ಪುತ್ತೂರು: ರಸ್ತೆ ಬದಿಗಳಲ್ಲಿ ಎಸೆದಿರುವ ಕಸ, ತ್ಯಾಜ್ಯವನ್ನು ತೆರವುಗೊಳಿಸುವ ಮೂಲಕ ಕೆದಂಬಾಡಿ ಗ್ರಾಮ ಪಂಚಾಯತ್ ವತಿಯಿಂದ ಬಯಲು ಕಸ ಮುಕ್ತ ಗ್ರಾಮ ಅಭಿಯಾನಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ರಸ್ತೆ ಬದಿಗಳಲ್ಲಿರುವ ಕಸ, ತ್ಯಾಜ್ಯವನ್ನು ಮೂರು ದಿನದೊಳಗೆ ತೆರವುಗೊಳಿಸುವಂತೆ ಪುತ್ತೂರು ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿಯವರು ಎಲ್ಲಾ ಪಂಚಾಯತ್‌ಗಳಿಗೆ ಸೂಚನೆ ನೀಡಿರುವುದು ಅಲ್ಲದೆ ಬಯಲು ಕಸ ಮುಕ್ತ ಗ್ರಾಮ ಅಭಿಯಾನದ ನಿಟ್ಟಿನಲ್ಲಿ ಕೆದಂಬಾಡಿ ಗ್ರಾಪಂ ಅಧ್ಯಕ್ಷ ರತನ್ ರೈ ಕುಂಬ್ರರವರ ಮುತುವರ್ಜಿಯಲ್ಲಿ ಕಸ ವಿಲೇವಾರಿ ಮಾಡಲಾಯಿತು. ಕೆದಂಬಾಡಿ ಗ್ರಾಪಂ ವ್ಯಾಪ್ತಿಯ ಕಟ್ಟತ್ತಾರುವಿನಿಂದ ಕುಂಬ್ರದ ವರೇಗೆ ರಾಜ್ಯ ಹೆದ್ದಾರಿಯಲ್ಲಿ ಹಾಕಿರುವ ಕಸ, ತ್ಯಾಜ್ಯವನ್ನು ಜೆಸಿಬಿ ಮತ್ತು ಜನರ ಮೂಲಕ ವಿಲೇವಾರಿ ಮಾಡಲಾಯಿತು. ರಸ್ತೆ ಬದಿಯಿಂದ ಸಂಗ್ರಹವಾದ ಕಸ, ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ರತನ್ ರೈ ಕುಂಬ್ರರವರು, ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿಯವರು ನೀಡಿದ ಸೂಚನೆಯಂತೆ ಹಾಗೂ ಬಯಲು ಕಸಮುಕ್ತ ಗ್ರಾಮ ಅಭಿಯಾನದ ನಿಟ್ಟಿನಲ್ಲಿ ರಸ್ತೆ ಬದಿಯ ಕಸ, ತ್ಯಾಜ್ಯಗಳನ್ನು ಜೆ.ಸಿ.ಬಿ ಮತ್ತು ಜನರ ಮೂಲಕ ತೆರವುಗೊಳಿಸಿ ಸೂಕ್ತ ಜಾಗದಲ್ಲಿ ವಿಲೇವಾರಿ ಮಾಡಲಾಗಿದೆ. ರಸ್ತೆ ಬದಿಗೆ ಕಸ ಹಾಕುವವರನ್ನು ಪತ್ತೆ ಮಾಡಲು ಪಂಚಾಯತ್ ಎಲ್ಲಾ ರೀತಿಯ ಕ್ರಮಗಳನ್ನು ಮಾಡುತ್ತಿದೆ. ಅಲ್ಲಲ್ಲಿ ಸಿಸಿ ಕ್ಯಾಮರ ಅಳವಡಿಸುವ ಚಿಂತನೆ ನಡೆಸಿದೆ. ಕಸ ಹಾಕುವವರು ಕಂಡು ಬಂದರೆ ರೂ.೫೦೦ ರಿಂದ ೫ ಸಾವಿರದ ತನಕ ದಂಡ ವಿಧಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆ, ಕಾರ್ಯದರ್ಶಿ ಸುನಂದ ರೈ, ಸದಸ್ಯರುಗಳಾದ ವಿಠಲ ರೈ ಮಿತ್ತೋಡಿ, ಕೃಷ್ಣ ಕುಮಾರ್ ಇದ್ಯಪೆ ಹಾಗೂ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಆಸರೆ ಸಂಜೀವಿನಿ ತಂಡದಿಂದ ಸ್ವಚ್ಛತೆ
ಬಯಲು ಕಸ ಮುಕ್ತ ಗ್ರಾಮ ಅಭಿಯಾನದಡಿ ಪ್ರತಿ ತಿಂಗಳು ಗ್ರಾಮದ ಒಂದು ಸಂಘ ಸಂಸ್ಥೆಯಿಂದ ಸ್ವಚ್ಛತೆ ಮಾಡುವುದು ಮತ್ತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುವುದು ಎಂದು ನಿರ್ಣಯಿಸಲಾಗಿದ್ದು ಅದರಂತೆ ಎಪ್ರಿಲ್ ತಿಂಗಳ ಸ್ವಚ್ಛತಾ ಕಾರ್ಯವನ್ನು ಆಸರೆ ಸಂಜೀವಿನಿ ಒಕ್ಕೂಟ ಕೆದಂಬಾಡಿ ತಂಡದವರು ಮಾಡಿದರು. ಆಸರೆ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಚಂದ್ರಾವತಿ, ಕಾರ್ಯದರ್ಶಿ ವಿಶಾಲಕ್ಷಿ, ಎಂಬಿಕೆ ಲೀಲಾ, ಎಲ್‌ಸಿಆರ್‌ಪಿ ಪೂರ್ಣಿಮಾ, ಜಯಲತಾ ಸೇರಿದಂತೆ ಸದಸ್ಯರುಗಳು ಭಾಗವಹಿಸಿದ್ದರು.