ಒಡಿಯೂರು ಸಂಸ್ಥಾನದಲ್ಲಿ 23ನೇ ತುಳು ಸಾಹಿತ್ಯ ಸಮ್ಮೇಳನ ಉದ್ಘಾಟನೆ

0

  • ತುಳುವ ಸಂಸ್ಕೃತಿಯ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮದ ಆಯೋಜನೆ: ಒಡಿಯೂರು‌ ಶ್ರೀ
  • ಆಧುನಿಕ ಶಿಕ್ಷಣ,ಬದಲಾದ ಜೀವನ ಪದ್ದತಿಯಿಂದ ನಮ್ಮ ಆಚರಣೆ, ಪರಂಪರೆ ಬದಲಾಗುತ್ತದೆ: ಡಾ. ವಸಂತ ಕುಮಾರ್ ಪೆರ್ಲ
  • ಒಡಿಯೂರು ತುಳುವಿನ ತಪೋಭೂಮಿ: ಎ.ಸಿ.ಭಂಡಾರಿ
  • ಸಾಹಿತ್ಯ ಲೋಕಕ್ಕೆ ಸಂಸ್ಥಾನದ ಕೊಡುಗೆ ಅಪಾರ: ಪುರುಷೋತ್ತಮ ಚೇಂಡ್ಲ
  • ಹಿಂದೂ ಸಮಾಜಕ್ಕೆ ಧರ್ಮ ಶಿಕ್ಷಣದ ಅಗತ್ಯವಿದೆ: ರಾಜ್ ಗೋಪಾಲ್ ರೈ
  • ತುಳುವಿಗೆ ಶಕ್ತಿ ನೀಡುವ ಕೆಲಸ ಸಂಸ್ಥಾನದಿಂದ ಆಗುತ್ತಿದೆ: ಬೇಲಾಡಿ ವಿಠಲ ಶೆಟ್ಟಿ


ವಿಟ್ಲ: ವ್ಯಕ್ತಿ ವಿಕಾಸವಾಗದೆ ದೇಶವಿಕಾಸವಾಗದು. ಮನೆಯಲ್ಲಿ ಬದಲಾವಣೆಯಾದಾಗ ದೇಶ ಬದಲಾಗಲು ಸಾಧ್ಯ. ಯತಾರ್ಥದಲ್ಲಿ ನಡೆಯುವ ಸಮ್ಮೇಳನ ಇದಾಗಬೇಕು. ನಮ್ಮಲ್ಲಿರುವ ತುಳು ಎನ್ನುವ ಕೀಳರಿಮೆ ದೂರವಾಗಬೇಕು. ತುಳುವ ನಿಲ್ಲದ ಕ್ಷೇತವಿಲ್ಲ. ಆದ್ದರಿಂದ ತುಳುವಿಗೆ ವಿಶೇಷ ಸ್ಥಾನ ಮಾನ ಸಿಗಬೇಕಾಗಿದೆ. ಭಾಷೆಯ ಬಗ್ಗೆ ತ್ಯಾಗ ಮಾಡುವ ಮನಸ್ಸು ನಮ್ಮದಾಗಬೇಕು. ಜನರಿಗೆ ತುಳುವ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಸಮ್ಮೇಳದ ಆಯೋಜನೆಯಾಗಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.

ಅವರು ಒಡಿಯೂರು ಸಂಸ್ಥಾನದಲ್ಲಿ ಜ.30-31ರಂದು ನಡೆಯುವ ತುಳುನಾಡ ಜಾತ್ರೆ-ಒಡಿಯೂರು ರಥೋತ್ಸವದ ಪ್ರಯುಕ್ತ ಸಂಸ್ಥಾನದ ರಾಜಾಂಗಣದ ಆತ್ರೇಯ ಮಂಟಪದಲ್ಲಿ ನಡೆದ 23ನೇ ತುಳು ಸಾಹಿತ್ಯ ಸಮ್ಮೇಳನವನ್ನು ದೀಪಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು.

ತುಳುವಿಗೆ ಇನ್ನೊಂದು ಹೆಸರು ಪ್ರೀತಿ ವಿಶ್ವಾಸ. ಬಾಷೆ ಸಂಸ್ಕೃತಿ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಕಳೆದು ಹೋದ ದಿನಗಳನ್ನು ಮರೆಯುತ್ತಿರುವ ಹಂತದಲ್ಲಿ ನಾವಿದ್ದೇವೆ. ಹಿಂದೆ ಆಹಾರ ಔಷಧಿಯಾಗಿತ್ತು ಈಗ ವಿಷವಾಗಿದೆ. ತುಳುವಿನ ಬಗ್ಗೆ‌ ಜನರಿಗೆ ತಿಳಿಸುವ ಪ್ರಯತ್ನ ಇದಾಗಿದೆ.

ತುಳು ಭಾಷೆಯ ಶಕ್ತಿ ಅಪಾರ. ತುಳುವಿನ ಬಗ್ಗೆ ಇತರರಿಗೆ ಒಲವು ಮೂಡಿಸುವ ಕೆಲಸವಾಗಬೇಕು. ತುಳುವಿನ ಬಗ್ಗೆ ನಾಚಿಕೆ ಬೇಡ. ಮನಸ್ಸಿನ ಭಾಷೆ ತುಳು. ತುಳು ಭಾಷೆಗೆ ಅದರದ್ದೇ ಆದ ಒಂದು ಗೌರವವಿದೆ. ತುಳುವಿನ ಬಗ್ಗೆ ಇರುವ ತಾತ್ಸಾರ ದೂರವಾಗಬೇಕು.
ಹಣ, ಯೌವನ ನಿಜವಾದ ಅತಿಥಿಗಳು. ಅದರಲ್ಲಿ ಸಾತ್ವಿಕ‌ ಭಾವದ ಚಿಂತನೆ ಇದೆ. ಬದುಕು ಹೇಗೆ ಮಾಡಬಹುದೆನ್ನುವುದನ್ನು ಅದು‌ ತಿಳಿಸುತ್ತದೆ. ತುಳು ಭಾಷೆಯ ಉಳಿವಿಗಾಗಿ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದರು.

ತುಳು ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾದ ಹಿರಿಯ ಸಾಹಿತಿ ಡಾ. ವಸಂತಕುಮಾರ ಪೆರ್ಲರವರು ಮಾತನಾಡಿ ಋಷಿ ಮತ್ತು ಕೃಷಿ ಸಂಸ್ಕೃತಿಗೆ ವಿಶೇಷ ಸ್ಥಾನಮಾನವಿದೆ. ತುಳುವರು ಅಂತರಾಷ್ಟ್ರೀಯ ಮಟ್ಟದಲ್ಲಿ ಮಿನುಗುವಂತಾಗಬೇಕು. ಹೊಸ ತಲೆಮಾರುಗಳಿಗೆ ನಮ್ಮ ತುಳು ಜಾನಪದದ ಬಗ್ಗೆ ತಿಳಿಹೇಳುವ ಕೆಲಸವಾಗಬೇಕು. ಆಧುನಿಕ ಶಿಕ್ಷಣ, ಬದಲಾದ ಜೀವನ ಪದ್ದತಿಯಿಂದ ನಮ್ಮ ಆಚರಣೆ, ಪರಂಪರೆ, ಆರಾಧನೆ, ಜಾನಪದಗಳು ಬದಲಾಗುತ್ತಿದೆ. ಬದಲಾವಣೆಯ ಈ ಕಾಲಘಟ್ಟದಲ್ಲಿ ನಮ್ಮ ಸಂಸ್ಕೃತಿಯನ್ನು ಉಳಿಸುವ ಕೆಲಸವಾಗಬೇಕು.

ನೆಲ – ಜಲ ಸಂರಕ್ಷಣೆಯ ವಿಚಾರದಲ್ಲಿ ನಮ್ಮ ಹೊಣೆಯಿದ್ದು, ಪರಿಸರವನ್ನು ಉಳಿಸಿ ಮುಂದಿನ ಜನಾಂಗಕ್ಕೆ ನೀಡುವ ಕಾರ್ಯವಾಗಬೇಕಾಗಿದೆ. ಕೃಷಿ ಪ್ರಧಾನವಾದ ತುಳುನಾಡು ಕೈಗಾರಿಕೀಕರಣದತ್ತ ಹೆಚ್ಚು ವಾಲುತ್ತಿದೆ. ಅಭಿವೃದ್ಧಿಯ ಜತೆಗೆ ಕೃಷಿ – ಋಷಿ ಸಂಸ್ಕೃತಿಯೊಂದಿಗೆ ತುಳುವರು ಬೆಳೆಯಬೇಕು ಎಂದರು.

