ಪುತ್ತೂರು: ಈಶ್ವರಮಂಗಲ ಹನುಮಗಿರಿ ಕ್ಷೇತ್ರದಲ್ಲಿ ದೇಶಪೂಜನ ಕಲ್ಪನೆಯ ಶ್ರೀ ಭಾರತೀ ಅಮರ ಜ್ಯೋತಿ ಮಂದಿರ ಅಮರಗಿರಿಯ ಲೋಕಾರ್ಪಣೆಯನ್ನು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಫೆ.11ರಂದು ನೆವೇರಿಸಲಿದ್ದಾರೆ ಎಂದು ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.
ಫೆ.6ರಂದು ಹನುಮಗಿರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಮಿತ್ ಶಾ ಅವರು ಕೇರಳದ ಕಣ್ಣೂರಿನಿಂದ ಹೆಲಿಕಾಪ್ಟರ್ ಮೂಲಕ ಮಧ್ಯಾಹ್ನ 1.25ಕ್ಕೆ ಹೊರಟು ಈಶ್ವರಮಂಗಲ ಹನುಮಗಿರಿ ಶಾಲಾ ಬಳಿ ನೂತನವಾಗಿ ನಿರ್ಮಾಣಗೊಂಡ ಹೆಲಿಪ್ಯಾಡ್ಗೆ 1.50ಕ್ಕೆ ತಲುಪಲಿದ್ದು ಅಲ್ಲಿಂದ ಅವರು ಮೊದಲಿಗೆ ಹನುಮಗಿರಿ ಪಂಚಮುಖಿ ಆಂಜನೇಯ ದರ್ಶನ ಪಡೆದು ಅಮರ ಗಿರಿಯಲ್ಲಿ ದೀಪ ಪ್ರಜ್ವಲನೆ ಮಾಡಿ ಲೋಕಾರ್ಪಣೆ ಮಾಡಲಿದ್ದಾರೆ. ನಂತರ ಅಮರಗಿರಿಯನ್ನು ವೀಕ್ಷಣೆ ಮಾಡಿ ಸಭಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸುಮಾರು ಅರ್ಧ ಗಂಟೆಯಲ್ಲಿ ಕ್ಷೇತ್ರದ ಕಾರ್ಯಕ್ರಮವನ್ನು ಮುಗಿಸಿ ಪುತ್ತೂರಿನಲ್ಲಿ ನಡೆಯುವ ಸರಕಾರಿ ಕಾರ್ಯಕ್ರಮಕ್ಕೆ ಹೆಲಿಕಾಪ್ಟರ್ ಮೂಲಕ ತೆರಳಲಿದ್ದಾರೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಗೃಹ ಸಚಿವ ಅರಗ ಜ್ಞಾನೇಂದ್ರ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಸಹಕಾರಿ ಸಚಿವ ಎಸ್.ಟಿ ಸೋಮಶೇಖರ್, ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ ಸುನಿಲ್ ಕುಮಾರ್, ಮೀನುಗಾರಿಕಾ ಸಚಿವ ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ಬಿಜೆಪಿ ಅಧ್ಯಕ್ಷರು, ಸಂಸದರೂ ಆದ ನಳಿನ್ ಕುಮಾರ್ ಕಟೀಲ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ದಕ್ಷಿಣ ಭಾರತದಲ್ಲಿ ಪ್ರಥಮ ಮಂದಿರ:
ಭಾರತ ಮಾತಾ ಮಂದಿರ ಕನ್ಯಾಕುಮಾರಿಯಲ್ಲಿ ಇದೆ. ಅದು ಬಿಟ್ಟರೆ ಬೇರೆಲ್ಲೂ ಇಲ್ಲ. ಇದೀಗ ಇಲ್ಲಿ ಲೋಕಾರ್ಪಣೆಯಾಗುತ್ತಿದೆ. ದಕ್ಷಿಣ ಭಾರತದಲ್ಲಿ ಇದು ಪ್ರಥಮ. ಹನುಮಗಿರಿ, ಅಮರಗಿರಿ ಇದರ ಎಲ್ಲ ಕಾರ್ಯವಿಚಾರಗಳು ರಾಷ್ಟ್ರದ ಜನತೆಗೆ ತಿಳಿಯಬೇಕು ಎನ್ನುವ ದೃಷ್ಟಿಯಲ್ಲಿ ಅಮಿತ್ ಶಾ ಅವರು ಲೋಕಾರ್ಪಣೆ ಮಾಡುತ್ತಿದ್ದಾರೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಒಳ್ಳೆಯ ಸಂದೇಶ ಸಾರುವ ‘ಅಮರಗಿರಿ’-ಮೂಡೆತ್ತಾಯ
ನನ್ಯ ಅಚ್ಯುತ್ತ ಮೂಡೆತ್ತಾಯ ಮಾತನಾಡಿ ಭಾರತ ಮಾತೆ ಯೋಧರು ಮತ್ತು ಅನ್ನದಾತರನ್ನು ನೆನಪಿಸುವ ವಿಶೇಷ ವ್ಯವಸ್ಥೆ ಅಮರಗಿರಿಯಲ್ಲಿ ಮಾಡಲಾಗಿದೆ ಎಂದು ಹೇಳಿದರು. ದೇಶಕ್ಕೆ ಒಳ್ಳೆಯ ಸಂದೇಶ ನೀಡುವ ಮಂದಿರವನ್ನು ಅಮಿತ್ ಶಾ ಉದ್ಘಾಟಿಸಲಿದ್ದಾರೆ. ಇಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಶಾಸಕ ಸಂಜೀವ ಮಠಂದೂರು ವಿಶೇಷ ನೆರವು ನೀಡಿದ್ದಾರೆ ಎಂದು ಅವರು ಹೇಳಿದರು.
