ಫಮಾನವ ಬದುಕು ಏಳೇಳು ಜನುಮದ ಭಾಗ್ಯವಂತೆ. ಸತ್ಯ, ಚಿತ್ತ, ಆನಂದದಿಂದ ನಾವು ಈ ಲೋಕದ ಬೆಳಕು ಕಾಣುತ್ತೇವೆ. ಅದಕ್ಕೇ ಹೇಳುವುದು ಪೂರ್ವ ಜನ್ಮದ ಪುಣ್ಯದ ಫಲವೇ ಈ ಮಾನವ ಜನ್ಮವಾಗಿದೆಯೆಂದು.
ಮಾತೃದೇವೋಭವ, ಪಿತೃ ದೇವೋಭವ, ಆಚಾರ್ಯ ದೇವೋಭವ… ಎಂಬ ನಮ್ಮ ರಾಷ್ಟ್ರದ ಆರ್ಯೋಕ್ತಿಯಂತೆ ಈ ಮೂವರು ದೇವರಲ್ಲಿ ಮಾತೃ-ಅಮ್ಮನಿಗೆ ಮೊದಲ ಸ್ಥಾನ. ಕೋಟಿ ದೇವರಿದ್ದರೂ ಒಂಭತ್ತು ತಿಂಗಳು ಹೊತ್ತು ನೂರಾರು ಕಷ್ಟಗಳ ಎದುರಿಸಿ ನಮಗೆ ಜನುಮ ನೀಡುವ ದೇವತೆ ತಾಯಿ. ತನ್ನ ಮಗುವಿನ ಮುಖ ನೋಡಿ ತನ್ನ ನೋವನ್ನೆಲ್ಲ ಮರೆಯುವ ತಾಯಿ ಕ್ಷಮಯಾಧರಿತ್ರಿ; ಅಮ್ಮ ನಮಗೆ ಜನುಮ ನೀಡಿ ಲೋಕದ ಬೆಳಕ ತೋರಿಸಿದರೆ ಅಪ್ಪ ಹೆಗಲಲಿ ಹೊತ್ತು ಜಗದಗಲ ಪರಿಚಯಿಸುವ ನಮ್ಮ ಎರಡು ಕಣ್ಣುಗಳಿದ್ದಂತೆ. ಅಮ್ಮ ತಾನು ಅರೆಹೊಟ್ಟೆಯಲ್ಲಿದ್ದರೂ, ಒಡಲು ತುಂಬಾ ನೋವು ತುಂಬಿದ್ದರೂ ಮಕ್ಕಳು ಚೆನ್ನಾಗಿರಬೇಕು. ಅವರಿಗೆ ಯಾವ ನೋವು ಬಾರದಂತೆ ಲಾಲನೆ-ಪಾಲನೆ ಮಾಡಿ, ಲಾಲಿ ಹಾಡಿ ಸಂಸ್ಕಾರ-ಸಂಸ್ಕೃತಿ ನೀಡಿ ಬೆಳೆಸುವ ತಾಯಿಯ ಋಣ ತೀರಿಸಲು ನಮ್ಮ ಏಳೇಳು ಜನ್ಮದಿಂದಲೂ ಸಾಧ್ಯವಿಲ್ಲ.
ಮಕ್ಕಳಿಗೆ ಜನುಮನೀಡಿ ನೂರು ನೋವ ಸಹಿಸಿ ನಾಡು-ನುಡಿ-ಸಂಸ್ಕೃತಿಯ ಮೂಲಪಾಠ ಬೋಧಿಸಿ, ಬೆಳೆಸಿ ಈ ಸಮಾಜದ ಆದರ್ಶದ ಸಂಪತ್ತಾಗಿ ಬೆಳೆಸಿದ ಪೂಜ್ಯ ಅಮ್ಮ ಶ್ರೀಮತಿ ಪಿ.ವಿ.ಸಾವಿತ್ರಿ ವಿಜಯಗೋಪಾಲ್ ಇಂದು ನಮ್ಮೊಂದಿಗಿಲ್ಲ. 2023ರ ಜನವರಿ 28, ಶನಿವಾರ ತನ್ನೆಲ್ಲ ಕರ್ತವ್ಯಗಳ ಮುಗಿಸಿ ಪಂಚಭೂತಗಳಲ್ಲಿ ಲೀನವಾಗಿ ದೇವರ ಪಾದಸೇರಿ ಅಮ್ಮ ದೇವರ ಸ್ಥಾನ ಸೇರಿದ್ದಾರೆ. ಕೀ.ಶೇ.ಶ್ರೀಮತಿ ಪಿ.ವಿ ಸಾವಿತ್ರಿ ಗೋಪಾಲ್, ಹಿಂದೆ ಫ್ರೆಂಚ್ ಸರಕಾರದ ಪಾಂಡಿಚೇರಿಯ ಮಾಹೆಯಲ್ಲಿ ಕಸ್ಟಮ್ಸ್ ಕಲೆಕ್ಟರ್ ಆಗಿದ್ದ ವಾಸುದೇವನ್ ಮತ್ತು ಸಾಧ್ವೀಮಣಿ ಮಮತಾಮಯಿ ಶ್ರೀಮತಿ ಪಿ.