ಉಪ್ಪಿನಂಗಡಿ: ಪುತ್ತೂರು ತಾಲೂಕಿನ ಉಪ್ಪಿನಂಗಡಿ ಗ್ರಾ.ಪಂ.ನ ಭ್ರಷ್ಟಾಚಾರ ಹಾಗೂ ದುರಾಡಳಿತದ ವಿರುದ್ಧ ನಾಗರಿಕರ ವತಿಯಿಂದ ಜ.27ರಂದು ಗ್ರಾ.ಪಂ. ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್‌ನ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ., ಉಪ್ಪಿನಂಗಡಿ ಗ್ರಾಮ ಪಂಚಾಯತ್‌ನಲ್ಲಿ ಬಿಜೆಪಿ ಬೆಂಬಲಿತ ಸದಸ್ಯರ ಆಡಳಿತವಿದ್ದು, ಜನವಿರೋಧಿ ನೀತಿಯನ್ನು ಅನುಸರಿಸಲಾಗುತ್ತಿದೆ. ಬಡ ಜನರ, ಸಾರ್ವಜನಿಕರ ಆಶೋತ್ತರಗಳಿಗೆ ಸ್ಪಂದಿಸಬೇಕಾದ ಪಂಚಾಯತ್‌ನ ಅಧ್ಯಕ್ಷರು ತಾನೇ ಗ್ರಾ.ಪಂ.ನ ಸಾಮಾನ್ಯ ಸಭೆ ಕರೆದು, ತನ್ನ ಸ್ವಾರ್ಥ ಸಾಧನೆಗಾಗಿ ಸಭೆಯನ್ನೇ ಬರ್ಖಾಸ್ತುಗೊಳಿಸುವ ಮೂಲಕ ಜನಸಾಮಾನ್ಯರಿಗೆ ಅನ್ಯಾಯವೆಸಗಿದ್ದಾರೆ. ಸಭೆ ರದ್ದುಗೊಂಡಿದ್ದರಿಂದ ಡೋರ್‌ನಂಬರ್, ಮನೆ ನಿರ್ಮಾಣ, ಅಂಗಡಿ ಪರವಾನಿಗೆ ಸೇರಿದಂತೆ ಇನ್ನಿತರ ಅರ್ಜಿಗಳು ವಿಲೇಗೊಳ್ಳದೆ ಜನ ಸಾಮಾನ್ಯರು ಕಷ್ಟಕ್ಕೆ ಸಿಲುಕುವಂತಾಗಿದೆ. ಉಪ್ಪಿನಂಗಡಿ ಗ್ರಾ.ಪಂ. ಬಿಜೆಪಿ ಬೆಂಬಲಿತ ಆಡಳಿತದಲ್ಲಿ ಸಮಸ್ಯೆಗಳ ಆಗರವಾಗಿದ್ದು, ಎಲ್ಲರಿಗೆ ಸಮಾನ ನ್ಯಾಯ ಕೊಡಬೇಕಾದ ಆಡಳಿತವು ಇಲ್ಲಿ ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ ಎಂಬಂತೆ ತಾರತಮ್ಯ ನೀತಿ ಅನುಸರಿಸುತ್ತಿದೆ. ಪಂಚಾಯತ್ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆಯೂ ಸರಿಯಾಗಿ ನಡೆಯುತ್ತಿಲ್ಲ. ಇವೆಲ್ಲಾ ಇಲ್ಲಿನ ದುರಾಡಳಿತಕ್ಕೆ ಕೈಗನ್ನಡಿಯಾಗಿದ್ದು, ಸರಿಯಾಗಿ ಆಡಳಿತ ನಡೆಸಲು ಆಗದ ಅಧ್ಯಕ್ಷರು ರಾಜೀನಾಮೆಯನ್ನು ಕೊಟ್ಟು ಹೊರನಡೆಯಲಿ ಎಂದರು.
ದ.ಕ. ಜಿಲ್ಲಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಉಮಾನಾಥ ಶೆಟ್ಟಿ ಪೆರ್ನೆ ಮಾತನಾಡಿ, ಪಂಚಾಯತ್ ರಾಜ್ ಆಕ್ಟ್‌ನಲ್ಲಿ ಸಭೆ ಕರೆಯುವ ಅಧಿಕಾರ ಅಧ್ಯಕ್ಷರಿಗೆ ಹೇಗೆ ಕೊಡಲಾಗಿದೆಯೋ ಅದೇ ರೀತಿ ಸಭೆಯನ್ನು ನಡೆಸಿಕೊಂಡು ಹೋಗುವ ಜವಾಬ್ದಾರಿಯನ್ನು ಕೊಡಲಾಗಿದೆ. ಆದರೆ ಅವರ ಗೌರವವನ್ನು ಉಳಿಸಿಕೊಳ್ಳದ ಗ್ರಾ.ಪಂ. ಅಧ್ಯಕ್ಷರು ಸಾಮಾನ್ಯ ಸಭೆಯನ್ನು ರದ್ದು ಮಾಡಿದ್ದಾರೆ. ಇದರಿಂದ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳು ಕುಂಠಿತವಾಗುವಂತಾಗಿದೆ. ಪಂಚಾಯತ್ ರಾಜ್ ಕಾಯ್ದೆಯಂತೆ ಒಬ್ಬ ಚುನಾಯಿತ ಗ್ರಾ.ಪಂ. ಪ್ರತಿನಿಧಿಗೆ ಅವ ಚುನಾಯಿತನಾಗಿರುವಷ್ಟು ದಿನ ಗ್ರಾ.ಪಂ.ನ ಕಾಮಗಾರಿಯನ್ನು ನಿರ್ವಹಿಸುವಂತಿಲ್ಲ. ಗ್ರಾ.ಪಂ.ನ ಕಟ್ಟಡವನ್ನು ತನ್ನ ಸ್ವಂತಕ್ಕೆ ಬಳಸುವಂತಿಲ್ಲ. ಆದರೆ ಇಲ್ಲಿ ಅಧ್ಯಕ್ಷರು ಗ್ರಾ.ಪಂ.ನ ಕಟ್ಟಡವನ್ನು ಸ್ವಂತಕ್ಕೆ ಬಳಕ್ಕೆ ಬಳಕೆ ಮಾಡಿಕೊಂಡಿರುವುದು ಕಾನೂನು ಬಾಹಿರವಾಗಿದ್ದು, ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರಲ್ಲದೆ, ಕಾನೂನು ಬಾಹಿರ ಅಂತ ಹೇಳಿ ಬ್ಯಾನರ್‌ಗಳನ್ನು ತೆರವುಗೊಳಿಸಲು ಅಧಿಕಾರಿಗಳು ಮುಂದಾದರೆ ತಮ್ಮ ಪ್ರಭಾವ ಬಳಸಿ ಅದನ್ನು ತಡೆಯುವ ಕೆಲಸ ಇಲ್ಲಿನ ಆಡಳಿತಗಾರರಿಂದಾಗುತ್ತದೆ. ಇದು ಸರ್ವಾಧಿಕಾರದ ಪರಮಾವಧಿ ಎಂದರು.
ಉಪ್ಪಿನಂಗಡಿ ಗ್ರಾ.ಪಂ. ಸದಸ್ಯ ಅಬ್ದುರ್ರಹ್ಮಾನ್ ಕೆ. ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾ.ಪಂ. ಅಧ್ಯಕ್ಷರು ತನ್ನ ಎರಡು ವರ್ಷಗಳ ಅವಧಿಯಲ್ಲಿ ಅಧಿಕಾರ ದುರುಪಯೋಗ ಹಾಗೂ ಭ್ರಷ್ಟಾಚಾರವನ್ನುವೆಸಗಿದ್ದು, ತನ್ನ ಹೆಸರಿನಲ್ಲಿ ಪಡೆದ ಪಂಚಾಯತ್‌ನ ಅಂಗಡಿ ಕೋಣೆಯ ಅವಧಿ 2023 ಫೆಬ್ರವರಿ ತಿಂಗಳಿಗೆ ಮುಗಿದಿದ್ದರೂ, ಪಕ್ಕದ ಅಂಗಡಿ ಕೋಣೆಯನ್ನು ಆ ಅವಧಿಗೆ ಮಾತ್ರ ಬದಲಾಯಿಸಿಕೊಳ್ಳುವುದೆಂದು ಸಭೆಯಲ್ಲಿ ಹೇಳಿಕೆಕೊಟ್ಟು, ಆ ಕೊಠಡಿಯನ್ನು ಮುಂದಿನ ಮೂರು ವರ್ಷಗಳ ಅವಧಿಗೆ ಏಲಂ ರಹಿತವಾಗಿ ಮಾಡಿಕೊಂಡಿರುವುದಲ್ಲದೆ, ಈ ಬಗ್ಗೆ ಕಾನೂನು ಬಾಹಿರ ನಿರ್ಣಯಗಳನ್ನು ಬರೆಸಿದ್ದಾರೆ. ಹೀಗೆ ಪಡೆದ ಕೊಠಡಿಯನ್ನು ಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿ ಅರ್ಜಿ ಹಾಕದೆ ಪಿಡಿಒ ಅವರಿಗೆ ಒತ್ತಡ ಹಾಕಿ ವ್ಯಾಪಾರ ಪರವಾನಿಗೆ ಪಡೆದಿದ್ದಾರೆ. ಅಲ್ಲದೆ, ತನ್ನ ಪಕ್ಷದ ಕಾರ್ಯಕರ್ತ ಹಾಗೂ ತನ್ನ ಬೆಂಬಲಿಗನಾಗಿರುವ ವ್ಯಕ್ತಿಯು ಪಂಚಾಯತ್‌ನಿಂದ ಪಡೆದ ಅಂಗಡಿ ಕೋಣೆಯ ಸುಮಾರು ಒಂದೂವರೆ ಲಕ್ಷದಷ್ಟು ಹಣವನ್ನು ಪಂಚಾಯತ್‌ಗೆ ಪಾವತಿಸಲು ಬಾಕಿಯಿದ್ದು, ಈ ಬಗ್ಗೆ ಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿ ಅಂಗಡಿ ಕೋಣೆಗೆ ಬೀಗ ಹಾಕಿ ಚೆಕ್ ಬೌನ್ಸ್ ಕೇಸ್ ಹಾಕಬೇಕೆಂದು ನಿರ್ಣಯ ಮಾಡಿದರೂ, ಅದನ್ನು ಕಾರ್ಯರೂಪಕ್ಕೆ ತಾರದಂತೆ ಪಿಡಿಓರವರಿಗೆ ಅಧ್ಯಕ್ಷರು ಒತ್ತಡ ಹಾಕಿದ್ದಾರೆ. 94 ಸಿ ಅಡಿಯಲ್ಲಿ ಅರ್ಜಿ ಕೊಟ್ಟ ಒಂದು ಸಮುದಾಯದವರ ಮನೆಗಳ ಅಡಿ ಸ್ಥಳವನ್ನು ಮಂಜೂರಾತಿಗಾಗಿ ಕೊಟ್ಟಿರುವ ಕಡತವನ್ನು ತಿರಸ್ಕರಿಸಬೇಕೆಂದು ಉಪ್ಪಿನಂಗಡಿ ಗ್ರಾಮಕರಣಿಕರಿಗೆ ಒತ್ತಡ ಹಾಕಿದ್ದಾರೆ. ಇದರೊಂದಿಗೆ ತನಗೆ ಇಷ್ಟ ಬಂದ ಹಾಗೆ ಗ್ರಾ.ಪಂ.ನ ಸಾಮಾನ್ಯ ಸಭೆಯನ್ನು ರದ್ದುಗೊಳಿಸಿದ್ದಾರೆ. ಹೀಗೆ ತಾನು ಪಂಚಾಯತ್‌ನ ಅಧ್ಯಕ್ಷರಾದ ಬಳಿಕ ಹತ್ತು ಹಲವು ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ, ನಗರ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದಾಲಿ, ಪಂಚಾಯತ್ ರಾಜ್ ಕಾಂಗ್ರೆಸ್ ಒಕ್ಕೂಟದ ಅಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್. ಮುಹಮ್ಮದ್, ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು, ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಯುನಿಕ್, 34 ನೆಕ್ಕಿಲಾಡಿ ವಲಯಾಧ್ಯಕ್ಷೆ ಅನಿ ಮಿನೇಜಸ್, ಉಪಾಧ್ಯಕ್ಷ ಅಬ್ದುಲ್ ಖಾದರ್ ಸಂತೆಕಟ್ಟೆ, ಕಾರ್ಯದರ್ಶಿ ಕಲಂದರ್ ಶಾಫಿ, ಕಾಂಗ್ರೆಸ್ ಕೋಡಿಂಬಾಡಿ ವಲಯಾಧ್ಯಕ್ಷ ಮೋನಪ್ಪ ಪಲ್ಲಮಜಲು, ಪುತ್ತೂರು ತಾಲೂಕು ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರು, ಎಸ್‌ಡಿಪಿಐನ ಇಬ್ರಾಹೀಂ ಸಾಗರ್, ಝಕಾರಿಯಾ ಕೊಡಿಪ್ಪಾಡಿ, ರಿಯಾಝ್ ಕಡಂಬೂರು, ಉಪ್ಪಿನಂಗಡಿ ಗ್ರಾ.ಪಂ. ಸದಸ್ಯರಾದ ಯು.ಟಿ. ತೌಸೀಫ್, ವಿದ್ಯಾಲಕ್ಷ್ಮೀ ಪ್ರಭು, ಇಬ್ರಾಹೀಂ ಕೆ., ಇಬ್ರಾಹೀಂ ಮೈಸೀದಿ, ಅಬ್ದುರ್ರಶೀದ್, ಪ್ರಮುಖರಾದ ಕೃಪಾ ಆಳ್ವ, ಚಂದ್ರಹಾಸ ಶೆಟ್ಟಿ, ಅಝೀಝ್ ಬಸ್ತಿಕ್ಕಾರ್, ಜಯಶೀಲ ಶೆಟ್ಟಿ, ನಝೀರ್ ಮಠ, ಶ್ರೀನಿವಾಸ ಶೆಟ್ಟಿ ಪೊಳ್ಯ, ಅಶ್ರಫ್ ವಿ.ಕೆ., ನವಾಝ್ ಕರುವೇಲು, ಆದಂ ಕೊಪ್ಪಳ ಮತ್ತಿತರರು ಉಪಸ್ಥಿತರಿದ್ದರು.