ವಿಟ್ಲ: ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಮರಣ ಹೊಂದುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದಕ್ಕೆ ನಾವು ಸೇವಿಸುವ ಆಹಾರದ ಗುಣಮಟ್ಟ ಮತ್ತು ಒತ್ತಡದ ಜೀವನ ಕಾರಣವಾಗಿರಬಹುದು ಎಂದು ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಹೇಳಿದರು.
ಮಾಣಿ ಗ್ರಾಮ ಪಂಚಾಯತ್, ಗುರುಕುಲ ಕಲಾ ಪ್ರತಿಷ್ಠಾನ ಮಂಗಳೂರು, ಶಾರದಾ ಆಯುರ್ವೇದ ಕಾಲೇಜು ತಲಪಾಡಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಮಾಣಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ಹೃದಯ ಮತ್ತು ಶ್ವಾಸಕೋಶವನ್ನು ಪುನಶ್ಚೇತನಗೊಳಿಸುವ ಬಗ್ಗೆ ಜರುಗಿದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯದ ಬಗ್ಗೆ ಜಾಗೃತೆ ವಹಿಸಲು ಸ್ವಂತ ನಿರ್ಧಾರ ತೆಗೆದುಕೊಳ್ಳುವ ಬದಲು ವೈದ್ಯರ ಸಲಹೆ ಪಡೆಯುವುದು ಸೂಕ್ತ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಜೆ. ಪ್ರಹ್ಲಾದ ಶೆಟ್ಟಿಯವರು ಮಾತನಾಡಿ, ಜೀವನದಲ್ಲಿ ಇರುವುದರಲ್ಲಿ ತೃಪ್ತಿಪಟ್ಟು ಸಂತೋಷದಿಂದ ಜೀವನ ನಡೆಸುವುದೇ ಆರೋಗ್ಯವನ್ನು ಕಾಪಾಡುವುದಕ್ಕೆ ಸೂಕ್ತ. ಇಂತಹ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಮಾಣಿ ಗ್ರಾಮ ಪಂಚಾಯತ್ ಮತ್ತು ಇತರ ಜಂಟಿ ಸಂಸ್ಥೆಗಳ ಕಾರ್ಯ ಶ್ಲಾಘನೀಯ ಎಂದು ಹೇಳಿದರು. ಗುರುಕುಲ ಕಲಾ ಪ್ರತಿಷ್ಠಾನದ ಅಧ್ಯಕ್ಷೆ ಮಾನಸ ವಿಜಯ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಆಪ್ತರಕ್ಷಕ ಸಿಪಿಆರ್ ಇದರ ಆಯೋಜಕರಾದ ಡಾ.ಸಂದೀಪ್ ಬೇಕಲ್ ರವರು ಸಂಪನ್ಮೂಲ ವ್ಯಕ್ತಿಯಾಗಿ, ಹೃದಯ ರೋಗದ ಕಾರಣಗಳು ಮತ್ತು ವಹಿಸಬೇಕಾದ ಜಾಗೃತೆಯ ಬಗ್ಗೆ ಸವಿವರವಾದ ಮಾಹಿತಿ ನೀಡಿದರು. ಆಯುಷ್ ವಿಭಾಗದ ಹಿರಿಯ ವೈದ್ಯೆ ಡಾ. ಶೋಭಾರಾಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಸದಸ್ಯರಾದ ಇಬ್ರಾಹಿಂ.ಕೆ.ಮಾಣಿ, ಮೆಲ್ವಿನ್ ಕಿಶೋರ್ ಮಾರ್ಟಿಸ್, ರಮಣಿ, ಸೀತಾ, ಮಿತ್ರಾಕ್ಷಿ ಭಾಗವಹಿಸಿದ್ದರು. ಗುರುಕುಲ ಕಲಾ ಪ್ರತಿಷ್ಠಾನದ ಸಂಚಾಲಕ ಯು. ಆರ್. ಶೆಟ್ಟಿ ಯವರು ಸ್ವಾಗತಿಸಿದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಿರಿಜಾ ವಂದಿಸಿದರು.