ವಿ ಕೌಸಲ್ಯ ಅವರ ಐದು ಮಕ್ಕಳಲ್ಲಿ ನಾಲ್ಕನೆಯವರಾಗಿ, ಮೇ 23,1937ರಲ್ಲಿ ಈ ಲೋಕದ ಬೆಳಕನ್ನು ಕಂಡರು. ಕೀ.ಶೇ.ಪಂಕಜಾಕ್ಷನ್, ಊಂಐ, ನಾಸಿಕ್, ಕೀ.ಶೇ.ವಲ್ಸಲನ್, ಕೆಮಿಸ್ಟ್ ಈರೋಡ್, ಕೀ.ಶೇ ಶ್ರೀಮತಿ ಹೈಮ ಭಾಸ್ಕರ್ ಚೆನೈ, ಐದನೆಯವರು ಕೀ.ಶೇ.ಸೀತಾದಾಮೋಧರನ್, ಆಂಗ್ಲ ಸಾಹಿತ್ಯ ಪ್ರೊಫೆಸರ್ ಚೆನೈ.. ಇಂಥ ತುಂಬಿದ ಆದರ್ಶದ ಬದುಕು ಕಂಡ ಅಮ್ಮ ಕೀ.ಶೇ ಪಿ.ವಿ ಸಾವಿತ್ರಿ ವಿಜಯಗೋಪಾಲ್ ಸಂಭ್ರಮದ ಬದುಕು ಕಂಡವರು.
ಅಂದಿನ ತನ್ನ ಊರಾದ, ಪಾಂಡಿಚೇರಿಯ ಮಾಹೆ ಫ್ರೆಂಚ್ ಶಾಲೆಯಲ್ಲಿ ಮೆಟ್ರಿಕ್ಯುಲೇಷನ್ ವಿದ್ಯಾಭ್ಯಾಸ ಪಡೆದಿರುವ ಅಮ್ಮ ಯಾವ ಉನ್ನತ ಪದವೀಧರರಿಗಿಂತಲೂ ಕಡಿಮೆ ಇರಲಿಲ್ಲ. ಸಂಸಾರ ಬದುಕಿಗೆ ಕಾಲಿಟ್ಟ ಪಿ.ವಿ. ಸಾವಿತ್ರಿ ಅಮ್ಮ ಅಂದಿನ ಭಾರತೀಯ ಭೂಸೇನೆಯಲ್ಲಿ ಭಾರತಮಾತೆಯ ಸೇವೆಯನ್ನು ಮಾಡುತ್ತಿದ್ದ ಎ.ಪಿ.ವಿಜಯಗೋಪಾಲ್ ಅವರ ಸಹಧರ್ಮಿಣಿಯಾಗುತ್ತಾರೆ.ಕೀ.ಶೇ.ಎ.ಪಿ.ವಿಜಯಗೋಪಾಲ್ ಹದಿನೆಂಟು ವರ್ಷಗಳ
ಮಾತೃ ಸೇವೆಯ ನಂತರ ದ.ಕ.ಜಿಲ್ಲೆಯಲ್ಲಿ ವುಡ್ ಬ್ರೇಯರ್ಸ್ ಟೀ ಕಂಪೆನಿಯ ದ. ಕ ವಿತರಕರಾಗಿ ಕರ್ತವ್ಯ ನಿರ್ವಹಿಸುತ್ತಾರೆ. ಈ ಆದರ್ಶ ದಂಪತಿಗೆ ಮೂರು ಜನ ಗಂಡು ಮಕ್ಕಳು…. ಮೊದಲನೆಯವರು ದಿ|| ಗೋಪಿನಾಥ್ ಉದ್ಯಮಿ, ಪುತ್ತೂರು (ಚಾಹುಡಿ ವ್ಯಾಪಾರ) ಕೊನೆಯವರು ದಿ|| ಗಿರಿನಾಥ್ (ಅಣ್ಣನ ಜೊತೆ ವ್ಯಾಪಾರ ವಹಿವಾಟು), ಮಧ್ಯದವರು ಶ್ರೀಯುತ ಪಿ.ವಿ. ಗೋಕುಲ್ ನಾಥ್, ಸ್ಥಾಪಕಾಧ್ಯಕ್ಷರು, ಸಂಚಾಲಕರು, ಶ್ರೀ ಧರ್ಮಸ್ಥಳ ಕಟ್ಟಡದ ಎರಡನೇ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಣದಲ್ಲಿ ವಂಚಿತರ ಬದುಕಿಗೆ ಪ್ರಗತಿಯ ಹೆಜ್ಜೆಯಾಗಿರುವ ಪ್ರಗತಿ ಸ್ಟಡಿ ಸೆಂಟರ್ ಪುತ್ತೂರು. ತನ್ನ ಬದುಕಿನುದ್ದಕ್ಕೂ ಆದರ್ಶದ ಬೆಳಕಿನಲ್ಲೇ ಸಾಗಿದ ಕ್ಷಮಯಾ ಧರಿತ್ರಿ ಅಮ್ಮ- ಸಮಾಜಮುಖೀ ಕೆಲಸಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿ ಕೊಂಡವರು. ಗೃಹಿಣಿ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಮಾಜಿ ಸದಸ್ಯರು ಪುತ್ತೂರು. ದ.ಕ ಜಿಲ್ಲೆಯ ಟೈಲರಿಂಗ್, ಎಂಬ್ರೈಡರಿ ತರಬೇತಿದಾರರು, ನಾವೆಲ್ಲರೂ ಹೆಮ್ಮೆಯಿಂದ ನೆನಪಿಸಿಕೊಳ್ಳಬೇಕಾದ ಅಮ್ಮನವರ ಸಾಧನೆಯೆಂದರೆ ಪೊಲೀಸ್ ರೈಫಲ್ ಶೂಟಿಂಗ್ ತರಬೇತಿಯಲ್ಲಿ ಡಿಸ್ಟಿಂಕ್ಷನ್ ವಿಶೇಷ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಸಾಧಕಿ ಅವರು.
65ವರ್ಷಗಳಿಂದ ಪುತ್ತೂರಿನಲ್ಲಿ ನೆಲೆಸಿದ್ದ ಶ್ರೀಮತಿ ಪಿ.ವಿ.ಸಾವಿತ್ರಿ ವಿಜಯಗೋಪಾಲ್ ಅವರಿಗೆ ಇಬ್ಬರು ಸೊಸೆಯಂದಿರು. ಹಿರಿಯ ಸೊಸೆ ಶ್ರೀಮತಿ ಲಲನ ಕುಮಾರಿ, ಎಫ್.ಡಿ.ಎ, ಪುತ್ತೂರು ಪುರಸಭೆಯ ನಿವೃತ್ತ ಸಿಬ್ಬಂದಿ, ಇನ್ನೋರ್ವ ಸೊಸೆ ಶ್ರೀಮತಿ ಕೆ.ಹೇಮಲತಾ ಗೋಕುಲ್ ನಾಥ್, ಪ್ರಾಂಶುಪಾಲರು ಪ್ರಗತಿ ಸ್ಟಡಿ ಸೆಂಟರ್ ಪುತ್ತೂರು. ತುಂಬು ಸಂಸಾರದ ಒಡತಿಯಾಗಿ, ಆದರ್ಶ ಗೃಹಿಣಿಯಾಗಿ ಸದಾ ನಗುಮುಖದಲ್ಲೇ ಬಾಳಿಬೆಳಗಿ ತನ್ನ ವಯೋಸಹಜ 86 ವಸಂತಗಳ ಸಂತಸದ ಬದುಕನ್ನು ಕಂಡು ಇಂದು ನಮ್ಮಿಂದ ಮರೆಯಾಗಿ ಹೋದರೂ ಅವರ ಆದರ್ಶ ಸನ್ನಡತೆಯ ಬೆಳಕು ನಮಗೆ ಸದಾದಾರಿ ದೀಪವಾಗಲಿ..ಅಗಲಿದ ಮಹಾಮಾತೆಯ ಆತ್ಮಕ್ಕೆ ಚಿರಶಾಂತಿ…ಸಾಯುಜ್ಯ ದೊರಕಲಿ ಎಂದು ಹತ್ತೂರ ಒಡೆಯ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರಲ್ಲಿ, ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ದೇವರಲ್ಲಿ ಹಾಗೂ ಸರ್ವ ದೈವ-ದೇವರಲ್ಲಿ ಪ್ರಾರ್ಥಿಸೋಣ.