ಯುವತಿಯರ ಕ್ರಿಕೆಟ್ ತಂಡದ ವ್ಯವಸ್ಥಾಪಕಿ ರಚೆಲ್ ವಿನೋದ್ ಶೆಟ್ಟಿ ನಾಳೆ ಭಾರತಕ್ಕೆ
ಪುತ್ತೂರು: ಅಂಡರ್-19 ಮಹಿಳಾ ಕ್ರಿಕೆಟ್ ತಂಡ ಐಸಿಸಿ ವಿಶ್ವಕಪ್ ಗೆದ್ದ ಸಂಭ್ರಮದಲ್ಲಿದೆ. ಪ್ರಥಮ ಬಾರಿ ಆಯೋಜಿಸಲಾಗಿದ್ದ ಹತ್ತೊಂಬತ್ತರ ಹರೆಯದ ಕೆಳಗಿನ ಯುವತಿಯರ ವಿಭಾಗದಲ್ಲಿ ವಿಶ್ವಕಪ್ ಜಯಿಸಿದ ಭಾರತ ತಂಡಕ್ಕೆ ಸ್ಪೂರ್ತಿ ನೀಡಿದವರು ಟೀಂ ಮ್ಯಾನೇಜರ್ ರೆಚೆಲ್ ವಿನೋದ್ ಶೆಟ್ಟಿ ಅವರು. ದಕ್ಷಿಣ ಆಫ್ರಿಕಾದಲ್ಲಿ ನಡೆದ ಚೊಚ್ಚಲ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಇವರು ಬೆಳ್ಳಾರೆಯ ತಡಗಜೆ ಮನೆತನದ ವಿನೋದ್ ಶೆಟ್ಟಿ ಅವರ ಪತ್ನಿ ಎಂಬುದು ಕರಾವಳಿಗರು ಹೆಮ್ಮೆ ಪಡುವ ವಿಚಾರವಾಗಿದೆ.
ಬೆಳ್ಳಾರೆಯ ಸೊಸೆ ರಚೆಲ್; ರೆಚೆಲ್ ಅವರ ಹೆತ್ತವರು ಮೂಲತಃ ಕೇರಳದವರು. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ರೆಚೆಲ್ರವರು ಬಾಲ್ಯದಲ್ಲಿಯೇ ಕ್ರಿಕೆಟ್ನತ್ತ ಆಕರ್ಷಿತರಾದವರು. 80ರ ದಶಕದಲ್ಲಿ ಮಹಿಳಾ ಕ್ರಿಕೆಟ್ನಲ್ಲಿ ಮಿಂಚಿದ್ದ ರೆಚೆಲ್ ಕರ್ನಾಟಕ ತಂಡವನ್ನು 6 ಬಾರಿ ಪ್ರತಿನಿಧಿಸಿದ್ದಾರೆ. ಕರ್ನಾಟಕ ಜೂನಿಯರ್ ತಂಡದ ನಾಯಕಿಯಾಗಿ ನ್ಯಾಶನಲ್ ಚಾಂಪಿಯನ್ಸ್ನಲ್ಲಿ ಬೆಸ್ಟ್ ಆಲ್ ರೌಂಡರ್ ಪ್ರಶಸ್ತಿ ಪಡೆದಿದ್ದರು. ಆರಂಭಿಕ ಆಟಗಾರ್ತಿ ಹಾಗೂ ಆಫ್ ಸ್ಪಿನ್ನರ್ ಆಗಿದ್ದ ರೆಚೆಲ್ ಭಾರತೀಯ ಮಹಿಳಾ ತಂಡದ ಹಲವು ಆಯ್ಕೆ ಶಿಬಿರಗಳಲ್ಲಿ ಆಡಿದ್ದರು. 1980ರಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಪ್ರೆಸಿಡೆಂಟ್ ಇಲೆವೆನ್ ತಂಡವನ್ನು ಪ್ರತಿನಿಧಿಸಿದ್ದರು. ಮಹಿಳಾ ಕ್ರಿಕೆಟ್ನ ಆರಂಭದ ದಿನಗಳಲ್ಲಿ ಹೆಚ್ಚಿನ ಪ್ರೋತ್ಸಾಹ ಇರಲಿಲ್ಲ. ಹಾಗಾಗಿ ಶಿಕ್ಷಣದತ್ತ ಗಮನ ಹರಿಸಿದ್ದ ರೆಚೆಲ್ ಅವರು ಎಂಬಿಎ ಪದವಿ ಪೂರೈಸಿ ಅಮೆರಿಕದಲ್ಲಿ 2 ದಶಕದ ಕಾಲ ಅಮೆರಿಕ ಎಕ್ಸ್ಪ್ರೆಸ್ ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿದ್ದರು. ಕಾಲೇಜು ದಿನಗಳಲ್ಲಿ ಪರಿಚಿತರಾದ ವಿನೋದ್ ಶೆಟ್ಟಿ ಅವರನ್ನು ಪ್ರೀತಿಸಿ ವಿವಾಹವಾದ ಇವರು ಭಾರತಕ್ಕೆ ಮರಳಿದ ಬಳಿಕ ಮತ್ತೆ ಕ್ರಿಕೆಟ್ನತ್ತ ಆಕರ್ಷಿತರಾದರು. ಬಿಸಿಸಿಐ ಜತೆ ನಿಕಟ ಸಂಪರ್ಕ ಹೊಂದಿದ ಅವರು ಮಹಿಳಾ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿದರು. ಇವರು ಕರ್ನಾಟಕ ಮಹಿಳಾ ತಂಡದ ಸಹಾಯಕ ಕೋಚ್ ಆಗಿ 6 ವರ್ಷ ಸೇವೆ ಸಲ್ಲಿಸಿದ್ದರು. ಮ್ಯಾನೇಜ್ಮೆಂಟ್ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದ ಕಾರಣ ಕೋಚಿಂಗ್ ತೊರೆದು ತಂಡದ ಪ್ರವಾಸ ನಿರ್ವಹಣೆ ಹಾಗೂ ಆಡಳಿತಾತ್ಮಕ ವಿಷಯಗಳ ಬಗ್ಗೆ ಗಮನ ಹರಿಸಿದರು. ಈಗ ಅಂಡರ್-19 ಮಹಿಳಾ ಕ್ರಿಕೆಟ್ ತಂಡದ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುವ ಮಹತ್ವದ ಅವಕಾಶ ಪಡೆದಿದ್ದಾರೆ.
ತ್ರಿವರ್ಣ ಧ್ವಜ ರಾರಾಜಿಸಿದ ಕ್ಷಣ ಅವಿಸ್ಮರಣೀಯ
ತಂಡದ ಜತೆ ದಕ್ಷಿಣ ಆಫ್ರಿಕಾದಲ್ಲಿರುವ ರಚೆಲ್ ಅವರು ದೂರವಾಣಿ ಮೂಲಕ ಮಾಧ್ಯಮದ ಜತೆ ವಿಶ್ವಕಪ್ ವಿಜಯದ ಸಂಭ್ರಮ ಹಂಚಿಕೊಂಡರು.
‘ನಮ್ಮ ತಂಡದಲ್ಲಿ ಪ್ರತಿಭಾನ್ವಿತ ಆಟಗಾರ್ತಿಯರಿದ್ದರು. ಹಾಗಾಗಿ ಅತ್ಯುತ್ತಮ ಸಾಧನೆಯ ನಿರೀಕ್ಷೆಯೊಂದಿಗೆ ದಕ್ಷಿಣ ಆಫ್ರಿಕಾಕ್ಕೆ ಬಂದಿದ್ದೆವು. ನಮ್ಮ ಹುಡುಗಿಯರ ಕಠಿಣ ಪರಿಶ್ರಮದಿಂದ ನಮ್ಮ ದೇಶಕ್ಕೆ ವಿಶ್ವಕಪ್ ಬಂದಿದೆ. ದಕ್ಷಿಣ ಆಫ್ರಿಕಾದ ಮೈದಾನದಲ್ಲಿ ಭಾರತದ ತ್ರಿವರ್ಣ ಧ್ವಜ ರಾರಾಜಿಸಿದ ಕ್ಷಣವನ್ನು ಎಂದೂ ಮರೆಯುವಂತಿಲ್ಲ ಇಂತಹ ತಂಡದ ಮ್ಯಾನೇಜರ್ ಅಗಿ ಪಂದ್ಯಗಳನ್ನು ಸಾಕ್ಷೀಕರಿಸಿದ ಹೆಮ್ಮೆ ನನ್ನದು. ಒಂದು ಅದ್ಭುತ ಕನಸು ನನಸಾಗಿದೆ. ಆಟಗಾರ್ತಿಯರ ಬದ್ಧತೆ, ಸಾಧನೆಯನ್ನು ಬಣ್ಣಿಸಲು ನನ್ನಲ್ಲಿ ಶಬ್ದಗಳಿಲ್ಲ. ಭಾರತದ ಕ್ರೀಡೆಗೆ ಅದರಲ್ಲೂ ಮಹಿಳಾ ಕ್ರೀಡಾಪಟುಗಳಿಗೆ ಅಂಡರ್-19 ತಂಡದ ಆಟಗಾರ್ತಿಯರು ಹೊಸ ಸ್ಪೂರ್ತಿ ನೀಡಿದ್ದಾರೆ ಎಂದು ಹೇಳಿದ ರಚೆಲ್ ಅವರು ಆಟಗಾರ್ತಿಯರು ಕೂಲ್ ಆಗಿದ್ದರು. ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸುವ ಬಗ್ಗೆ ಅವರಲ್ಲಿ ಆತ್ಮವಿಶ್ವಾಸ ಇತ್ತು. ಈ ವಿಜಯದಿಂದ ಭಾರತದ ಮಹಿಳಾ ಕ್ರಿಕೆಟ್ ಹೊಸ ಎತ್ತರಕ್ಕೆ ಏರಿದೆ. ಬಡ ಹಾಗೂ ಮಧ್ಯಮ ವರ್ಗದಿಂದ ಬಂದ ಹುಡುಗಿಯರು ಮಾಡಿದ ಅತ್ಯಪೂರ್ವ ಸಾಧನೆ ಇದು. ವಿಜೇತ ತಂಡದ ಎಲ್ಲಾ ಆಟಗಾರ್ತಿಯರು ಭವಿಷ್ಯದಲ್ಲಿ ಸೀನಿಯರ್ ತಂಡವನ್ನು ಪ್ರತಿನಿಧಿಸುವ ವಿಶ್ವಾಸವಿದೆ ಎಂದು ಹೇಳಿದರು. ಕರಾವಳಿಯ ಸೊಸೆ ಎನ್ನುವ ಅಭಿಮಾನವಿದೆ. ತಡಗಜೆ ಕುಟುಂಬದವರ ಜತೆ ಆತ್ಮೀಯ ಸಂಬಂಧ ಇರಿಸಿಕೊಂಡಿದ್ದೇನೆ. -ಫೆ.2ರಂದು ಭಾರತಕ್ಕೆ ಬರಲಿದ್ದೇವೆ. ಮುಂಬೈಗೆ ಅಗಮಿಸಿ ಅಲ್ಲಿಂದ ನೇರ ಅಹ್ಮದಾಬಾದ್ಗೆ ತೆರಳಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರನ್ನು ಭೇಟಿಯಾಗುವ ಕಾರ್ಯಕ್ರಮವಿದೆ ಎಂದು ರಚೆಲ್ ತಿಳಿಸಿದ್ದಾರೆ.