ರಾಮಕುಂಜ: ಜ್ಞಾನ,ಕೌಶಲ, ಸೃಜನಶೀಲತೆಗಳು ಜೊತೆಗೂಡಿ ಕಾರ್ಯಪ್ರವೃತ್ತವಾದಾಗ ಸಾಧನೆಯ ಶಿಖರವನ್ನು ಏರುವಲ್ಲಿ ಯಶಸ್ವಿಯಾಗಲು ಸಾಧ್ಯ. ಕೇವಲ ಶಿಕ್ಷಣ ಪಡೆದರೆ ಮಾತ್ರ ಸಾಲದು, ಕೌಶಲವು ಶಿಕ್ಷಣದೊಂದಿಗೆ ಬೆರೆತು ಗುಣಾತ್ಮಕ ಶಿಕ್ಷಣವಾದಾಗ ಇಂದಿನ ಸ್ಪರ್ಧಾತ್ಮಕ ಜಗತ್ತನ್ನು ಎದುರಿಸುವ ಶಕ್ತಿಯಾಗಿ ಮಾರ್ಪಡುತ್ತದೆ ಎಂದು ಪರ್ವಿನ ಯು.ಟಿ.ಅವರು ಹೇಳಿದರು.
ಅವರು ರಾಮಕುಂಜ ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದಲ್ಲಿ ಎನ್ಎಸ್ಎಸ್ ಘಟಕ ಆಯೋಜಿಸಿದ್ದ ನಿಮಾನ್ಸ್ನ ಜನ ಆರೋಗ್ಯ ಕೇಂದ್ರ ಎಪಿಡೀಮಿಯಾಲಜಿ ವಿಭಾಗದ ವತಿಯಿಂದ ನಡೆದ “ಯುವ ಸ್ಪಂದನ” ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ಗಣರಾಜ ಕುಂಬ್ಳೆ ಅವರು ಮಾತನಾಡಿ, ಕೌಶಲಗಳು ಶಿಕ್ಷಣದೊಂದಿಗೆ ಬೆರೆತಾಗಲೇ ಜಗತ್ತಿನಲ್ಲಿ ತಮ್ಮನ್ನು ಗುರುತಿಸಲ್ಪಡುತ್ತೇವೆ. ಹಾಗಾದಾಗ ನಮ್ಮ ವ್ಯಕ್ತಿತ್ವಕ್ಕೆ ಮೆರುಗು ಬರುತ್ತದೆ ಎಂದು ತಿಳಿಸಿದರು. ಎನ್ಎಸ್ಎಸ್ ಘಟಕದ ಸಂಯೋಜಕರಾದ ಗುರುಕಿರಣ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ಉಪನ್ಯಾಸಕ ವರ್ಗದವರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅಮೃತಾ ಪ್ರಾರ್ಥಿಸಿದರು. ಪ್ರಥಮ ಬಿ.ಕಾಂ ವಿದ್ಯಾರ್ಥಿನಿ ಚೇತನಾ ಸ್ವಾಗತಿಸಿ, ಪ್ರಥಮ ಬಿ.ಎ.ವಿದ್ಯಾರ್ಥಿನಿ ಚೈತನ್ಯ ವಂದಿಸಿದರು. ಬಿಂದ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.