ಧರ್ಮದರ್ಶಿಗಳಾದ ನಾಗರಾಜ ನಡುವಡ್ಕ ಅವರು ಫೆ.11ರಂದು ನಡೆಯವ ಕಾರ್ಯಕ್ರಮದ ವಿವರವನ್ನು ಸಂಕ್ಷಿಪ್ತವಾಗಿ ನೀಡಿದರು. ಧರ್ಮದರ್ಶಿ ಶಿವರಾಮ ಶರ್ಮ ಕತ್ರಿಬೈಲು ಸ್ವಾಗತಿಸಿದರು. ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಉಪಸ್ಥಿತರಿದ್ದರು.
ರಾಷ್ಟ್ರಭಕ್ತಿಯನ್ನು ಉದ್ದೀಪನಗೊಳಿಸುವ ಸಂದೇಶ: ಅಮರಗಿರಿ ರಾಷ್ಟ್ರಭಕ್ತಿಯನ್ನು ಮೈಗೂಡಿಸಿಕೊಂಡು ಜೀವಿಸಬೇಕೆಂದು ಸಂದೇಶ ನೀಡುತ್ತಿದ್ದು ಹನುಮಗಿರಿ ಮತ್ತು ಅಮರಗಿರಿಯ ಮಹತ್ವ ದೇಶದ ಜನರಿಗೆ ತಿಳಿಯಪಡಿಸುವುದು ಮತ್ತು ಜನರಲ್ಲಿ ರಾಷ್ಟ್ರಭಕ್ತಿಯನ್ನು ಉದ್ದೀಪನಗೊಳಿಸುವ ಸಂದೇಶ ಅಮಿತ್ ಶಾ ಮೂಲಕ ದೇಶಕ್ಕೆ ಸಿಗಲಿದೆ. ಅಮಿತ್ ಶಾ ಅವರು ಇಲ್ಲಿಯ ಆಧ್ಯಾತ್ಮಿಕ ವಿಚಾರಗಳನ್ನು ತಿಳಿದುಕೊಂಡು ಇಲ್ಲಿಗೆ ಬರುತ್ತಿದ್ದಾರೆ.
-ಸಂಜೀವ ಮಠಂದೂರು, ಶಾಸಕರು
ವೀಕ್ಷಣೆಗೆ ಅವಕಾಶ ಇದೆ:
ಲೋಕಾರ್ಪಣೆಯ ಬಳಿಕ ವಾರದ ಶನಿವಾರ ಮತ್ತು ಆದಿತ್ಯವಾರ ಪೂರ್ತಿ ಅಮರಗಿರಿ ಓಪನ್ ಇರುತ್ತದೆ. ರಾತ್ರಿ ವೇಳೆ ವಿದ್ಯುತ್ ದೀಪಗಳಿಂದ ಅಲಂಕೃತವಾಗಿರುತ್ತದೆ. ಶಾಲಾ ಮಕ್ಕಳು ಬರುವವರಿದ್ದರೆ ಮೊದಲೇ ತಿಳಿಸಿದರೆ ಅವರಿಗೆ ವೀಕ್ಷಿಸಲು ಓಪನ್ ಇಲ್ಲದಿದ್ದರೂ ಓಪನ್ ಮಾಡಿ ವೀಕ್ಷಣೆಗೆ ಅವಕಾಶ ನೀಡಲಾಗುವುದು.
-ನನ್ಯ ಅಚ್ಚುತ ಮೂಡೆತ್ತಾಯ, ಆಡಳಿತ ಧರ್ಮದರ್ಶಿ ಹನುಮಗಿರಿ ಕ್ಷೇತ್ರ