ಅಖಿಲ ಭಾರತ ತುಳುಕೂಟದ ಅಧ್ಯಕ್ಷ ಎ.ಸಿ.ಭಂಡಾರಿರವರು ಮಾತನಾಡಿ ತುಳು ಭಾಷೆಯ ಉಳಿವಿಗಾಗಿ ಪ್ರೋತ್ಸಾಹ ನೀಡಿದವರಲ್ಲಿ ಒಡಿಯೂರು ಶ್ರೀಗಳು ಮೊದಲಿಗರು. ಒಡಿಯೂರು ತುಳುವಿನ ತಪೋಭೂಮಿ. ತುಳು ತೇರು ಸಂಚರಿಸಿದೆಲ್ಲೆಡೆ ತುಳುವಿನ ಒಲವು ಮೂಡುವಂತಾಗಿದೆ. ತುಳು ಭಾಷೆಗೆ ಗೌರವದ ಸ್ಥಾನ ಸಿಗಲು ಒಡಿಯೂರು ಶ್ರೀಗಳ ಪಾತ್ರ ಅಪಾರ. ತುಳು ಭಾಷೆಯನ್ನು ಉಳಿಸುವಲ್ಲಿ ತುಳುವರಿಗೆ ಇಚ್ಚಾಶಕ್ತಿ ಅಗತ್ಯ ಎಂದರು.

ತುಳುವೆರೆ ಚಾವಡಿ ಬೆಂಗಳೂರು ಇದರ ಗೌರವಾಧ್ಯಕ್ಷ ಪುರುಷೋತ್ತಮ ಚೇಂಡ್ಲರವರು ಮಾತನಾಡಿ ಸಾಹಿತ್ಯ ಲೋಕಕ್ಕೆ ಕ್ಷೇತ್ರದ ಕೊಡುಗೆ ಅಪಾರ. ಧಾರ್ಮಿಕತೆಯೊಂದಿಗೆ ಸಾಮಾಜಿಕವಾಗಿಯೂ ಸಂಸ್ಥಾನ ತೊಡಗಿಕೊಂಡಿರುವುದು ಅಭಿನಂದನೀಯ.

ಸಂಸ್ಥಾನದಿಂದ ನಡೆಯುತ್ತಿರುವ ಕೆಲಸ ಕಾರ್ಯ ಇತರರಿಗೆ ಮಾದರಿ. ತುಳು ಭಾಷೆ ಉಳಿವಿಗೆ ತುಳು ಸಾಹಿತಿಗಳ ಪ್ರೋತ್ಸಾಹ ಅಗತ್ಯ. ತುಳುವಿನಲ್ಲಿ ಹೆಚ್ಚು ಹೆಚ್ಚು ಪುಸ್ತಕಗಳು ಬಿಡುಗಡೆಯಾಗುವಂತಾಗಬೇಕು. ತುಳು ಭಾಷೆ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದರು.

ದ.ಕ. ಜಿಲ್ಲಾ ಕ್ಯಾಟರಿಂಗ್ ಎಸೋಸಿಯೇಶನ್ ನ ಅಧ್ಯಕ್ಷರಾದ ರಾಜ್ ಗೋಪಾಲ ರೈ ಹಿಂದೂ ಸಮಾಜಕ್ಕೆ ಧರ್ಮ ಶಿಕ್ಷಣದ ಅಗತ್ಯವಿದೆ. ನಮ್ಮ ಮಕ್ಕಳನ್ನು ಸಂಸ್ಕೃತರನ್ನಾಗಿ ಮಾಡುವ ಜವಾಬ್ದಾರಿ‌ ನಮ್ಮೆಲ್ಲರ ಮೇಲಿದೆ. ಭಾರತ ಇಂದು ಸರ್ವಶಕ್ತ ದೇಶವಾಗಿ ಉಳಿದಿದೆ. ಉತ್ತಮ ನಾಯಕನಿದ್ದರೆ ಯಾವುದೇ ಕಾರ್ಯದಲ್ಲಿ ಯಶಸ್ಸು‌ ಸಾಧ್ಯ. ಹಿಂದೂ ಸಂಸ್ಕೃತಿ ಉಳಿದರೆ ತುಳು ಉಳಿಯಬಹುದು.

ರಾಷ್ಟ್ರ ಪ್ರಶಸ್ತಿ‌ಪಡೆದ ನಿವೃತ್ತ ಶಿಕ್ಷಕ ಬೇಲಾಡಿ ವಿಠಲ ಶೆಟ್ಟಿರವರು ಮಾತನಾಡಿ ತುಳುವಿಗೆ ಶಕ್ತಿ ನೀಡುವ ಕೆಲಸ ಸಂಸ್ಥಾನದಿಂದ ಆಗುತ್ತಿದೆ. ನಮ್ಮ ಬಾಷೆಯ ಮೇಲೆ ನಮಗೆ ಅಭಿಮಾನವಿರಬೇಕು. ದೇಶ ಭಾಷೆ ಹಚ್ಚ ಹಸಿರಾಗಲಿ. ಬಾಷೆಯ ಉಳಿವಿಗೆ ಎಲ್ಲರು ಸಹಕಾರ ನೀಡೋಣ ಎಂದರು.

ಸಾಧ್ವಿ ಶ್ರೀ ಮಾತಾನಂದಮಯೀ ದಿವ್ಯ ಸಾನಿಧ್ಯ ಕರುಣಿಸಿದ್ದರು. ಪೂರ್ಣಿಮ ರಾಜಗೋಪಾಲ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಒಡಿಯೂರು‌ ಶ್ರೀಗಳು ತುಳುಲಿಪಿಯಲ್ಲಿ ಬರೆದ ‘ಈಶವಾಸ್ಯೋಪನಿಷತ್’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ಜಯರಾಮ ಶೆಟ್ಟಿ ವಾಶಿ ದಂಪತಿಗಳು ಸ್ವಾಮೀಜಿಗೆ ಫಲಪುಷ್ಪ ನೀಡಿ ಸ್ವಾಗತಿಸಿದರು. ಉದ್ಯಮಿ ವಾಮಯ್ಯ ಶೆಟ್ಟಿ ಮುಂಬೈ, ಒಡಿಯೂರು ಗ್ರಾಮವಿಕಾಸ ಯೋಜನೆಯ ನಿರ್ದೇಶಕ ಕಿರಣ್ ಉರ್ವ, ಒಡಿಯೂರು ಶ್ರೀ ಗುರುದೇವ ಸೇವಾಬಳಗದ ಅಧ್ಯಕ್ಷರಾದ ಅಶೋಕ್ ಕುಮಾರ್ ಬಿಜೈ, ಶಶಿಧರ ರೈ ಜಮ್ಮದ ಮನೆ, ಒಡಿಯೂರು ಐಟಿಐನ ತರಬೇತುದಾರ ಜಯಂತ ಅಜೇರ, ಸರ್ವಾಣಿ ಪಿ.ಶೆಟ್ಟಿರವರು ಅತಿಥಿಗಳನ್ನು ಎಲೆ ಅಡಿಕೆ ನೀಡಿ ಸ್ವಾಗತಿಸಿದರು.

ರೇಣುಕಾ‌ ಎಸ್.ರೈ ಪ್ರಾರ್ಥಿಸಿದರು. ಒಡಿಯೂರು ತುಳುಕೂಟದ ಅಧ್ಯಕ್ಷ ಯಶವಂತ ವಿಟ್ಲ ಸ್ವಾಗತಿಸಿದರು. ಜಯಪ್ರಕಾಶ್ ಶೆಟ್ಟಿ ಎ. ರವರು ಸಮ್ಮೇಳನ ಅಧ್ಯಕ್ಷರ ಪರಿಚಯ ಮಾಡಿದರು. ದೇವಿಪ್ರಸಾದ್ ಶೆಟ್ಟಿ ವಂದಿಸಿದರು. ಲೊಕೇಶ್ ಶೆಟ್ಟಿ ವಾಕ್ರಬೈಲ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here