ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ
ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್, ದ.ಕ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ಇದರ ಜಂಟಿ ಆಶ್ರಯದಲ್ಲಿ ನಗರಸಭೆ ಪುತ್ತೂರು, ಸರಕಾರಿ ಆಸ್ಪತ್ರೆ ಪುತ್ತೂರು, ಸ್ಟಾರ್ ಒಪ್ಟಿಕಲ್ಸ್ ಕೋರ್ಟ್ ರಸ್ತೆ ಪುತ್ತೂರು ಇವರುಗಳ ಸಹಕಾರದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರವು ಜ.30 ರಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಗರಸಭೆ ಕಟ್ಟಡದ ಎರಡನೇ ಮಹಡಿಯಲ್ಲಿ ಜರಗಿತು.
ಪುತ್ತೂರು ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಆರೋಗ್ಯದ ಬಗ್ಗೆ ಮುಂಜಾಗ್ರತೆ ವಹಿಸಿಕೊಳ್ಳುವುದು ಹೇಗೆ ಎಂಬುದು ಕೊರೋನಾ ಮಹಾಮಾರಿಯು ನಮಗೆ ಕಲಿಸಿಕೊಟ್ಟಿದೆ. ನಗರಸಭೆಯು ಮನೆ ಮನೆ ಭೇಟಿ ನೀಡಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಅದರಂತೆ ಸಂಘ-ಸಂಸ್ಥೆಗಳೂ ಆರೋಗ್ಯದ ಬಗ್ಗೆ ಉಚಿತ ಶಿಬಿರಗಳನ್ನು ಹಮ್ಮಿಕೊಂಡು ಸಹಕಾರ ನೀಡುತ್ತಿದೆ. ಆಹಾರ ವ್ಯತ್ಯತೆಯ ಕೊರತೆಯಿಂದಾಗಿ ಮಧುಮೇಹ ರೋಗವು ವ್ಯಾಪಕವಾಗಿ ಬಾಧಿಸುತ್ತಿದ್ದು ಇದು ಕಣ್ಣುಗಳ ದೃಷ್ಟಿ ವ್ಯತ್ಯತೆಗೂ ಕಾರಣವಾಗುತ್ತದೆ. ಪ್ರತಿಯೋರ್ವರೂ ಅವರವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿಕೊಳ್ಳುವುದು ಸೂಕ್ತವಾಗಿದೆ ಎಂದರು.
ರೋಟರಿ ಜಿಲ್ಲೆ 3181, ವಲಯ ಐದರ ಅಸಿಸ್ಟೆಂಟ್ ಗವರ್ನರ್ ಎ.ಜೆ ರೈ ಮಾತನಾಡಿ, ರೋಟರಿ ಎಂಬುದು ಸೇವಾ ಸಂಸ್ಥೆಯಾಗಿದೆ. ಕಳೆದ 35 ವರ್ಷಗಳ ಹಿಂದೆ ಇದೇ ರೋಟರಿ ಸಂಸ್ಥೆಯು ಪೊಲೀಯೊ ನಿರ್ಮೂಲನೆ ಮಾಡುವಲ್ಲಿ ಯಶಸ್ವಿಯಾಗಿ ಶ್ರಮಿಸಿರುತ್ತದೆ. ಅಲ್ಲದೆ ಮನುಷ್ಯನ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ರೋಟರಿ ಸಂಸ್ಥೆಯು ಶಿಬಿರಗಳನ್ನು ಹಮ್ಮಿಕೊಂಡು ಸೇವಾ ಕಾರ್ಯಗಳನ್ನು ಮಾಡುತ್ತಿದೆ. ಫಲಾನುಭವಿಗಳು ಇದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು.
ನಗರಸಭಾ ಪೌರಾಯುಕ್ತ ಮಧು ಎಸ್.ಮನೋಹರ್ ಮಾತನಾಡಿ, ಆರೋಗ್ಯಕ್ಕೆ ಅಥವಾ ಇತರ ಸಾಮಾಜಿಕ ಚಟುವಟಿಕೆಗಳಿಗೆ ಸಂಬಂಧಿಸಿ ಪುತ್ತೂರು ನಗರ ವ್ಯಾಪ್ತಿಯೊಳಗೆ ರೋಟರಿ ಸಂಸ್ಥೆಯು ನಗರಸಭೆಯೊಂದಿಗೆ ನಿರಂತರ ಕೈಜೋಡಿಸುತ್ತಾ ಬಂದಿದ್ದು ಉಪಯುಕ್ತ ವಾತಾವರಣ ನಿರ್ಮಾಣ ಮಾಡಿದೆ ಎಂದರು.
