಂ ಆಳ್ವ ದಂಪತಿ ತಮ್ಮ ಬೆಳ್ಳಿ ಹಬ್ಬದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದ್ದರು.
ತನ್ನ ಹುಟ್ಟುಹಬ್ಬವನ್ನು ಪ್ರಜ್ಞಾ ಆಶ್ರಮದಲ್ಲಿನ ವಿಶೇಷಚೇತನರೊಡಗೂಡಿ ಆಚರಿಸಬೇಕು ಎನ್ನುವ ನಿಲುವಿನೊಂದಿಗೆ ತನ್ನ ಪತ್ನಿ ಸೀಮಾ ಶಿವರಾಂ ಆಳ್ವ, ಪುತ್ರಿ ವರ್ಷಿಣಿ ಆಳ್ವರವರಲ್ಲದೆ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ವಿಕ್ರಾಂತ್ ರೋಣ ಸಿನಿಮಾ ನಿರ್ದೇಶಕ ಅನೂಪ್ ಭಂಡಾರಿ, ನಟ ಸುರೇಶ್ ರೈ ಸೇರಿದಂತೆ ಆತ್ಮೀಯ ಅತಿಥಿಗಳೊಂದಿಗೆ ಸೇರಿಕೊಂಡು ಆಶ್ರಮದಲ್ಲಿನ ವಿಶೇಷಚೇತನರೊಂದಿಗೆ ಕೇಕ್ ಕತ್ತರಿಸಿ ತನ್ನ ಹುಟ್ಟುಹಬ್ಬದ ಸಿಹಿಯನ್ನು ಹಂಚಿಕೊಂಡರು. ಅಲ್ಲದೆ ಆಶ್ರಮದಲ್ಲಿನ ವಿಶೇಷಚೇತನರೊಂದಿಗೆ ಸಹ ಭೋಜನ ಮಾಡಿ, ಅವರಿಗೆ ಮತ್ತು ಆಶ್ರಮವನ್ನು ಮುನ್ನೆಡೆಸುವ ಅಣ್ಣಪ್ಪ ದಂಪತಿಗೆ ಉಡುಗೆ-ತೊಡುಗೆಗಳ ವಿಶೇಷ ಕೊಡುಗೆಯನ್ನು ನೀಡುವ ಮೂಲಕ ಗಮನಸೆಳೆದರು. ಸಂಜೆ ಕೋಟಿ-ಚೆನ್ನಯ ಕಂಬಳ ನಡೆಯುವ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಗದ್ದೆಯಲ್ಲಿಯೂ ಕಂಬಳ ಸಮಿತಿಯವರ ಎದುರು ಶಿವರಾಂ ಆಳ್ವರವರು ಹುಟ್ಟುಹಬ್ಬದ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನು ಆಚರಿಸಿದರು.
ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿ, ಕುರಿಯ ಉಳ್ಳಾಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಗೌರವಾಧ್ಯಕ್ಷ, ಸಂಪ್ಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಗೌರವ ಸಲಹೆಗಾರರಾಗಿರುವ ಉದ್ಯಮಿ ಶಿವರಾಂ ಆಳ್ವರವರ ಹುಟ್ಟುಹಬ್ಬದ ಸಂದರ್ಭದಂದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ವಿಕ್ರಾಂತ್ ರೋಣ ಸಿನಿಮಾ ನಿರ್ದೇಶಕ ಅನೂಪ್ ಭಂಡಾರಿ, ನಟ ಸುರೇಶ್ ರೈರವರಲ್ಲದೆ ಕೋಟಿ-ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಉದ್ಯಮಿ ಮಂಗಳೂರಿನ ಉಮೇಶ್ ನಾಡಾಜೆ, ಬನ್ನೂರು ರೈತ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಈಶ್ವರ್ ಭಟ್ ಪಂಜಿಗುಡ್ಡೆ, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ, ಬಿಜೆಪಿ ಮುಖಂಡ ಸಾಜ ರಾಧಾಕೃಷ್ಣ ಆಳ್ವ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ್ ರೈ, ಜಿಲ್ಲಾ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಜೋಕಿಂ ಡಿ’ಸೋಜ, ಪ್ರಮುಖರಾದ ಪ್ರವೀಣ್ಚಂದ್ರ ಆಳ್ವ, ಶರೂನ್ ಸಿಕ್ವೇರಾ, ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಮಹಮದ್ ಬಡಗನ್ನೂರು, ಶಶಿಕಿರಣ್ ರೈ ನೂಜಿ, ಶಿವರಾಂ ಆಳ್ವರವರ ಕುಟುಂಬಸ್ಥರು ಸಹಿತ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.