ಪುತ್ತೂರು: ಪಾಣಾಜೆ ಗ್ರಾಮದ ಕುಂದಾಲ್ಕನದ ಮನೆಯೊಂದರಲ್ಲಿದ್ದ ಮಕ್ಕಳಿಲ್ಲದ ವೃದ್ಧ ದಂಪತಿಯ ಪೈಕಿ ಪತ್ನಿ ಮೃತಪಟ್ಟಾಗ ವೃದ್ದ ಪತಿ ಅಸ್ವಸ್ಥಗೊಂಡಿರುವ ಮಾಹಿತಿ ಪಡೆದ ವಾರದ ಹಿಂದೆಯಷ್ಟೆ ಕರ್ತವ್ಯಕ್ಕೆ ಹಾಜರಾಗಿರುವ ಸಂಪ್ಯ ಪೊಲೀಸ್ ಠಾಣೆಯ ಎಸ್.ಐ ಶ್ರೀನಾಥ್ ರೆಡ್ಡಿಯವರು ವೃದ್ದ ದಂಪತಿ ಮನೆಗೆ ಹೋಗಿ ವೃದ್ಧ ಪತಿಯನ್ನು ಇಲಾಖಾ ವಾಹನದಲ್ಲೇ ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವಿಯತೆ ಮೆರೆದಿದ್ದಾರೆ.
ಕುಂದಾಲ್ಕನ ಮನೆಯಲ್ಲಿದ್ದ ಕೃಷ್ಣ ನಾಯ್ಕ ಮತ್ತು ಅನಿತಾ ದಂಪತಿ ಪೈಕಿ ಅನಿತಾ(೫೨ವ)ರವರು ಜ.೨೮ರಂದು ನಿಧನರಾದರು. ಪತ್ನಿ ಮೃತಪಟ್ಟಿರುವದನ್ನು ಕಂಡ ಕೃಷ್ಣ ನಾಯ್ಕ ಅವರ ತೀವ್ರ ಅಸ್ವಸ್ಥಕ್ಕೆ ಒಳಗಾಗಿರುವ ಮಾಹಿತಿ ಪಡೆದ ಗ್ರಾಮದ ಜಾತ್ರೋತ್ಸವದ ಬಂದೋಬಸ್ತ್ನಲ್ಲಿದ್ದ ಸಂಪ್ಯ ಪೊಲೀಸ್ ಠಾಣೆಯ ಎಸ್.ಐ ಶ್ರೀನಾಥ್ ರೆಡ್ಡಿಯವರು ತಮ್ಮ ಇಲಾಖಾ ವಾಹನದಲ್ಲೇ ಅಸ್ವಸ್ಥಗೊಂಡ ಕೃಷ್ಣ ನಾಯ್ಕ ಅವರನ್ನು ಪುತ್ತೂರು ಸರಕಾರಿ ಅಸ್ಪತ್ರೆಗೆ ಕರೆ ತಂದು ಬಳಿಕ ಮಂಗಳೂರು ಆಸ್ಪತ್ರೆಗೆ ದಾಖಿಲಿಸಿ ಸೂಕ್ತ ಚಿಕಿತ್ಸೆ ಕೊಡಿಸಿದ್ದಾರೆ. ಈ ನಡುವೆಯೂ ವೃದ್ದ ಮಹಿಳೆಯ ಅಂತ್ಯಕ್ರಿಯೆಗೂ ಸಿಬ್ಬಂದಿಗಳನ್ನು ನಿಯೋಜಿಸಿ ಅಗತ್ಯ ಕ್ರಮ ಕೈಗೊಂಡಿದ್ದಾರೆ. ಒಟ್ಟಿನಲ್ಲಿ ಎಸ್.ಐ ಶ್ರೀನಾಥ್ ರೆಡ್ಡಿಯವರು ಘಟನೆ ಸಂದರ್ಭ ತಕ್ಷಣ ಸ್ಪಂಧನೆ ನೀಡಿ ಓರ್ವ ವೃದ್ದನ ರಕ್ಷಣೆ ಮಾಡಿರುವುದು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ವೃದ್ಧನ ರಕ್ಷಣೆಗೆ ಸಂಪ್ಯ ಪೊಲೀಸ್ ಠಾಣಾ ಸಿಬ್ಬಂದಿಗಳಾದ ವರ್ಗಿಸ್, ಹರ್ಷಿತ್, ಗಿರೀಶ್ ಕೆ, ಸದ್ದಾಂ ಎಸ್.ಐ ಜೊತೆ ಸಹಕರಿಸಿದ್ದಾರೆ.