ಸೇವೆಯಲ್ಲಿ ಲೋಪ ಎಸಗಿದ ಪ್ರಕರಣ: ಟಿಕೆಟ್ ಹಣ ಹಿಂತಿರುಗಿಸಲು, ಖರ್ಚು ಭರಿಸಲು ಸ್ಪೈಸ್ ಜೆಟ್ ಲಿಮಿಟೆಡ್ ಗೆ ಗ್ರಾಹಕ ವ್ಯಾಜ್ಯಗಳ‌ ಪರಿಹಾರ ಆಯೋಗ ಆದೇಶ

0

ಪುತ್ತೂರು: ಗ್ರಾಹಕರ ಸೇವೆಯಲ್ಲಿ ಲೋಪ ಎಸಗಿರುವ ಕಾರಣಕ್ಕಾಗಿ ಟಿಕೇಟಿನ ಹಣ ಹಿಂತಿರುಗಿಸಲು ಮತ್ತು ಖರ್ಚು ಭರಿಸಲು ಸ್ಪೈಸ್ ಜೆಟ್ ಲಿಮಿಟೆಡ್ ಗೆ ದ.ಕ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಅದೇಶಿಸಿದೆ.

ಪುತ್ತೂರಿನ ಮೇರಿ ಮತ್ತು ಅವರ ಇಬ್ಬರು ಮಕ್ಕಳು ಬೆಂಗಳೂರಿಗೆ ಹೋಗಲು ಏಜೆಂಟ್ ಮುಖಾಂತರ ಸ್ಪೈಸ್ ಜೆಟ್ ಲಿಮಿಟೆಡ್ ಸಂಸ್ಥೆಯ ವಿಮಾನದಲ್ಲಿ ಟಿಕೆಟ್ ಬುಕ್ ಮಾಡಿದ್ದರು. ಆದರೆ ಅವರು ಪ್ರಯಾಣವನ್ನು ನಿಗದಿಗೊಳಿಸಿದ ಸಂದರ್ಭದಲ್ಲಿ ಕೋವಿಡ್ ಕಾರಣದಿಂದ ವಿಮಾನಯಾನ ಪ್ರಯಾಣ ರದ್ದಾಗಿತ್ತು. ಕೋವಿಡ್-19 ಲಾಕ್ ಡೌನ್ ಕಾರಣದಿಂದ ಪ್ರಯಾಣ ರದ್ದಾದ ಕಾರಣ ಅದರ ಪ್ರಯಾಣದ ವೆಚ್ಚವನ್ನು ಸ್ಪೈಸ್ ಜೆಟ್ ಲಿಮಿಟೆಡ್ ಮರು ಪಾವತಿ ಮಾಡಬೇಕಾಗಿತ್ತು. ಗ್ರಾಹಕರು ಹಲವಾರು ಬಾರಿ ಕೇಳಿಕೊಂಡರೂ ವಿಮಾನ ಯಾನ ಸಂಸ್ಥೆ ಹಣವನ್ನು ಮರು ಪಾವತಿಸಿರಲಿಲ್ಲ. ಬದಲಿಗೆ ವಿಮಾನಯಾನ ಸಂಸ್ಥೆಯವರು ಅದನ್ನು ಸರ್ವೋಚ್ಚ ನ್ಯಾಯಾಲಯ, ವಾಯುಯಾನ ಸಂಸ್ಟೆಯವರು ರಿ ಶೆಡ್ಯೂಲ್ ಮಾಡಲು ಹೇಳಿರುತ್ತಾರೆ, ಹಾಗಾಗಿ ಅದನ್ನು ಒಂದು ವರ್ಷದ ಒಳಗೆ ಅದೇ ಸೌಲಭ್ಯವನ್ನು ಬೇರೆ ಕಡೆಗೆ ಹೋಗುವುದಿದ್ದರೂ ಪಡೆದುಕೊಳ್ಳಬಹುದು ಎಂದು ಹೇಳಿದ್ದರು. ಹೊರತು ಹಣ ಹಿಂತಿರುಗಿಸಿರಲಿಲ್ಲ. ಹಲವಾರು ಬಾರಿ ಮನವಿ ಕೊಟ್ಟರೂ ಗಣನೆಗೆ ತೆಗೆದುಕೊಂಡಿರಲಿಲ್ಲ. ನಂತರ ವಕೀಲರ ಮುಖಾಂತರ ನೋಟೀಸ್ ಕೊಟ್ಟಾಗಲೂ ಸ್ಪಂದಿಸಿರಲಿಲ್ಲ. ಈ ಏಲ್ಲಾ ಕಾರಣಗಳಿಂದಾಗಿ ಸಂಸ್ಥೆಯವರು ನ್ಯೂನ್ಯತೆಯ ಸೇವೆಯನ್ನು ಕೊಟ್ಟಿದ್ದಾರೆ ಎಂಬ ಕಾರಣಕ್ಕಾಗಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ಅಯೋಗದಲ್ಲಿ ಮೇರಿಯವರು ದೂರು ದಾಖಲಿಸಿದ್ದರು. ದೂರು ದಾಖಲಿಸಿದ ನಂತರ ವಿಮಾನ ಯಾನ ಸಂಸ್ಥೆಯವರು ನ್ಯಾಯಾಲಯಕ್ಕೆ ಹಾಜರಾಗಿದ್ದರು. ವಿಮಾನ ಯಾನ ಸಂಸ್ಥೆಯವರು ಸದ್ರಿ ಹಣವನ್ನು ಮೇರಿಯವರು ಏಜೆಂಟ್ ಮುಖಾಂತರ ತೆಗೆದುಕೊಳ್ಳಬೇಕಿತ್ತು ಮತ್ತು ಸಂಸ್ಥೆಯಿಂದ ಯಾವುದೇ ದೋಷ ಇಲ್ಲ ಎಂಬುದಾಗಿ ವಾದಿಸಿದ್ದರು. ಆದರೆ ವಾದಿ ಪರವಾಗಿ ಹಲವಾರು ಬಾರಿ ಸರ್ವೋಚ್ಚ ನ್ಯಾಯಾಲಯ ಮಾಡಿದ ಆದೇಶಗಳನ್ನು ಇನ್ನಿತರ ಸಂದರ್ಭಗಳನ್ನು ಉಲ್ಲೇಖಿಸಿ ಅರ್ಜಿದಾರರ ತಪ್ಪಿನಿಂದಾಗಿ ಆ ಪ್ರಯಾಣ ರದ್ದಾದದ್ದಲ್ಲ, ಕೋವಿಡ್-19 ಕಾರಣದಿಂದ ಪ್ರಯಾಣ ರದ್ದಾದ ಕಾರಣ ಸರಕಾರದ ನಿರ್ದೇಶನ ಮತ್ತು ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದ ಅನ್ವಯ ಅವರು ಪೂರ್ತಿ ಟಿಕೆಟ್‍ನ ಹಣವನ್ನು ಮರಳಿ ಕೊಡಬೇಕು ಮಾತ್ರವಲ್ಲ ಅದರ ಮೇಲೆ ವಿಳಂಬ ಮಾಡಿದ್ದಕ್ಕೆ ಬಡ್ಡಿಯನ್ನೂ ಕೊಡಬೇಕು ಮತ್ತು ನ್ಯಾಯಾಲಯಕ್ಕೆ ಅಲೆದಾಡುವ ಸಂದರ್ಭವನ್ನು ಉಂಟು ಮಾಡಿದ್ದಕ್ಕೆ ಖರ್ಚನ್ನು ಕೊಡಬೇಕಾಗಿರುತ್ತದೆ ಎಂದು ತಮ್ಮ ವಕೀಲರಾದ ಮಹೇಶ್ ಕಜೆಯವರ ಮುಖಾಂತರ ವಾದಿಸಿದ್ದರು. ವಕೀಲರ ವಾದವನ್ನು ಪುರಸ್ಕರಿಸಿದ ಗ್ರಾಹಕ ನ್ಯಾಯಾಲಯವು ವಿಮಾನಯಾನ ಸಂಸ್ಥೆಯವರು ಟಿಕೆಟ್ ನ ಮೌಲ್ಯ ಮತ್ತು 6% ಬಡ್ಡಿ ಸಹಿತವಾಗಿ ಮಾತ್ರವಲ್ಲದೆ ವ್ಯಾಜ್ಯದ ಖರ್ಚು ಸಹಿತವಾಗಿ ದೂರುದಾರನಿಗೆ ಪಾವತಿಸಬೇಕೆಂದು ಆದೇಶಿಸಿದೆ. ಸಾಮಾನ್ಯ ಗ್ರಾಹಕರೊಬ್ಬರು ಬೃಹತ್ ಸಂಸ್ಥೆಯ ವಿರುದ್ಧ ತನ್ನ ಹಕ್ಕಿಗಾಗಿ ಹೋರಾಡಿ ಜಯಗಳಿಸಿದ ವಿಶೇಷ ಘಟನೆ ಇದಾಗಿದೆ.

LEAVE A REPLY

Please enter your comment!
Please enter your name here