ಜಿಲ್ಲಾ ವ್ಯಾಪ್ತಿಯಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆದರೆ ಅನಿರೀಕ್ಷಿತ ದಾಳಿ; ದ.ಕ. ಜಿಲ್ಲಾ ಪೊಲೀಸ್ ಘಟಕ ಎಚ್ಚರಿಕೆ

0

ಪುತ್ತೂರು: ಜಿಲ್ಲಾ ವ್ಯಾಪ್ತಿಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಕುರಿತು ಮಾಹಿತಿ ಬಂದಲ್ಲಿ ಅನಿರೀಕ್ಷಿತ ದಾಳಿ ನಡೆಸಲಾಗುವುದು ಎಂದು ದ.ಕ. ಜಿಲ್ಲಾ ಪೊಲೀಸ್ ಘಟಕ ಎಚ್ಚರಿಕೆ ನೀಡಿದೆ.

ಬೆಳ್ತಂಗಡಿ ತಾಲೂಕಿನ ಉಜಿರೆ ಪರಿಸರದ ಕೆಲವು ಲಾಡ್ಜ್ ಗಳಲ್ಲಿ ಅನೈತಿಕ ಮತ್ತು ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ ಎಂಬ ಮಾಹಿತಿ ಬಂದ ಮೇರೆಗೆ ಬಂಟ್ವಾಳ ಉಪ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಒಳಗೊಂಡ 5 ವಿಶೇಷ ತಂಡ ರಚಿಸಿ ಬಂಟ್ವಾಳ ಪೊಲೀಸ್ ಉಪ ವಿಭಾಗದ ಡಿವೈಎಸ್ಪಿ ಪ್ರತಾಪ್ ಸಿಂಗ್ ಥೋರಾಟ್ ರವರ ನೇತೃತ್ವದಲ್ಲಿ ಏಕಕಾಲದಲ್ಲಿ ಉಜಿರೆ ಪರಿಸರದ ಎಲ್ಲಾ ಲಾಡ್ಜ್ ಗಳ ಮೇಲೆ ದಾಳಿ ನಡೆಸಿ ಸಿಸಿಟಿವಿಗಳನ್ನು, ದಾಖಲಾತಿ ಪುಸ್ತಕಗಳನ್ನು ಪರಿಶೀಲನೆ ನಡೆಸಲಾಗಿದೆ. ಈ ವೇಳೆ ಲಾಡ್ಜ್ ಮಾಲೀಕರುಗಳಿಗೆ ಮುಂದಿನ ದಿನಗಳಲ್ಲಿ ಲಾಡ್ಜ್ ನಲ್ಲಿರುವ ಎಲ್ಲಾ ಸಿಸಿಟಿವಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳಲು ಹಾಗೂ ಲಾಡ್ಜ್ ನಲ್ಲಿ ತಂಗುವ ಪ್ರವಾಸಿಗರು ಮತ್ತು ಭಕ್ತಾದಿಗಳಿಂದ ಗುರುತಿನ ಚೀಟಿಗಳನ್ನು ಪಡೆದು ರಿಜಿಸ್ಟ್ರರ್ ಪುಸ್ತಕಗಳಲ್ಲಿ ಸರಿಯಾಗಿ ದಾಖಲಿಸಬೇಕು, ಯಾವುದೇ ಅನೈತಿಕ, ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ಅಂತಹ ಕೃತ್ಯಗಳು ಲಾಡ್ಜ್ ಪರಿಸರಗಳಲ್ಲಿ ಕಂಡುಬಂದಲ್ಲಿ ತಕ್ಷಣ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು, ಲಾಡ್ಜ್ ಗಳ ನಿರ್ವಹಣೆಗೆ ಸಂಬಂಧಿಸಿದ ಎಲ್ಲಾ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಯಾವುದೇ ನಿಯಮಾವಳಿಗಳ ಉಲ್ಲಂಘನೆ ಕಂಡು ಬಂದಲ್ಲಿ ಅಂತಹ ಲಾಡ್ಜ್ ಗಳ ಪರವಾನಿಗೆಯನ್ನು ರದ್ದುಪಡಿಸಲು ಸಂಬಂಧಪಟ್ಟ ಇಲಾಖೆಗಳಿಗೆ ವರದಿ ನೀಡಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ದ.ಕ. ಜಿಲ್ಲಾ ಘಟಕದ ಪೊಲೀಸ್ ಅಧಿಕಾರಿಗಳು ಜಿಲ್ಲಾ ವ್ಯಾಪ್ತಿಯಲ್ಲಿ ಕಾನೂನುಬಾಹಿರ ಚಟುವಟಿಕೆಗಳ ಕುರಿತು ಮಾಹಿತಿ ಬಂದಲ್ಲಿ ಮುಂದಿನ ದಿನಗಳಲ್ಲಿಯೂ ಈ ರೀತಿಯ ಅನಿರೀಕ್ಷಿತ ದಾಳಿಗಳನ್ನು ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

LEAVE A REPLY

Please enter your comment!
Please enter your name here