ಸಮಿತಿ ಅಧ್ಯಕ್ಷರಾಗಿ ಮೂಡಬಿದ್ರೆ ಡಾ.ಮೋಹನ್ ಆಳ್ವ
ಅಧ್ಯಯನ ನಡೆಸಿ ವಾರದೊಳಗೆ ವರದಿ ಸಲ್ಲಿಸಲು ಸೂಚನೆ
ಮಂಗಳೂರು:ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯಾಗಿ ಘೋಷಿಸಬೇಕು ಎಂಬ ತುಳುವರ ಬೇಡಿಕೆಗೆ ಸ್ಪಂದಿಸಿರುವ ರಾಜ್ಯ ಸರಕಾರ, ಈ ಬಗ್ಗೆ ಸಮಿತಿಯೊಂದನ್ನು ರಚಿಸಿದ್ದು, ಅಧ್ಯಯನ ನಡೆಸಿ ವರದಿ ನೀಡಲು ಸೂಚಿಸಿದೆ.
ತುಳು ಭಾಷೆಯನ್ನು ರಾಜ್ಯದಲ್ಲಿ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡುವ ಕುರಿತು ಅಧ್ಯಯನ ನಡೆಸಿ ವರದಿ ನೀಡಲು ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಡಾ.ಎಂ.ಮೋಹನ ಆಳ್ವ ಅವರ ಅಧ್ಯಕ್ಷತೆಯಲ್ಲಿ 8 ಮಂದಿ ಅಧಿಕಾರಿ/ ಅಧಿಕಾರೇತರ ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧೀನ ಕಾರ್ಯದರ್ಶಿ ಕೆ.ಆರ್.ರಮೇಶ್ ಆದೇಶ ಹೊರಡಿಸಿದ್ದಾರೆ.
ಕೇಶವ ಬಂಗೇರ, ಡಾ|ಮಾಧವ ಕೊಣಾಜೆ, ಗಣೇಶ್ ಅಮೀನ್ ಸಂಕಮಾರ್, ಪೃಥ್ವಿರಾಜ್ ಕವತ್ತಾರು ಮಣಿಪಾಲ, ವಸಂತ ಶೆಟ್ಟಿ ಉಡುಪಿ, ಚಂದ್ರಹಾಸ ಕಣಂತೂರು, ಸಂಧ್ಯಾ ಆಳ್ವ ಸಮಿತಿ ಸದಸ್ಯರಾಗಿದ್ದಾರೆ.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ. ಸಮಿತಿಯು ಅಧ್ಯಯನ ನಡೆಸಿ, ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆ ಎಂದು ಘೋಷಿಸುವ ಕುರಿತು ವಾರದೊಳಗೆ ಸರಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.