





ಪುತ್ತೂರು: ಕರ್ನಾಟಕ ರಾಜ್ಯದ ಲಕ್ಷಾಂತರ ಮಂದಿ ಅಯ್ಯಪ್ಪ ಸ್ವಾಮಿ ಭಕ್ತರು ಪ್ರತಿವರ್ಷ ನವೆಂಬರ್ ತಿಂಗಳಿನಿಂದ ಆರಂಭವಾಗುವ ಮಂಡಲ – ಮಕರ ಜ್ಯೋತಿ ತೀರ್ಥಯಾತ್ರೆಗಾಗಿ ಕೇರಳದ ಶಬರಿಮಲೆಗೆ ತೆರಳುತ್ತಾರೆ. ಮಕರ ಸಂಕ್ರಾಂತಿ ದಿನದ ಮಕರ ಜ್ಯೋತಿ ದರ್ಶನಕ್ಕಾಗಿ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ಪ್ರಯಾಣ ಮಾಡುವುದನ್ನು ಗಮನದಲ್ಲಿರಿಸಿಕೊಂಡು, ತೀರ್ಥಯಾತ್ರಿಕರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಕುರಿತು ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಅವರು ರಾಜ್ಯ ಸರ್ಕಾರದ ಗಮನಕ್ಕೆ ತಂದಿದ್ದಾರೆ. ಕರ್ನಾಟಕ ವಿಧಾನ ಪರಿಷತ್ತಿನ ಶಾಸಕರಾದ ಕಿಶೋರ್ ಕುಮಾರ್ ಪುತ್ತೂರು ಅವರು ಮುಜರಾಯಿ ಸಚಿವರಾದ ರಾಮಲಿಂಗ ರೆಡ್ಡಿ ಅವರಿಗೆ ಪತ್ರ ಬರೆದು, ಶಬರಿಮಲೆ ಯಾನ ಕೈಗೊಳ್ಳುವ ಕರ್ನಾಟಕದ ಅಯ್ಯಪ್ಪ ಭಕ್ತರಿಗೆ ಸೂಕ್ತ ವ್ಯವಸ್ಥೆ ಮಾಡಲು ಕೋರಿದ್ದಾರೆ. ಪತ್ರದಲ್ಲಿ ಅವರು ಮುಖ್ಯವಾಗಿ ಭಕ್ತಾಧಿಗಳಿಗೆ ಸೂಕ್ತ ವಿಶ್ರಾಂತಿ ಕೇಂದ್ರಗಳು, ಉಚಿತ ಮತ್ತು ತುರ್ತು ವೈದ್ಯಕೀಯ ನೆರವು, ಆಹಾರ – ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳು, ಕನ್ನಡ ಭಾಷೆಯ ಸಹಾಯವಾಣಿ (ಹೆಲ್ಪ್ಲೈನ್), ಭಕ್ತರ ವಾಹನಗಳಿಗೆ ಸುರಕ್ಷಿತ ಪಾರ್ಕಿಂಗ್ ವ್ಯವಸ್ಥೆ, ಕರ್ನಾಟಕ – ಕೇರಳ ಗಡಿಯಲ್ಲಿ ಸಮನ್ವಯ ಕ್ಯಾಂಪ್ಗಳ ಸ್ಥಾಪನೆಯಾಗಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಕೇರಳ ಸರ್ಕಾರದೊಂದಿಗೆ ತಕ್ಷಣ ಚರ್ಚಿಸಿ ಮೇಲ್ಕಂಡ ಎಲ್ಲಾ ಸೌಲಭ್ಯಗಳ ವ್ಯವಸ್ಥೆ ಮಾಡುವಂತೆ ಶಾಸಕರು ಸಚಿವರ ಬಳಿ ವಿನಂತಿಸಿದ್ದಾರೆ.



ವಿಶೇಷ ರೈಲು ವ್ಯವಸ್ಥೆಗೆ ರೈಲ್ವೆ ಸಚಿವರಿಗೆ ಮನವಿ
ಅದೇ ರೀತಿ, ಅ.30ರಂದು ಕೇಂದ್ರದಲ್ಲಿ ರಾಜ್ಯ ರೈಲ್ವೆ ಸಚಿವರಾದ ವಿ ಸೋಮಣ್ಣ ಅವರಿಗೆ ಸಲ್ಲಿಸಿದ ಮನವಿಯಲ್ಲಿ, ಮಕರ ಜ್ಯೋತಿ ಸಂದರ್ಭದಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ಭಕ್ತರು ಸುಲಭವಾಗಿ ಶಬರಿಮಲೆಗೆ ತೆರಳಲು ವಿಶೇಷ ರೈಲು ಸೇವೆ ಒದಗಿಸುವಂತೆ ಕೋರಲಾಗಿತ್ತು. ಹುಬ್ಬಳ್ಳಿ ,ಹಾಸನ ,ಸುಬ್ರಹ್ಮಣ್ಯ ರೋಡ್ ಮಂಗಳೂರು ಜಂಕ್ಷನ್, ಕಾಯಂಕುಳಂ ಈ ರೈಲು ಮಾರ್ಗಗಳಲ್ಲಿ ವಿಶೇಷ ರೈಲು ಓಡಿಸುವಂತೆ ಅವರು ಮನವಿನಲ್ಲಿ ವಿನಂತಿಸಿಕೊಂಡಿದ್ದಾರೆ. ಇದಕ್ಕೆ ಧನಾತ್ಮಕವಾಗಿ ಪ್ರತಿಕ್ರಿಯಿಸಿರುವ ಸಚಿವರು, ಸಂಬಂಧಿಸಿದ ರೈಲ್ವೆ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಈ ಬಗ್ಗೆ ಕ್ರಮ ಕೈಗೊಳ್ಳಲು ಸೂಚಿಸಿದ್ದೇವೆ ಎಂದು ಲಿಖಿತ ಉತ್ತರ ನೀಡಿದ್ದಾರೆ.





‘ಶಬರಿಮಲೆ ಯಾತ್ರೆ ಕರ್ನಾಟಕದ ಕೋಟ್ಯಾಂತರ ಅಯ್ಯಪ್ಪ ಭಕ್ತರ ಭಾವನೆಯಾಗಿದೆ. ಯಾತ್ರೆಯ ಪವಿತ್ರತೆಯ ಜೊತೆಗೆ ಭಕ್ತರ ಸುರಕ್ಷತೆ, ಆರೋಗ್ಯ ಮತ್ತು ಮೂಲಭೂತ ಸೌಲಭ್ಯಗಳು ಅತ್ಯಂತ ಮುಖ್ಯ. ರಾಜ್ಯ ಸರ್ಕಾರ ಮತ್ತು ಕೇರಳ ಸರ್ಕಾರಗಳ ಸಮನ್ವಯದಿಂದ ಇದೊಂದು ಸುಗಮ ಯಾತ್ರೆಯಾಗಲು ಬೇಕಾದ ಕ್ರಮ ಅನಿವಾರ್ಯ.’
ಕಿಶೋರ್ ಕುಮಾರ್ ಪುತ್ತೂರು, ವಿಧಾನ ಪರಿಷತ್ತು ಸದಸ್ಯರು








