ರಾಮಕುಂಜ: ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆ ಸಲುವಾಗಿ ಫೆ.3 ರಂದು ಬೆಳಿಗ್ಗೆ ಶಾಲಾ ಮಕ್ಕಳಿಂದ ಹಸಿರುವಾಣಿ ಸಮರ್ಪಣೆ ನಡೆಯಿತು.
ಶ್ರೀ ರಾಮಕುಂಜೇಶ್ವರ ಸಂಸ್ಕೃತ ಹಿ.ಪ್ರಾ.ಶಾಲೆ, ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆ, ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆ ಹಾಗೂ ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜು ವಿದ್ಯಾರ್ಥಿಗಳು ಕಾಜರೊಕ್ಕುದಿಂದ ದೇವಸ್ಥಾನದ ತನಕ ಮೆರವಣಿಗೆಯಲ್ಲಿ ಸಾಗಿ ಹಸಿರುವಾಣಿ ಸಮರ್ಪಿಸಿದರು.
ಶಾಲಾ ವಿದ್ಯಾರ್ಥಿಗಳಿಂದ ಕುಣಿತ ಭಜನೆಯೂ ಈ ಸಂದರ್ಭದಲ್ಲಿ ನಡೆಯಿತು. ಬ್ಯಾಂಡ್ ವಾದ್ಯದೊಂದಿಗೆ ಮೆರವಣಿಗೆ ಸಾಗಿತು. ದೈವಗಳ ಆಭರಣವನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಬಳಿಕ ದೇವಸ್ಥಾನದಲ್ಲಿ ದೇವರ ಬಲಿ ಹೊರಟು ಉತ್ಸವ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.
ಕಟ್ಟೆಪೂಜೆ:ಸಂಜೆ ಶ್ರೀ ದೇವರ ಬಲಿ ಹೊರಟು ಉತ್ಸವ, ಕೆರೆಕರೆ, ಈರಕೀಮಠ, ಕುಕ್ಕೇರಿಕಟ್ಟೆ, ಸಂಪ್ಯಾಡಿ ಕಟ್ಟೆ, ಶಾರದಾಂಬಾ ಕಟ್ಟೆ, ಕೆದಿಲ ಕಟ್ಟೆಗಳಲ್ಲಿ ಕಟ್ಟೆಪೂಜೆ ನಡೆಯಿತು. ದೇವಸ್ಥಾನದ ಪವಿತ್ರಪಾಣಿ ನರಹರಿ ಉಪಾಧ್ಯಾಯ ಈರಕೀಮಠ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುಪ್ರಸಾದ ರಾಮಕುಂಜ, ಸದಸ್ಯರಾದ ರಮೇಶ ರೈ ರಾಮಕುಂಜ, ಯೋಗೀಶ ಕುಲಾಲ್ ಅಜ್ಜಿಕುಮೇರು, ಜನಾರ್ದನ ಗೌಡ ಬಾಂತೊಟ್ಟು, ಗಿರಿಯಪ್ಪ ಗೌಡ ಆನ, ಸಂಜೀವ ಶಾರದಾನಗರ, ಶೈಲಜಾ ಆಳ್ವಗುತ್ತು, ವಿಮಲಾ ಕರುಣಾಕರ ಆರಿಂಜ, ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಸಂಚಾಲಕ ಟಿ.ನಾರಾಯಣ ಭಟ್ ಸೇರಿದಂತೆ ಶಾಲಾ ಶಿಕ್ಷಕರು, ಗ್ರಾಮಸ್ಥರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಇಂದು ದರ್ಶನ ಬಲಿ
ಫೆ.೪ರಂದು ಬೆಳಿಗ್ಗೆ 8 ಕ್ಕೆ ನಂದಾದೀಪೋತ್ಸವ, ಉತ್ಸವ ನಡೆಯಲಿದೆ. ಮಧ್ಯಾಹ್ನ 11ಕ್ಕೆ ದರ್ಶನ ಬಲಿ, ಬಟ್ಟಲು ಕಾಣಿಕೆ ಮಹಾಪೂಜೆ ನಡೆಯಲಿದೆ. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ದಂಡತೀರ್ಥ ಕೆರೆ ಉತ್ಸವ, ದೇವರುಗಡ್ಡೆ, ತಾವೂದು ದಾರಿಯ ಕಟ್ಟೆಪೂಜೆಗಳು ನಡೆದು ಶ್ರೀರಾಮ ಸಂದರ್ಶನೋತ್ಸವ ನಡೆಯಲಿದೆ.