ಪುತ್ತೂರಿಗೆ ಮೆಡಿಕಲ್ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜು ಹೋರಾಟ ಸಮಿತಿಯ ನೇತೃತ್ವದಲ್ಲಿ ಕಾಲ್ನಡಿಗೆ ಜಾಥಾ

0

ಪುತ್ತೂರು: ಪುತ್ತೂರಿಗೆ ಸುಸಜ್ಜಿತವಾದ ಮೆಡಿಕಲ್ ಕಾಲೇಜು ಸ್ಥಾಪನೆ ಆಗಬೇಕೆಂದು ಆಗ್ರಹಿಸಿ ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜು ಹೋರಾಟ ಸಮಿತಿಯ ನೇತೃತ್ವದಲ್ಲಿ ಕಾಲ್ನಡಿಗೆ ಜಾಥಾ ಜ.30 ರಂದು ಪುತ್ತೂರು ದರ್ಬೆಯಿಂದ ಬೊಳುವಾರು ತನಕ ನಡೆಯಿತು.

ಪುತ್ತೂರಿನಲ್ಲಿ, ಸುಧಾರಿತ ತೃತೀಯ ಹಂತದ ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದಾಗಿ ರೋಗಿಗಳನ್ನು ಚಿಕಿತ್ಸೆಗಾಗಿ ಮಂಗಳೂರು ಅಥವಾ ಮಣಿಪಾಲದಂತಹ ದೂರದ ನಗರಗಳಿಗೆ ಕಳುಹಿಸಲಾಗುತ್ತದೆ. ಇದು ಮಧ್ಯಮ ವರ್ಗದ ಕುಟುಂಬಗಳ ಆರ್ಥಿಕ ಹೊರೆಯನ್ನು ಹೆಚ್ಚಿಸುವುದಲ್ಲದೆ ಜೀವವನ್ನು ಉಳಿಸುವಲ್ಲಿ ನಿರ್ಣಾಯಕವಾಗಬಲ್ಲ ಅಮೂಲ್ಯ ಸಮಯವನ್ನು ವ್ಯರ್ಥಗೊಳಿಸುತ್ತದೆ. ಬಡ ಮತ್ತು ಭೂರಹಿತ ಸಮಾಜದ ಅನೇಕರಿಗೆ, ತೃತೀಯ ಹಂತದ ಚಿಕಿತ್ಸೆಯು ಕೈಗೆಟಕಲಾಗದಷ್ಟು ಕಷ್ಟ ಇನ್ನೂ ಇದೆ. ಪುತ್ತೂರಿನಲ್ಲಿ ಸರಕಾರಿ ಆಸ್ಪತ್ರೆ ಮೇಲ್ದರ್ಜೆಗೊಂಡು, ಒಂದು ಸುಸಜ್ಜಿತ ಮೆಡಿಕಲ್ ಕಾಲೇಜು ಸ್ಥಾಪನೆಯಾದರೆ, ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ. ಇದು ಗುಣಮಟ್ಟದ ಆರೋಗ್ಯ ಸೇವೆ ಒದಗಿಸುತ್ತದೆ ಮತ್ತು ತುರ್ತು ಸಂದರ್ಭಗಳಲ್ಲಿ ದೂರದ ಪ್ರಯಾಣ ಮಾಡಬೇಕಾದ ರೋಗಿಗಳ ನೋವನ್ನು ಕೊನೆಗೊಳಿಸುತ್ತದೆ. ಈ ಬೇಡಿಕೆಗೆ ಬೆಂಬಲವಾಗಿ ಕಾಲ್ನಡಿಗೆ ಜಾಥಾ ಮೂಲಕ ಪುತ್ತೂರು ಪೇಟೆಯ ಎಲ್ಲಾ ಅಂಗಡಿಗಳಿಗೆ ಮೆಡಿಕಲ್ ಕಾಲೇಜು ಪುತ್ತೂರಿಗೆ ಬಂದರೆ ಆಗುವ ಪ್ರಯೋಜನಗಳ ಕುರಿತ ಮಾಹಿತಿಯುಳ್ಳ ಕರ ಪತ್ರವನ್ನು ಹಂಚಲಾಯಿತು. ಜೊತೆಗೆ ಪುತ್ತೂರು ಜಿಲ್ಲೆಯಾಗಬೇಕೆಂಬ ಬೇಡಿಕೆಯನ್ನೂ ಕೂಡಾ ಮುಂದಿಡಲಾಗಿದೆ.

