ಪುತ್ತೂರು:ಜಲ್ಲಿ ಕ್ರಷರ್ ಮುಷ್ಕರದ ಹಿನ್ನೆಲೆಯಲ್ಲಿ ಕಾಮಗಾರಿಗೆ ಬೇಕಾಗುವ ಜಲ್ಲಿ ಕಲ್ಲುಗಳ ಸರಬರಾಜಿಗೆ ಸಮಸ್ಯೆಯಾಗಿದ್ದರಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಹಾರಾಡಿ ರೈಲ್ವೇ ನಿಲ್ದಾಣ ರಸ್ತೆಯ ಕಾಂಕ್ರಿಟೀಕರಣ ಕಾಮಗಾರಿ ಪುನರಾರಂಭಗೊಂಡಿದೆ.
ಸುಮಾರು ರೂ.1.7ಕೋಟಿ ವೆಚ್ಚದಲ್ಲಿ 5.5 ಮೀಟರ್ ಅಗಲದ ರಸ್ತೆಗೆ 2022ರ ನವೆಂಬರ್ ತಿಂಗಳಲ್ಲಿ ಶಿಲಾನ್ಯಾಸ ಮಾಡಲಾಗಿತ್ತು.ಕಾಮಗಾರಿ ಆರಂಭಿಸುವ ಸಂದರ್ಭ ಜಲ್ಲಿ ಕ್ರಷರ್ ಮಾಲಕರ ಮುಷ್ಕರದಿಂದಾಗಿ ಕಾಮಗಾರಿಗೆ ಜಲ್ಲಿ ಪೂರೈಕೆಗೆ ಸಮಸ್ಯೆಯಿಂದಾಗಿ ಅರ್ಥ್ ವರ್ಕ್ ಮಾಡಿ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು.ಜಲ್ಲಿ ಕ್ರಷರ್ ಮಾಲಕರ ಮುಷ್ಕರ ಇತ್ಯರ್ಥಗೊಂಡ ಬಳಿಕ ಇದೀಗ ಜಲ್ಲಿ ಪೂರೈಕೆಯಾಗಿದ್ದು ಫೆ.6ರಂದು ಕಾಮಗಾರಿ ಪುನರಾರಂಭಗೊಂಡಿದೆ. ಹಾರಾಡಿಯ ಭಾರತ್ ಅಟೋಕಾರ್ಸ್ ಸಂಸ್ಥೆಯ ಬಳಿಯಿಂದ ರಸ್ತೆಗೆ ಜಲ್ಲಿ ಹಾಕುವ ಕಾಮಗಾರಿ ನಡೆಯುತ್ತಿದೆ.
ಮಾರ್ಚ್ ತಿಂಗಳೊಳಗೆ ರಸ್ತೆ ಲೋಕಾರ್ಪಣೆ: ಕಾಮಗಾರಿ ನಡೆಯುವ ಸ್ಥಳಕ್ಕೆ ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಬಹುಕಾಲದ ಜನರ ಬೇಡಿಕೆಯನ್ನು ಈಡೇರಿಸುವ ಕೆಲಸ ನಗರಸಭೆ ಆಡಳಿತದಿಂದ ಆಗಿದೆ. ಪ್ರಸ್ತುತ ಕಾಮಗಾರಿ ಆರಂಭವಾಗುವಾಗ ಜಲ್ಲಿ ಕ್ರಷರ್ ಮಾಲಕರ ಮುಷ್ಕರ ಅಡ್ಡಿಯಾಗಿತ್ತು.ಇದೀಗ ಅದು ಸರಿಯಾಗಿದ್ದು, ಕಾಮಗಾರಿಗೆ ವೇಗ ಕೊಡಲಾಗಿದೆ.ಮಾರ್ಚ್ನಲ್ಲಿ ರಸ್ತೆ ಲೋಕರ್ಪಾಣೆ ಮಾಡಲಾಗುವುದು ಎಂದು ಹೇಳಿದರು.ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ವಿದ್ಯಾ ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಚಂದ್ರ,ಪೌರಾಯುಕ್ತ ಮಧು ಎಸ್ ಮನೋಹರ್, ಕಾರ್ಯಪಾಲಕ ಇಂಜಿನಿಯರ್ ದುರ್ಗಾಪ್ರಸಾದ್, ಭಾರತ್ ಅಟೋ ಕಾರ್ಸ್ನ ಮೆನೇಜರ್ ಆನಂದ ಕುಲಾಲ್ ಮತ್ತು ಗುತ್ತಿಗೆದಾರ ಬಿ.ಜಿ.ಇನ್ಸ್ಟ್ರಕ್ಷನ್ನ ಜುವೈದ್ ಪರ್ಲಡ್ಕ ಉಪಸ್ಥಿತರಿದ್ದರು.