ಉಳಿಕೆಯಾಗಿದ್ದ ಲಕ್ಷಾಂತರ ಹಣವನ್ನು ಪತ್ರಕರ್ತರ ಸಂಘದ ಖಾತೆಗೆ ಜಮೆ ಮಾಡಲು ಮನವಿ
ಪುತ್ತೂರು: ಪುತ್ತೂರು ಪ್ರೆಸ್ಕ್ಲಬ್ನಲ್ಲಿ ನಡೆದಿದೆ ಎನ್ನಲಾದ ಹಣಕಾಸಿನ ಅವ್ಯವಹಾರದ ಬಗ್ಗೆ ಅಮೂಲಾಗ್ರ ತನಿಖೆ ನಡೆಸಿ ಸಾರ್ವಜನಿಕ ವಲಯದಲ್ಲಿ ಮೂಡಿರುವ ಸಂದೇಹ ಅಥವಾ ಅಪನಂಬಿಕೆಯನ್ನು ನಿವಾರಿಸಬೇಕೆಂದು ಆಗ್ರಹಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕಕ್ಕೆ ಸಂಘದ ಸದಸ್ಯ ದೀಪಕ್ ಉಬಾರ್ ಅವರು ಮನವಿ ಸಲ್ಲಿಸಿದ್ದಾರೆ.
ದೀಪಕ್ ಮನವಿ:
ಪತ್ರಕರ್ತರ ಸಂಘದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರಿಗೆ ಮನವಿ ಸಲ್ಲಿಸಿರುವ ದೀಪಕ್ ಉಬಾರ್ ಅವರು, “ಕಾರ್ಯನಿರತ ಪತ್ರಕರ್ತರ ಸಂಘ ಪುತ್ತೂರು ತಾಲೂಕು ಅಸ್ತಿತ್ವಕ್ಕೆ ಬಂದು ಅದರ ನೂತನ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಎಲ್ಲಾ ಪದಾಧಿಕಾರಿಗಳಿಗೂ ಅಭಿನಂದನೆಗಳು. ಅಂತೆಯೇ ಈಗಿನ ಈ ಸಂಘ ಅಸ್ತಿತ್ವಕ್ಕೆ ಬರುವ ಮೊದಲು ಪುತ್ತೂರು ಪ್ರೆಸ್ ಕ್ಲಬ್ನಲ್ಲಿ ಪುತ್ತೂರು ತಾಲೂಕು ಪತ್ರಕರ್ತರ ಸಂಘವೆಂಬುದು ಅಸ್ತಿತ್ವದಲ್ಲಿತ್ತು. ಈ ಸಂಘದ ಆಡಳಿತಾವಧಿಯಲ್ಲಿ ಕಳೆದ ಬಾರಿ ಪುತ್ತೂರು ಪ್ರೆಸ್ ಕ್ಲಬ್ ನವೀಕರಣದ ಹೆಸರಿನಲ್ಲಿ ಭಾರೀ ಪ್ರಮಾಣದ ಹಣಕಾಸಿನ ಅವ್ಯವಹಾರ ನಡೆದಿರುವುದು ಸಂಘದ ಆಂತರಿಕ ಲೆಕ್ಕಪತ್ರ ಪರಿಶೀಲನೆಯ ವೇಳೆ ಕಂಡು ಬಂದಿರುವುದು ತಮಗೆಲ್ಲರಿಗೂ ತಿಳಿದಿರುವ ವಿಚಾರವೇ ಇದೆ. ಈ ಹಿಂದಿನ ಅವಧಿಯಲ್ಲಿ ಲೆಕ್ಕಪತ್ರವನ್ನು ಸಮರ್ಪಕವಾಗಿ ಮಂಡಿಸಿ ಎಂದು ಸತತ ಮನವಿ ಸಲ್ಲಿಸಿದ್ದರೂ ಹೊಣೆಯುಳ್ಳ ಪದಾಧಿಕಾರಿಗಳು ಲೆಕ್ಕಪತ್ರವನ್ನು ಸಮರ್ಪಕವಾಗಿ ಮಂಡಿಸಲು ಹಿಂದೇಟು ಹಾಕಿರುವ ಹಿನ್ನೆಲೆಯಲ್ಲಿ ಪ್ರಸಕ್ತ ನೂತನವಾಗಿ ಆಯ್ಕೆಯಾಗಿರುವ ತಾವುಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಂಘದ ಹಣಕಾಸಿನ ವ್ಯವಹಾರದಲ್ಲಿ ಅವ್ಯವಹಾರ ನಿಜವಾಗಿಯೂ ನಡೆದಿದೆಯೇ, ನಡೆದಿದೆ ಎಂದರೆ ಯಾರಿಂದ ಈ ಕೃತ್ಯ ನಡೆದಿದೆ ಹಾಗೂ ಅವ್ಯವಹಾರ ನಡೆಸಿದವರ ವಿರುದ್ಧ ಸಂಘ ಯಾವ ಕ್ರಮ ಕೈಗೊಳ್ಳಲಿದೆ ಎನ್ನುವುದನ್ನು ಸಂಘದ ಎಲ್ಲಾ ಸದಸ್ಯರ ಗಮನಕ್ಕೆ ತರಬೇಕೆಂದು ತಮ್ಮಲ್ಲಿ ಈ ಮೂಲಕ ವಿನಂತಿಸುತ್ತಿದ್ದೇನೆ.
ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಸದಸ್ಯರಾಗಿದ್ದವರೇ ಈಗ ಕಾರ್ಯನಿರತ ಪತ್ರಕರ್ತರ ಸಂಘದಲ್ಲೂ ಸದಸ್ಯರಾಗಿದ್ದಾರೆ. ಆದ್ದರಿಂದ ಇದರ ಸತ್ಯಾಂಶ ಅನಾವರಣಗೊಳ್ಳದಿದ್ದಲ್ಲಿ ಎಲ್ಲಾ ಸದಸ್ಯರ ಮೇಲೂ ಸಾರ್ವಜನಿಕ ವಲಯದಲ್ಲಿ ಅಪನಂಬಿಕೆ ಮೂಡಲಿದೆ.
ಮಾತ್ರವಲ್ಲದೆ ಲೆಕ್ಕ ಪತ್ರ ಪರಿಶೀಲನೆಯ ವೇಳೆ ಉಳಿಕೆಯಾಗಿ ಕಾಣಿಸಲಾಗಿದ್ದ ಲಕ್ಷಾಂತರ ಮೊತ್ತ ಹಣವನ್ನು ಮರಳಿ ಸಂಘದ ಖಾತೆಗೆ ಜಮೆ ಮಾಡಿಸಬೇಕೆಂದೂ ಈ ಮೂಲಕ ತಮ್ಮಲ್ಲಿ ಆಗ್ರಹಿಸುತ್ತಿದ್ದೇನೆ. ಸಾರ್ವಜನಿಕ ವಲಯದಲ್ಲಿ ಪತ್ರಕರ್ತರ ಬಗ್ಗೆ ವ್ಯಕ್ತವಾಗುತ್ತಿರುವ ಅಪನಂಬಿಕೆಯಾಧಾರಿತ ಮಾತುಗಳನ್ನು ನಿಯಂತ್ರಿಸುವಲ್ಲಿ ತಮ್ಮ ನೂತನ ಆಡಳಿತ ಮಂಡಳಿ ಈ ಅವ್ಯವಹಾರದ ಆಪಾದನೆಯನ್ನು ಕೂಲಂಕುಷ ತನಿಖೆಗೆ ಒಳಪಡಿಸಬೇಕೆಂದು ವಿನಂತಿಸುತ್ತಾ ತಮ್ಮಿಂದ ಸಕಾರಾತ್ಮಕ ಸ್ಪಂದನವನ್ನು ಬಯಸುತ್ತಿದ್ದೇನೆ” ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಅವ್ಯವಹಾರ ಬೆಳಕಿಗೆ ಬಂದಿತ್ತು:
ಬೆಳ್ಳಿಹಬ್ಬದ ಸಿದ್ಧತೆಯಲ್ಲಿದ್ದ ಪುತ್ತೂರು ತಾಲೂಕು ಪತ್ರಕರ್ತರ ಸಂಘದಲ್ಲಿ ಭಾರೀ ಗೋಲ್ಮಾಲ್ ನಡೆದಿರುವುದು ಕಳೆದ ಮಹಾಸಭೆಯ ವೇಳೆ ಬೆಳಕಿಗೆ ಬಂದಿತ್ತು. ಅಧ್ಯಕ್ಷರಾಗಿದ್ದ ಶ್ರವಣ್ ಕುಮಾರ್, ಕಾರ್ಯದರ್ಶಿಯಾಗಿದ್ದ ಐ.ಬಿ. ಸಂದೀಪ್ ಕುಮಾರ್ ಮತ್ತು ಕೋಶಾಧಿಕಾರಿಯಾಗಿದ್ದ ಕೃಷ್ಣಪ್ರಸಾದ್ ಬಲ್ನಾಡು ಅಲಿಯಾಸ್ ಪ್ರಸಾದ್ ಬಲ್ನಾಡು ಅವರ ಅವಧಿಯಲ್ಲಿ ಸರಿಯಾದ ಲೆಕ್ಕಪತ್ರ ಮಂಡಿಸದೇ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆಸಿರುವ ಆರೋಪ ಕೇಳಿ ಬಂದಿತ್ತು. ಪತ್ರಕರ್ತರ ಸಂಘದ ಲೆಕ್ಕಪತ್ರ ವ್ಯವಹಾರಗಳು ಸರಿಯಾಗಿ ನಡೆಯಬೇಕು, ಆ ಬಳಿಕವೇ ಸಂಘದ ಮಹಾಸಭೆ ಮತ್ತು ಚುನಾವಣಾ ಪ್ರಕ್ರಿಯೆ ನಡೆಯಬೇಕು ಎಂದು ಪುತ್ತೂರು ತಾಲೂಕು ಪತ್ರಕರ್ತರ ಸಂಘದಲ್ಲಿ ಸದಸ್ಯರಾಗಿರುವ ಉಪ್ಪಿನಂಗಡಿ ಭಾಗದ ಪತ್ರಕರ್ತರು ಒತ್ತಾಯಿಸಿದ್ದರು. ಅದೇ ಕಾರಣಕ್ಕಾಗಿ ಪತ್ರಕರ್ತರ ಸಂಘದ ಮಹಾಸಭೆ ಮುಂದೂಡಿಕೆಯಾಗಿತ್ತು, ಚುನಾವಣಾ ಪ್ರಕ್ರಿಯೆ ರದ್ದುಗೊಂಡಿತ್ತು. ಬಳಿಕ ಲೆಕ್ಕಪತ್ರ ಪರಿಶೀಲನೆಗಾಗಿ ನಿಯೋಜನೆಗೊಂಡಿದ್ದ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಉದಯ ಕುಮಾರ್ ಯು.ಎಲ್. ಅವರು ಪತ್ರಕರ್ತರ ಸಂಘದಲ್ಲಿ ಅವ್ಯವಹಾರ ನಡೆದಿದೆ ಎಂದು ದಾಖಲೆ ಸಹಿತ ವರದಿ ನೀಡಿದ್ದರು. ಈ ನಿಟ್ಟಿನಲ್ಲಿ ಲೆಕ್ಕಪತ್ರ ಸರಿಯಾಗಿ ಮಂಡನೆಯಾಗಿ ಅದು ಇತ್ಯರ್ಥವಾಗುವವರೆಗೆ ಪತ್ರಕರ್ತರ ಸಂಘದ ಚುನಾವಣೆ ನಡೆಯದಂತೆ ಅವರು ಆಗ್ರಹಿಸಿದ್ದರು. ಸಂಘದಲ್ಲಿಯ ಅವ್ಯವಹಾರ ಬೆಳಕಿಗೆ ಬಂದ ಕಾರಣಕ್ಕೆ ಜಾಗ್ರತೆಗೊಂಡ ಅನೀಶ್ ಕುಮಾರ್ ನೇತೃತ್ವದ ತಂಡದವರು ಅದನ್ನು ಮುಚ್ಚಿಹಾಕಲು ತಮ್ಮೊಳಗೇ ಅನಧಿಕೃತವಾಗಿ ಆಯ್ಕೆ ಪ್ರಕ್ರಿಯೆ ನಡೆಸಿ ಪುತ್ತೂರು ತಾಲೂಕು ಪತ್ರಕರ್ತರ ಸಂಘಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಐ.ಬಿ. ಸಂದೀಪ್ ಕುಮಾರ್ ಅಧ್ಯಕ್ಷರಾಗಿ, ಅಜಿತ್ ಕುಮಾರ್ ಕಾರ್ಯದರ್ಶಿಯಾಗಿ, ಕುಮಾರ್ ಕಲ್ಲಾರೆ ಉಪಾಧ್ಯಕ್ಷರಾಗಿ, ಪ್ರಸಾದ್ ಬಲ್ನಾಡು ಕೋಶಾಧಿಕಾರಿಯಾಗಿ, ರಾಜೇಶ್ ಪಟ್ಟೆ ಜತೆ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವುದಾಗಿ ಘೋಷಿಸಿಕೊಂಡಿದ್ದರು. ವ್ಯವಸ್ಥಾಪಕರಾಗಿ ಪ್ರವೀಣ್ ಕುಮಾರ್ ಬೊಳುವಾರು ಮತ್ತು ಕಾನೂನು ಸಲಹೆಗಾರರಾಗಿ ನರಸಿಂಹಪ್ರಸಾದ್ ಅವರನ್ನು ನೇಮಿಸಲಾಗಿದೆ ಎಂದು ಘೋಷಿಸಲಾಗಿತ್ತು. ಬಳಿಕ ಐ.ಬಿ. ಸಂದೀಪ್ ಕುಮಾರ್ ಮತ್ತು ಅವರ ತಂಡದವರು ನಮ್ಮದು ಸ್ವತಂತ್ರ ಸಂಸ್ಥೆ. ನಮ್ಮ ಪತ್ರಕರ್ತರ ಸಂಘವು ರಾಜ್ಯ ಅಥವಾ ಜಿಲ್ಲಾ ಪತ್ರಕರ್ತರ ಸಂಘದ ಜತೆ ಮರ್ಜ್ ಆಗಿಲ್ಲ ಎಂದು ಘೋಷಿಸಿದ್ದರು. ಇದೇ ಸಮಯದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದವರು ಪುತ್ತೂರು ತಾಲೂಕು ಪತ್ರಕರ್ತರ ಸಂಘಕ್ಕೆ ಚುನಾವಣೆ ಘೋಷಿಸಿದ್ದರು. ಹಾಗಾಗಿ ರಾಜ್ಯದಲ್ಲಿ ಬಲಿಷ್ಠವಾಗಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧೀನದಲ್ಲಿ, ಹಲವು ವಿಶಿಷ್ಟ ಕಾರ್ಯಕ್ರಮಗಳ ಮೂಲಕ ಜನಮೆಚ್ಚುಗೆ ಗಳಿಸಿರುವ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮೇಲುಸ್ತುವಾರಿಯಲ್ಲಿ ಪುತ್ತೂರು ತಾಲೂಕು ಘಟಕದ ಚುನಾವಣೆ ನಡೆದು ಪದಾಧಿಕಾರಿಗಳ ಆಯ್ಕೆ ನಡೆದಿತ್ತು. ವಿಶೇಷ ಎಂದರೆ ನಮ್ಮದು ಸ್ವತಂತ್ರ ಸಂಸ್ಥೆ, ಯಾವ ಸಂಘದೊಂದಿಗೂ ಮರ್ಜ್ ಆಗಿಲ್ಲ ಎಂದು ಘೋಷಿಸಿಕೊಂಡಿದ್ದ ಅಧ್ಯಕ್ಷ ಐ.ಬಿ. ಸಂದೀಪ್ ಕುಮಾರ್, ಪದಾಧಿಕಾರಿಗಳೆಂದು ಘೋಷಿಸಿಕೊಂಡಿದ್ದ ಅಜಿತ್ ಕುಮಾರ್, ಕುಮಾರ್ ಕಲ್ಲಾರೆ, ಪ್ರಸಾದ್ ಬಲ್ನಾಡು ರಾಜೇಶ್ ಪಟ್ಟೆ, ಪ್ರವೀಣ್ ಕುಮಾರ್ ಬೊಳ್ವಾರು ಅವರ ತಂಡದವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕವನ್ನು ಸೇರಿಕೊಂಡಿದ್ದರು. ಅದರ ಪದಾಧಿಕಾರಿಗಳ ಚುನಾವಣೆಗೆ ಸ್ಪರ್ಧಿಸಿ ಪ್ರವೀಣ್ ಬೊಳ್ವಾರ್ರವರನ್ನು ಹೊರತು ಪಡಿಸಿ ಉಳಿದವರು ಪದಾಧಿಕಾರಿಯಾಗಿ ಆಯ್ಕೆಯಾಗಿದ್ದರು. ಎರಡು ಸಂಘಗಳಲ್ಲಿ ