ಕರ್ಣಾಟಕ ಬ್ಯಾಂಕ್‌ಗೆ ನೇಮಕವಾದ ವಿದ್ಯಾಮಾತಾ ವಿದ್ಯಾರ್ಥಿ ನಿರಂಜನ್‌ರವರಿಗೆ ಸನ್ಮಾನ

0

ವಿದ್ಯಾಮಾತಾದ ಪ್ರಯತ್ನ ಪ್ರಶಂಸನೀಯ-ಮುಳಿಯ ಕೇಶವಪ್ರಸಾದ್

ಪುತ್ತೂರು: ಪುತ್ತೂರಿನ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಯಾಗಿರುವ ‘ವಿದ್ಯಾಮಾತಾ ಅಕಾಡೆಮಿ’ಯಲ್ಲಿ ಬ್ಯಾಂಕಿಂಗ್ ಪ್ರವೇಶ ಪರೀಕ್ಷೆಗಳಿಗೆ ತರಬೇತಿ ಪಡೆದ ಸುಳ್ಯ ತಾಲೂಕು ಸಂಪಾಜೆಯ ನಿರಂಜನ್ ಜೆ.ರವರು 2022-23ನೇ ಸಾಲಿನ ಕರ್ಣಾಟಕ ಬ್ಯಾಂಕ್ ನೇಮಕಾತಿಯ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಅಂತಿಮ ಹಂತದ ನೇರ ಸಂದರ್ಶನದಲ್ಲಿಯೂ ಆಯ್ಕೆಯಾಗಿದ್ದಾರೆ.


ಸಂಪಾಜೆ ಗ್ರಾಮದ ಚಟ್ಟೆಕಲ್ಲು ನಿವಾಸಿಯಾಗಿರುವ ನಿರಂಜನ್ ಜೆ. ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎಸ್.ಸಿ ಮಾಡುತ್ತಿದ್ದು, ತನ್ನ ಸ್ನಾತಕೋತ್ತರ ಪದವಿ ಜೊತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿಯನ್ನು ಪಡೆಯುತ್ತಿದ್ದರು. ಇವರು ತನ್ನ ಪ್ರಥಮ ಪ್ರಯತ್ನದಲ್ಲೇ ಬ್ಯಾಂಕಿಂಗ್ ಪರೀಕ್ಷೆ ಪಾಸಾಗಿರುವ ಇವರು ಕಲ್ಲುಗುಂಡಿಯಲ್ಲಿ ಕೀರ್ತಿ ಕ್ಲಿನಿಕ್ ಹೊಂದಿರುವ ಡಾ.ಯು.ಪಿ.ಜಯರಾಮ ಮತ್ತು ಸಂಪಾಜೆ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿರುವ ಶ್ರೀವಿದ್ಯಾ ದಂಪತಿಯ ಪುತ್ರ.
ನಿರಂಜನ್‌ರವರಿಗೆ ವಿದ್ಯಾಮಾತಾ ಅಕಾಡೆಮಿಯಿಂದ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅತಿಥಿಗಳಾಗಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ಮತ್ತು ಜೆಸಿಐ ಪುತ್ತೂರು ನಿಕಟಪೂರ್ವ ಅಧ್ಯಕ್ಷ ಶಶಿರಾಜ್ ರೈ ಉಪಸ್ಥಿತರಿದ್ದರು.


ನಿರಂಜನ್‌ರವರನ್ನು ಸನ್ಮಾನಿಸಿದ ಮುಳಿಯ ಕೇಶವ ಪ್ರಸಾದ್‌ರವರು ಮಾತನಾಡಿ ಕರಾವಳಿ ಭಾಗದಲ್ಲಿ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಿದ್ದರೂ ಕೂಡ ಉತ್ತಮ ಉದ್ಯೋಗ ಕೌಶಲ್ಯತೆಯನ್ನು ನೀಡಿ, ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಬಲ್ಲ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಸಂಸ್ಥೆಗಳ ಕೊರತೆಯನ್ನು ವಿದ್ಯಾಮಾತಾ ಅಕಾಡೆಮಿಯು ನೀಗಿಸಿದೆ. ಭಾರತೀಯ ಸೇನೆ, ಪೊಲೀಸ್ ಇಲಾಖೆ, ಬ್ಯಾಂಕಿಂಗ್ ಸೇರಿದಂತೆ ಹತ್ತಾರು ಸರಕಾರಿ, ಸರಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಈ ಭಾಗದ ವಿದ್ಯಾರ್ಥಿಗಳು ನೇಮಕಾತಿಯಾಗುವಂತೆ ಮಾಡಿದ ಹಿರಿಮೆ ವಿದ್ಯಾಮಾತಾ ಅಕಾಡೆಮಿಯದ್ದಾಗಿದೆ. ಒಂದು ಕಾಲದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿದ್ದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗ ಬ್ಯಾಂಕಿಂಗ್ ಉದ್ಯೋಗಿಗಳು ಕಡಿಮೆಯಾಗುತ್ತಿದ್ದಾರೆ ಎನ್ನುವ ಕೂಗಿನ ಮಧ್ಯೆ ವಿದ್ಯಾಮಾತಾದ ಈ ಪ್ರಯತ್ನ ನಿಜಕ್ಕೂ ಪ್ರಶಂಸನೀಯ. ಈ ಸಂಸ್ಥೆ ಇನ್ನಷ್ಟು ಬೆಳೆಯಲಿ ಎಂದು ಶುಭ ಹಾರೈಸಿದರು.


ಸನ್ಮಾನ ಸ್ವೀಕರಿಸಿದ ನಿರಂಜನ್ ಜೆ. ರವರು ಮಾತನಾಡಿ ಕಾನ ಶ್ರೀಶಂಕರನಾರಾಯಣ ಮಠದ ಅನುವಂಶಿಕ ಅರ್ಚಕ ಕೇಶವ ಪ್ರಸಾದ ನನ್ನಿಹಿತ್ಲುರವರ ಸಲಹೆಯ ಮೇರೆಗೆ ನಾನು ವಿದ್ಯಾಮಾತಾ ಅಕಾಡೆಮಿಗೆ ಸೇರಿದ್ದು, ನನ್ನ ಸ್ನಾತಕೋತ್ತರ ಪದವಿ ಜೊತೆಗೆ ಆನ್ಲೈನ್ ಮತ್ತು ನೇರ ತರಗತಿಗಳ ಮೂಲಕ ತರಬೇತಿಯನ್ನು ಪಡೆದುಕೊಂಡು ಪ್ರಥಮ ಪ್ರಯತ್ನದಲ್ಲೇ ಬ್ಯಾಂಕಿಂಗ್ ಉದ್ಯೋಗವನ್ನು ಪಡೆದುಕೊಂಡಿದ್ದೆನೆ. ಕರ್ಣಾಟಕ ಬ್ಯಾಂಕ್ ಚೆನ್ನೈ ಶಾಖೆಗೆ ನಿಯುಕ್ತಿಗೊಳಿಸಿ ನನಗೆ ಆಫರ್ ಲೆಟರ್ ಕೂಡ ಲಭಿಸಿದೆ. ಅರ್ಜಿ ಹಾಕುವುದರಿಂದ ಹಿಡಿದು ಲಿಖಿತ ಪರೀಕ್ಷೆ, ನೇರ ಸಂದರ್ಶನದವರೆಗೂ ತರಬೇತಿ ನೀಡಿ, ಬದುಕಿಗೊಂದು ದಾರಿ ತೋರಿಸಿದ ವಿದ್ಯಾಮಾತಾ ಅಕಾಡೆಮಿಗೆ ನಾನು ಅನಂತ ಧನ್ಯವಾದಗಳನ್ನು ಅರ್ಪಿಸುತ್ತಿದ್ದೆನೆ. ವಿದ್ಯಾಮಾತಾ ಅಕಾಡೆಮಿಯ ಸ್ಥಾಪಕರಾದ ಭಾಗ್ಯೇಶ್ ರೈಯವರು, ಮುಂದೆ ಐಎಎಸ್ ಅಥವಾ ಕೆಎಎಸ್ ಅಧಿಕಾರಿಯಾಗಬೇಕು ಎನ್ನುವ ಗುರಿಯನ್ನು ನೀಡಿದ್ದಾರೆ. ವಿದ್ಯಾಮಾತಾ ಅಕಾಡೆಮಿಯ ಉತ್ತಮ ತರಬೇತಿಯೊಂದಿಗೆ ಆ ಗುರಿಯನ್ನು ಸಾಧಿಸುವ ವಿಶ್ವಾಸ ನನಗಿದೆ ಎಂದು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.


ಶಶಿರಾಜ್ ರೈಯವರು ವಿದ್ಯಾಮಾತಾ ಅಕಾಡೆಮಿಯ ಮುಂದಿನ ಯೋಜನೆಗಳಿಗೆ ಶುಭವನ್ನು ಹಾರೈಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ನಿರಂಜನ್ ಜೆ. ರವರ ತಂದೆ ಡಾ.ಯು.ಪಿ.ಜಯರಾಮ್ ಮತ್ತು ತಾಯಿ ಶ್ರೀವಿದ್ಯಾ ವಿದ್ಯಾಮಾತಾ ಅಕಾಡೆಮಿಗೆ ಧನ್ಯವಾದ ಅರ್ಪಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅತಿಥಿಗಳು ಮತ್ತು ಸನ್ಮಾನಿತರನ್ನು ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈ ರವರಿಗೆ ಅಭಿನಂದನೆ ಸಲ್ಲಿಸಿದರು. ವಿದ್ಯಾಮಾತಾ ಅಕಾಡೆಮಿಯ ತರಬೇತುದಾರರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here