40 ಎಕ್ರೆ ಜಾಗ ಕಾದಿರಿಸಲಾಗಿದೆ:

ಪುತ್ತೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜಿಗೆ ಸುಮಾರು 40 ಎಕ್ರೆ ಸ್ಥಳವನ್ನು ಬನ್ನೂರು ಗ್ರಾಮದ ಸೇಡಿಯಾಪು ಎಂಬಲ್ಲಿ ಜಾಗ ಕಾದಿರಿಸಿ ಆರ್‌ಟಿಸಿಯು ಆಗಿದೆ. ಆದರೆ ಮೆಡಿಕಲ್ ಕಾಲೇಜು ಸ್ಥಾಪನೆಯ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದೆ. ಪುತ್ತೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೊಂಡು ಪುತ್ತೂರು ಮತ್ತು ಆಸುಪಾಸಿನ ಸುಳ್ಯ, ಬೆಳ್ತಂಗಡಿ, ಕಡಬ, ಬಂಟ್ವಾಳ ಮತ್ತು ಕಾಸರಗೋಡು ಪ್ರದೇಶದ ಜನರಿಗೆ ಒಂದು ಸರ್ವ ಸುಸಜ್ಜಿತ ಆಸ್ಪತ್ರೆ ಮತ್ತು ಪರಿಪೂರ್ಣ ಉಚಿತ ಚಿಕಿತ್ಸೆ ಲಭ್ಯವಾಗಬೇಕು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ಒಂದು ಸರಕಾರಿ ಮೆಡಿಕಲ್ ಕಾಲೇಜು ಇಲ್ಲದಿರುವುದು ಮತ್ತು ಪುತ್ತೂರಿನಲ್ಲಿ ಅದೇ ಉದ್ದೇಶಕ್ಕಾಗಿ ಸರಕಾರ ನಿವೇಶನವನ್ನು ಕಾದಿರಿಸಿರುವುದು ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಲು ಇರುವ ಅವಕಾಶವಾಗಿದೆ ಎಂಬ ಮಾಹಿತಿಯನ್ನೊಳಗೊಂಡ ಕರ ಪತ್ರವನ್ನು ಪೇಟೆಯಲ್ಲಿ ವಿತರಣೆ ಮಾಡಲಾಗಿದೆ.

ಮೆಡಿಕಲ್ ಕಾಲೇಜು ಹೋರಾಟ ಸಮಿತಿ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಮತ್ತು ಗೌರವಾಧ್ಯಕ್ಷ ಅಣ್ಣಾ ವಿನಯಚಂದ್ರ ಅವರು ದರ್ಬೆಯಲ್ಲಿ ಜಾಥಾಕ್ಕೆ ಚಾಲನೆ ನೀಡಿದರು. ಉಪಾಧ್ಯಕ್ಷರಾದ ಝೇವಿಯರ್ ಡಿ’ಸೋಜಾ, ಎ ರೂಪೇಶ್ ರೈ ಅಲಿಮಾರ್, ವಿಶ್ವಪ್ರಸಾದ್ ಸೇಡಿಯಾಪು, ಕಾರ್ಯಕಾರಿ ಸಮಿತಿ ಸದಸ್ಯರಾದ ಎಚ್.ಮಹಮ್ಮದ್ ಆಲಿ, ಮೌರಿಸ್ ಮಸ್ಕರೇನ್ಹಸ್, ಬಾಲಕೃಷ್ಣ ಗೌಡ ಕೆಮ್ಮಾರ, ಅಮಳ ರಾಮಚಂದ್ರ, ಡಾ.ಬಿ.ಕೆ.ವಿಷುಕುಮಾರ್, ರಾಜ್ಯ ದಾರಿಮಿ ಒಕ್ಕೂಟದ ಅಧ್ಯಕ್ಷ ಎಸ್.ಬಿ.ದಾರಿಮಿ, ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜಾನ್ ಕುಟ್ಹೀನೊ, ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಪೈ, ಸುಭಾಷ್ ರೈ ಬೆಳ್ಳಿಪ್ಪಾಡಿ, ಚಿಲ್ಮೆತ್ತಾರು ಸಂತೋಷ್, ನಗರಸಭೆ ಮಾಜಿ ಅಧ್ಯಕ್ಷೆ ಜಯಂತಿ ನಾಯಕ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಹೋರಾಟ ಸಮಿತಿ ಸಂಚಾಲಕ ಲಕ್ಷ್ಮೀಶ ಗಬ್ಲಡ್ಕ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here