





- 30 ಚೀಲ ಸುಳಿಯದ ಅಡಿಕೆ, 2000 ತೆಂಗಿನ ಕಾಯಿ ಸುಟ್ಟು ಕರಕಲು



ಉಪ್ಪಿನಂಗಡಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಬಳಿ, ಹೋಟೆಲ್ ಆದಿತ್ಯ ಸನಿಹದಲ್ಲಿ ಸೂರಂಬೈಲ್ ಶಾಂತರಾಮ್ ಭಟ್ ಎಂಬವರಿಗೆ ಸೇರಿದ ಸೂರಂಬೈಲ್ ಫಾರಂನಲ್ಲಿ ಅಡಿಕೆ, ತೆಂಗಿನ ಕಾಯಿ ಸಂಗ್ರಹಿಸಿ ಇಟ್ಟಿದ್ದ ಕೊಟ್ಟಿಗೆಯಲ್ಲಿ ಮಾ. ೯ರಂದು ನಸುಕಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಧಗಧಗನೆ ಹೊತ್ತಿ ಉರಿಯಲಾರಂಭಿಸಿ ಅದರಲ್ಲಿದ್ದ ಸೊತ್ತುಗಳು ಸುಟ್ಟು ಕರಕಲಾಗಿದೆ.





ಶಾಂತರಾಮ್ ಭಟ್‌ರವರು ಬೆಳಿಗ್ಗೆ ಎದ್ದು ಹೊರ ಬಂದು ನೋಡುವಾಗ ಕೊಟ್ಟಿಗೆಯಲ್ಲಿ ಬೆಂಕಿ ಹೊತ್ತಿ ಉರಿಯುತ್ತಿರುವುದು ಕಂಡು ಬಂದಿದೆ, ನೋಡ ನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಗೆ ಕಟ್ಟಡವನ್ನು ಸಂಪೂರ್ಣವಾಗಿ ಆವರಿಸಿಕೊಂಡು ಹೊತ್ತಿ ಉರಿಯತೊಡಗಿದೆ. ಬಳಿಕ ಸ್ಥಳೀಯರಿಗೆ ಮತ್ತು ಅಗ್ನಿ ಶಾಮಕದಳಕ್ಕೆ ಮಾಹಿತಿ ನೀಡಲಾಗಿದ್ದು, ಸ್ಥಳೀಯರು ಮತ್ತು ಅಗ್ನಿ ಶಾಮಕ ದಳದವರು ಬಂದು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟರಲ್ಲಿ ಅದರೊಳಗೆ ಇದ್ದ ಸೊತ್ತುಗಳು ಸುಟ್ಟು ಕರಕಲಾಗಿತ್ತು.

ಸುಮಾರು 6 ಲಕ್ಷಕ್ಕೂ ಅಧಿಕ ನಷ್ಠ:
ಕೊಟ್ಟಿಗೆಯ ಒಳಗೆ ೩೦ ಚೀಲ ಸುಳಿಯದ ಅಡಿಕೆ, ೨ ಸಾವಿರ ತೆಂಗಿನ ಕಾಯಿ, ತೋಟಕ್ಕಾಗಿ ತಂದಿರಿಸಿದ್ದ ಕೆಮಿಕಲ್ ಗೊಬ್ಬರ, ಕಾಂಪೋಸ್ಡ್ ಹುಡಿ, ಕಟ್ಟಡದ ಮರಮಟ್ಟುಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಒಟ್ಟು ಸುಮಾರು ೬ ಲಕ್ಷ ರೂಪಾಯಿಗೂ ಅಧಿಕ ನಷ್ಟ ಸಂಭವಿಸಿರುವುದಾಗಿ ಸೂರಂಬೈಲ್ ಶಾಂತಾರಾಮ ಭಟ್‌ರವರು ಸ್ಥಳಕ್ಕೆ ಭೇಟಿ ನೀಡಿದ್ದ “ಸುದ್ದಿ”ಯೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.

ಯಂತ್ರದಿಂದ ಹಾರಿದ ಕಿಡಿಯಿಂದ ಅನಾಹುತ?
ಅಡಿಕೆ ಸಿಪ್ಪೆಯಿಂದ ಗೊಬ್ಬರ ತಯಾರಿಸುವ ಯಂತ್ರ ಈ ಕಟ್ಟಡದಲ್ಲಿ ಇದ್ದು, ಮಾ. ೮ರಂದು ಸಂಜೆಯ ತನಕ ಅದರಲ್ಲಿ ಕೆಲಸ ಮಾಡಲಾಗಿತ್ತು. ಅದರಿಂದ ಹಾರಿರಬಹುದಾದ ಕಿಡಿ ಹಾರಿ ಆ ಮೂಲಕ ಬೆಂಕಿ ಹರಡುತ್ತಾ ಬಂದು ವಿಸ್ತಾರವಾಗಿ ಆವರಿಸಿಕೊಂಡು ಈ ಅನಾಹುತಕ್ಕೆ ಕಾರಣವಾಗಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ.










