ಶಾಲೆಗಳ ಅಭಿವೃದ್ಧಿಗೆ ಆದ್ಯತೆ ನೀಡಿ ಅನುದಾನ ಒದಗಿಸಿದ್ದೇನೆ-ಸಂಜೀವ ಮಠಂದೂರು
ಪುತ್ತೂರು: ನನ್ನ ಕ್ಷೇತ್ರದ ಶಾಲೆಗಳ ಅಭಿವೃದ್ಧಿಗೆ ಆದ್ಯತೆ ನೀಡಿ ಅನುದಾನಗಳನ್ನು ಒದಗಿಸಿದ್ದೇನೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಸರ್ವೆ ಕಲ್ಪಣೆ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಜ.31ರಂದು ಸ್ಮಾರ್ಟ್ ಕ್ಲಾಸ್ ಹಾಗೂ ಶುದ್ದ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಶಾಲಾ ಪ್ರತಿಭಾ ಪುರಸ್ಕಾರದಲ್ಲಿ ಅವರು ಮಾತನಾಡಿದರು.
ಮಕ್ಕಳ ಭವಿಷ್ಯ ರೂಪಿಸುವ ಶಾಲೆಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದ್ದು ತಾಲೂಕಿನ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡಲಾಗಿದೆ ಎಂದ ಅವರು ಕಡಿಮೆ ಖರ್ಚಿನಲ್ಲಿ ಮಾದರಿ ಪ್ರತಿಭಾ ಪುರಸ್ಕಾರ ಏರ್ಪಡಿಸಿದ ಕಲ್ಪಣೆ ಶಾಲೆಯ ಎಸ್ಡಿಎಂಸಿ ಮತ್ತು ಶಿಕ್ಷಕ ವೃಂದದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮುಂಡೂರು ಗ್ರಾ.ಪಂ ಸದಸ್ಯ ಕರುಣಾಕರ ಗೌಡ ಎಲಿಯ, ಸರ್ವೆ ಕಲ್ಪಣೆ ಪ್ರೌಢ ಶಾಲಾ ಮುಖ್ಯಶಿಕ್ಷಕ ಜಯರಾಮ ಶೆಟ್ಟಿ ಕೆ, ಸಾಮಾಜಿಕ ಮುಂದಾಳು ಅಶೋಕ್ ರೈ ಸೊರಕೆ ಉಪಸ್ಥಿತರಿದ್ದರು.
ಶಾಲಾ ಎಸ್ಡಿಎಂಸಿ ಅಧ್ಯಕ್ಷ ಕೆ.ಎಂ ಹನೀಫ್ ರೆಂಜಲಾಡಿ ಮಾತನಾಡಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಮಾದರಿಯಾಗಿ ಹಮ್ಮಿಕೊಳ್ಳಲಾಗಿದೆ. ಮುಂದಿನ ಡಿಸೆಂಬರ್ ತಿಂಗಳಲ್ಲಿ ಶಾಲಾ ವಾರ್ಷಿಕೋತ್ಸವವನ್ನು ದೊಡ್ಡ ಮಟ್ಟದಲ್ಲಿ ಆಯೋಜಿಸಲು ಚಿಂತನೆ ನಡೆಸಲಾಗಿದೆ ಎಂದು ಅವರು ಹೇಳಿದರು.
ಸಾಮಾಜಿಕ ಕಾರ್ಯಕರ್ತ ರಾಧಾಕೃಷ್ಣ ರೈ ರೆಂಜಲಾಡಿ ಮಾತನಾಡಿ ನಮ್ಮ ಶಾಲೆಯ ಅಭಿವೃದ್ಧಿ ಕಾರ್ಯಗಳಿಗೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಹೇಳಿದರು.
ಮುಂಡೂರು ಗ್ರಾ.ಪಂ ಸದಸ್ಯ ಪ್ರವೀಣ್ ನಾಯ್ಕ ನೆಕ್ಕಿತ್ತಡ್ಕ ಮಾತನಾಡಿ ಶಿಕ್ಷಣ, ಕ್ರೀಡಾ ಕ್ಷೇತ್ರದಲ್ಲಿ ನಮ್ಮ ಶಾಲೆಯ ಮಕ್ಕಳು ಸಾಧನೆ ಮಾಡುವಂತಾಗಲಿ ಎಂದು ಹಾರೈಸಿದರು.
ಪತ್ರಕರ್ತ ಯೂಸುಫ್ ರೆಂಜಲಾಡಿ ಮಾತನಾಡಿ ಪೋಷಕರು ತಮ್ಮ ಮಕ್ಕಳ ಕಲಿಕಾ ವಿಚಾರಗಳ ಬಗ್ಗೆ ಗಮನ ಹರಿಸಿ ಶಾಲೆಯ ಜೊತೆ ಸಂಪರ್ಕ ಇಟ್ಟುಕೊಳ್ಳಬೇಕು ಎಂದು ಹೇಳಿದರು.
ಎಸ್ಡಿಎಂಸಿ ಸದಸ್ಯ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ ಮಾತನಾಡಿ ಶಾಲಾ ಕಾರ್ಯಕ್ರಮಗಳಲ್ಲಿ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಮುಖ್ಯ ಶಿಕ್ಷಕಿ ಕಮಲ, ಎಸ್ಡಿಎಂಸಿ ಉಪಾಧ್ಯಕ್ಷೆ ಉಮಾವತಿ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಕಮಲ ಸ್ವಾಗತಿಸಿದರು. ಶಿಕ್ಷಕ ಚಂದ್ರಶೇಖರ್ ವಂದಿಸಿದರು. ಶಿಕ್ಷಕ ನವೀನ್ ಕುಮಾರ್ ರೈ ವಂದಿಸಿದರು. ಶಿಕ್ಷಕ ವೃಂದದವರಾದ ಸತೀಶ್, ಅನಿತಾ, ಜ್ಯೋತಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ-ಬಹುಮಾನ್ ವಿತರಣೆ
ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕ್ರೀಡೆ ಹಾಗೂ ವಿವಿಧ ಚಟುವಟಿಕೆಗಳನ್ನು ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.