- ಜೀವನ ಕಲೆಗಳನ್ನು ಕರಗತ ಮಾಡಿಕೊಳ್ಳುವುದು ಮುಖ್ಯ : ಡಾ.ಎಚ್.ಮಾಧವ ಭಟ್
ಪುತ್ತೂರು: ಬಾಲ್ಯದಿಂದಲೇ ಜೀವನಕಲೆಗಳನ್ನು ರೂಢಿಸಿಕೊಳ್ಳುತ್ತಾ ಬೆಳೆಯುವುದು ಅತ್ಯಂತ ಮುಖ್ಯ. ನಾವೆಷ್ಟೇ ದೊಡ್ಡ ದೊಡ್ಡ ಶೈಕ್ಷಣಿಕ ಅರ್ಹತೆಯನ್ನು ಹೊಂದಿದ್ದರೂ ಬದುಕಿಗೆ ಪೂರಕವಾದ ಕಲೆಗಳನ್ನು ಕಲಿತುಕೊಳ್ಳದಿದ್ದರೆ ಸೋಲನ್ನು ಅಪ್ಪಿಕೊಳ್ಳಬೇಕಾಗುತ್ತದೆ. ಅಂತಹ ಜೀವನಕಲೆಗಳನ್ನು ಕರಗತಮಾಡಿಕೊಳ್ಳುವಲ್ಲಿ ಸ್ಕೌಟ್ ಅಂಡ್ ಗೈಡ್ಸ್‌ನ ಪಾತ್ರ ಅತ್ಯಂತ ದೊಡ್ಡದು ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಡಾ.ಎಚ್.ಮಾಧವ ಭಟ್ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ (ಸಿಬಿಎಸ್‌ಇ)ದಲ್ಲಿ ಸ್ಕೌಟ್ ಅಂಡ್ ಗೈಡ್ಸ್ ಘಟಕವನ್ನು ಉದ್ಘಾಟಿಸಿ ಶನಿವಾರ ಮಾತನಾಡಿದರು.
ಜೀವನದಲ್ಲಿ ಸಾಧನೆಯನ್ನು ಸಾಕಾರಗೊಳಿಸಬೇಕಿದ್ದರೆ ಹೆಚ್ಚಿನ ಶ್ರಮವನ್ನು ವಿನಿಯೋಗಿಸಬೇಕು. ಸಾಮಾನ್ಯರಿಗಿಂತ ಹೆಚ್ಚಿನ ಹಾದಿಯನ್ನು ಕ್ರಮಿಸಲು ಬಯಸುವವರು ಹೆಚ್ಚು ಹೆಜ್ಜೆಗಳನ್ನೂ ಹಾಕಬೇಕಾಗುತ್ತದೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ಅಂತಹ ಹೆಚ್ಚುಗಾರಿಕೆಗೆ ನಮ್ಮನ್ನು ನಾವು ಅರ್ಪಿಸಿಕೊಂಡು ಮುನ್ನಡೆದಾಗ ಯಶಸ್ಸು ನಮ್ಮದಾಗುವುದಕ್ಕೆ ಸಾಧ್ಯ. ಬದುಕಿಗೆ ಅಗತ್ಯವಾಗಿ ಬೇಕಾಗಿರುವ ವಸ್ತು ವಿಷಯಗಳ ಬಗೆಗೆ ಜ್ಞಾನವನ್ನು ಹೊಂದಿರುವುದು ಅತ್ಯಂತ ಅನಿವಾರ್ಯ. ಕೆಲವೊಮ್ಮೆ ಸಾಮಾನ್ಯ ಜ್ಞಾನಗಳೇ ನಮ್ಮ ಬದುಕನ್ನು ಉಳಿಸುವ ಸಂಗತಿಯಾಗಿಯೂ ಪರಿಣಮಿಸುತ್ತವೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ, ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಸಾರ್ವಜನಿಕ ಸಂಪರ್ಕಾಧಿಕಾರಿ ರಾಕೇಶ್ ಕುಮಾರ್ ಕಮ್ಮಜೆ, ಅಂಬಿಕಾ ವಿದ್ಯಾಲಯದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮಹೇಶ್ ಕಜೆ, ವಿದ್ಯಾಲಯದ ಪ್ರಾಂಶುಪಾಲೆ ಮಾಲತಿ ಡಿ, ಗೈಡ್ ಕ್ಯಾಪ್ಟನ್ ಪ್ರಫುಲ್ಲಾ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸ್ಕೌಟ್ ಅಂಡ್ ಗೈಡ್ಸ್ ನಡೆಸುವ ಸೋಪಾನ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಸ್ಕೌಟ್ ಮಾಸ್ಟರ್ ಸತೀಶ್ ಇರ್ದೆ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಗೈಡ್ಸ್ ಶಿಕ್ಷಕಿ ಚಂದ್ರಕಲಾ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಸ್ಕೌಟ್ ಅಂಡ್ ಗೈಡ್ಸ್‌ಗೆ ಸಂಬಂಧಿಸಿದ ಒಂದು ದಿನದ ತರಬೇತಿ ನಡೆಯಿತು.