ಅಧ್ಯಕ್ಷತೆ ವಹಿಸಿದ ರೋಟರಿ ಸೆಂಟ್ರಲ್ ಅಧ್ಯಕ್ಷ ಮೊಹಮದ್ ರಫೀಕ್ ದರ್ಬೆ ಸ್ವಾಗತಿಸಿ ಮಾತನಾಡಿ, ರೋಟರಿ ಸೆಂಟ್ರಲ್ ಫಲಾನುಭವಿಗಳಿಗೆ ವೀಲ್ ಚೇರ್, ಕಣ್ಣಿನ ಶಿಬಿರಗಳನ್ನು ಹಮ್ಮಿಕೊಂಡು ಬಂದಿರುತ್ತದೆ. ಪೊಲೀಯೋ ನಿರ್ಮೂಲನೆಯು ರೋಟರಿಯಿಂದ ಆದದ್ದು ಎಂಬುದು ಇಡೀ ಜಗತ್ತಿಗೆ ಪರಿಚಯಿಸಿಕೊಟ್ಟಿದೆ. ಇತ್ತೀಚೆಗೆ ರೋಟರಿ ಸಂಸ್ಥೆಯು ಸರಕಾರಿ ಆಸ್ಪತ್ರೆಗೆ 6 ಡಯಾಲಿಸಿಸ್ ಯಂತ್ರಗಳ ಸ್ಥಾಪನೆಗೆ ಹೆಜ್ಜೆಗಳನ್ನಿಟ್ಟಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹಲವಾರು ಕಾರ್ಯಕ್ರಮವನ್ನು ನೀಡಲು ಬಯಸಿದೆ ಎಂದರು.
ರೋಟರಿ ಜಿಲ್ಲೆ 3181, ವಲಯ ಐದರ ವಲಯ ಸೇನಾನಿ ಡಾ|ಹರ್ಷಕುಮಾರ್ ರೈ, ಸ್ಟಾರ್ ಆಪ್ಟಿಕಲ್ಸ್ ನ ತಬ್ಸೀರ್, ಸರಕಾರಿ ಆಸ್ಪತ್ರೆಯ ನೇತ್ರಾಧಿಕಾರಿ ಶಶಿ, ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಸ್ಥಾಪಕಾಧ್ಯಕ್ಷ ಸಂತೋಷ್ ಶೆಟ್ಟಿ, ಸದಸ್ಯರಾದ ಪದ್ಮನಾಭ ಶೆಟ್ಟಿ, ಶಾಂತಕುಮಾರ್, ಪುರುಷೋತ್ತಮ್ ಶೆಟ್ಟಿ, ರಾಜೇಶ್ ಬೆಜ್ಜಂಗಳ, ಜಯಪ್ರಕಾಶ್ ಎ.ಎಲ್, ನಗರಸಭೆ ಮಾಜಿ ಅಧ್ಯಕ್ಷೆ ಜಯಂತಿ ಬಲ್ನಾಡು, ನಗರಸಭೆ ಸದಸ್ಯ ಯೂಸುಫ್ ಡ್ರೀಮ್ಸ್, ನಗರಸಭೆ ಆರೋಗ್ಯ ನಿರೀಕ್ಷಕರಾದ ರಾಮಚಂದ್ರ, ಶ್ವೇತಾಕಿರಣ್, ನೀರಿನ ವಿಭಾಗದ ವಸಂತ್, ಸ್ಯಾಲರಿ ಸೂಪರ್ ವೈಸರ್ ರವಿ, ನಗರಸಭೆಯ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ದ.ಕ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ಅಶೋಕ್ ಕೆದಿಲ ವಂದಿಸಿದರು. ರೋಟರಿ ಸೆಂಟ್ರಲ್ ಕಾರ್ಯದರ್ಶಿ ಚಂದ್ರಹಾಸ ರೈ ಕಾರ್ಯಕ್ರಮ ನಿರೂಪಿಸಿದರು.
152 ಮಂದಿ ತಪಾಸಣೆ | 98 ಮಂದಿಗೆ ಉಚಿತ ಕನ್ನಡಕ ವಿತರಣೆ
ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಡೆದ ಶಿಬಿರದಲ್ಲಿ 152 ಮಂದಿ ಫಲಾನುಭವಿಗಳು ತಪಾಸಣೆಗೈಯ್ದರು. 98 ಮಂದಿ ಫಲಾನುಭವಿಗಳಿಗೆ ಉಚಿತವಾಗಿ ಕನ್ನಡಕವನ್ನು ವಿತರಿಸಲಾಯಿತು. ನಗರಸಭೆಯ ಅಧ್ಯಕ್ಷರು, ಪೌರಾಯುಕ್ತರ ಸಹಿತ ನಗರಸಭೆ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಈ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡರು.