ಪುತ್ತೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ದುಡಿಯೋಣ ಬಾ ಅಭಿಯಾನ ಕೆದಂಬಾಡಿ ಗ್ರಾಪಂನಲ್ಲಿ ಎ.6ರಂದು ನಡೆಯಿತು. ಮಾರ್ಚ್ 15 ರಿಂದ ಜೂನ್ ಅಂತ್ಯದ ವರೆಗೆ ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ನಿರಂತರ ಉದ್ಯೋಗ ನೀಡುವ ಉದ್ದೇಶದಿಂದ ದುಡಿಯೋಣ ಬಾ ಅಭಿಯಾನ ನಡೆಯುತ್ತಿದೆ. ನರೇಗಾ ಕೂಲಿ 2022 ನೇ ಎಪ್ರೀಲ್ 1 ರಿಂದ ಪರಿಷ್ಕೃತಗೊಂಡು ಪ್ರತಿ ದಿನಕ್ಕೆ ರೂ. 309 ಗಂಡು ಹೆಣ್ಣಿಗೆ ಸಮಾನ ವೇತನ ದೊರೆಯಲಿದೆ. ನರೇಗಾ ತಾಂತ್ರಿಕ ಸಹಾಯಕಿ ಆಕಾಂಕ್ಷ ರೈಯವರು ಉದ್ಯೋಗ ಖಾತರಿ ಯೋಜನೆಯ ಬಗ್ಗೆ ಹಾಗೂ ಮನೆಗಳಲ್ಲಿ ಬಚ್ಚಲು ಗುಂಡಿ ರಚನೆ ಸೇರಿದಂತೆ ಇತರ ಕೆಲಸಗಳ ಬಗ್ಗೆ ಮಾಹಿತಿ ನೀಡಿದರು. ಸಭಾಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷ ರತನ್ ರೈ ಕುಂಬ್ರರವರು ಮಾತನಾಡಿ, ಗಂಡು ಹೆಣ್ಣಿಗೆ ಸಮಾನ ವೇತನ ನೀಡುತ್ತಿರುವ ನರೇಗಾ ಯೋಜನೆ ಒಂದು ಒಳ್ಳೆಯ ಯೋಜನೆಯಾಗಿದ್ದು ಗ್ರಾಮಸ್ಥರು ಇದರ ಪ್ರಯೋಜನೆವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆಯವರು ವಿವಿಧ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಗ್ರಾಪಂ ಸದಸ್ಯರುಗಳಾದ ವಿಠಲ ರೈ ಮಿತ್ತೋಡಿ, ಕೃಷ್ಣ ಕುಮಾರ್ ಇದ್ಯಪೆ, ರೇವತಿ, ಅಸ್ಮಾ ಉಪಸ್ಥಿತರಿದ್ದರು.ಕಾರ್ಯದರ್ಶಿ ಸುನಂದ ರೈ ವಂದಿಸಿದರು. ಸಿಬ್ಬಂದಿ ಜಯಂತ ಮೇರ್ಲ, ವಿದ್ಯಾಪ್ರಸಾದ್ ಕೆ ಸಹಕರಿಸಿದ್ದರು.