ಒಳಮೊಗ್ರು ಗ್ರಾಪಂ ಸಾಮಾನ್ಯ ಸಭೆ

0

ಅಕ್ರಮ ಸಕ್ರಮ ಜಾಗ ಮಂಜೂರಾತಿ- ನಕ್ಷೆಯಲ್ಲಿ ಗ್ರಾಪಂ ರಸ್ತೆ ಬಗ್ಗೆ ಉಲ್ಲೇಖಿಸಿ : ತಹಶೀಲ್ದಾರ್‌ಗೆ ಮನವಿ

ಪುತ್ತೂರು: ಅಕ್ರಮ ಸಕ್ರಮ ಯೋಜನೆಯಲ್ಲಿ ಜಾಗ ಮಂಜೂರಾತಿಗೊಳಿಸುವ ಸಂದರ್ಭದಲ್ಲಿ ಗ್ರಾ.ಪಂ ರಸ್ತೆ ಇರುವ ಬಗ್ಗೆ ಹಾಗೂ ರಸ್ತೆಯು ಕನಿಷ್ಠ 6 ಮೀಟರ್ ಅಗಲ ಇರುವ ಬಗ್ಗೆ ನಕ್ಷೆಯಲ್ಲಿ ತೋರಿಸುವಂತೆ ತಹಶೀಲ್ದಾರ್‌ಗೆ ಪತ್ರ ಬರೆಯುವ ಮಹತ್ವದ ನಿರ್ಣಯವನ್ನು ಒಳಮೊಗ್ರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಕೈಗೊಳ್ಳಲಾಯಿತು.


ಸಬೆಯು ಗ್ರಾ.ಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ರವರ ಅಧ್ಯಕ್ಷತೆಯಲ್ಲಿ ಜ.25 ರಂದು ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು.
ಅಕ್ರಮ ಸಕ್ರಮ ಯೋಜನೆಯಲ್ಲಿ ಜಾಗ ಮಂಜೂರಾತಿಗೊಳಿಸುವ ಸಂದರ್ಭದಲ್ಲಿ ನಕ್ಷೆಯಲ್ಲಿ ಗ್ರಾ.ಪಂ ರಸ್ತೆ ಮತ್ತು ಕಾಲುದಾರಿ ಹಾಗೂ ರಸ್ತೆ ಕನಿಷ್ಠ 6 ಮೀಟರ್ ಅಗಲ ಇರುವಂತೆ ತೋರಿಸಬೇಕು ಎಂದು ತಹಶೀಲ್ದಾರ್‌ಗೆ ಬರೆದುಕೊಳ್ಳುವುದು ಎಂದು ನಿರ್ಣಯಿಸಲಾಯಿತು.
ಅಂತ್ಯಸಂಸ್ಕಾರಕ್ಕೆ ಪ್ರಸ್ತುತ ಗ್ರಾಪಂನಿಂದ ತುರ್ತು 2 ಸಾವಿರ ರೂ.ಸಹಾಯಧನ ನೀಡಲಾಗುತ್ತಿದ್ದು ಮುಂದಕ್ಕೆ ಕ್ರಿಯಾ ಯೋಜನೆ ಇಟ್ಟು ಮರಣ ಸಂಭವಿಸಿದ ಮನೆಯ ಕುಟುಂಬಕ್ಕೆ ರೂ. 5 ಸಾವಿರ ರೂಪಾಯಿ ನೀಡುವ ಬಗ್ಗೆ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಅವಿನಾಶ್ ಎಂ ಸಭೆಗೆ ಸಲಹೆ ನೀಡಿದರು. ಈ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು.

ಹೆಣ್ಣು ಮಕ್ಕಳ ಶಾಲಾ ದಾಖಲಾತಿ ಪ್ರೋತ್ಸಾಹ ಮಾಡುವ ನಿಟ್ಟಿನಲ್ಲಿ ಗ್ರಾ.ಪಂ ವ್ಯಾಪ್ತಿಯ ಶಾಲೆ ಮತ್ತು ಅಂಗನವಾಡಿಗಳಲ್ಲಿ ಹೊಸದಾಗಿ ದಾಖಲಾದ ಹೆಣ್ಣು ಮಕ್ಕಳ ಸಂಖ್ಯೆಯ ಅನುಪಾತ ಆಧಾರದಲ್ಲಿ ಶಾಲೆಯನ್ನು ಗುರುತಿಸಿ ಗ್ರಾಮ ಸಭೆಯಲ್ಲಿ ಸ್ಮರಣಿಕೆ ನೀಡಿ ಗೌರವಿಸುವ ಬಗ್ಗೆ ನಿರ್ಣಯ ಕೈಗೊಂಡಿತು.

ಗ್ರಾಮದಲ್ಲಿ ಸ್ವಚ್ಚತಾ ನಿಟ್ಟಿನಲ್ಲಿ ಪ್ರತಿ ಮನೆಯಲ್ಲಿ ಬಚ್ಚಲು ಗುಂಡಿ ನಿರ್ಮಾಣ ಮಾಡಬೇಕು ಈ ದೃಷ್ಟಿಯಿಂದ ಕಟ್ಟಡ ಪರವಾನಿಗೆ ನೀಡುವ ಸಂದರ್ಭದಲ್ಲಿ ಬಚ್ಚಲು ಗುಂಡಿ ನಿರ್ಮಾಣ ಕಡ್ಡಾಯಗೊಳಿಸುವ ಬಗ್ಗೆ ತೀರ್ಮಾನಿಸಲಾಯಿತು.

ಗ್ರಾ.ಪಂ ವ್ಯಾಪ್ತಿಯಲ್ಲಿ ಯಾವುದೇ ಕಾರ್ಯಕ್ರಮದ ಬಗ್ಗೆ ಬ್ಯಾನರ್ ಅಳವಡಿಸುವ ಸಂದರ್ಭದಲ್ಲಿ ಗ್ರಾ.ಪಂ ನ ಅನುಮತಿ ಪಡೆದುಕೊಳ್ಳಬೇಕು ಮತ್ತು ಅನುಮತಿ ಪಡೆದ ಬಳಿಕ 15 ದಿವಸಗಳಲ್ಲಿ ತೆರವುಗೊಳಿಸಬೇಕು. ತೆರವು ಮಾಡದಿದ್ದಲ್ಲಿ ಮುಂಗಡ ಪಾವತಿ ಮೊಟಕು ಗೊಳಿಸಿ ಗ್ರಾ.ಪಂ ನಿಂದ ಬ್ಯಾನರ್ ತೆರವು ಗೊಳಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಗ್ರಾ.ಪಂ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಯಾವುದಾದರೂ ಸಮಸ್ಯೆ ಕಂಡುಬಂದಲ್ಲಿ ಅಂತಹ ಕಡೆಗಳಲ್ಲಿ ನ್ಯಾಯ ಸಮಿತಿಯಲ್ಲಿಟ್ಟು ಪರಿಶೀಲನೆ ಮಾಡಿ ಕಾಮಗಾರಿ ಮುಂದುವರಿಸುವುದು ಎಂದು ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಹೇಳಿದರು. ಈ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು.

ಸಭೆಯಲ್ಲಿ ಉಪಾಧ್ಯಕ್ಷೆ ಸುಂದರಿ, ಸದಸ್ಯರಾದ ಮಹೇಶ್ ರೈ ಕೇರಿ, ಲತೀಫ್ ಎಸ್, ಪ್ರದೀಪ್ ಎಸ್, ವನಿತಾ ಕುಮಾರಿ, ರೇಖಾ, ನಳಿನಾಕ್ಷಿ, ನಿಮಿತಾ ಬಿ, ಶಾರದಾ ಚಿತ್ರ ಬಿ.ಸಿ, ಅಬ್ದುಲ್ ಸಿರಾಜುದ್ದೀನ್ ಪಿ, ವಿನೋದ್ ಶೆಟ್ಟಿ ಎಂ, ಅಶ್ರಫ್ ಯು, ಶೀನಪ್ಪ ನಾಯ್ಕ, ಉಪಸ್ಥಿತರಿದ್ದರು. ಅಭಿವೃದ್ಧಿ ಅಧಿಕಾರಿ ಸರಕಾರದ ಸುತ್ತೋಲೆಗಳನ್ನು ಓದಿ, ಸ್ವಾಗತಿಸಿ, ವಂದಿಸಿದರು. ಸಿಬ್ಬಂದಿಗಳಾದ ಕೇಶವ, ಗುಲಾಬಿ, ಜಾನಕಿ ಸಹಕರಿಸಿದ್ದರು.

LEAVE A REPLY

Please enter your comment!
Please enter your name here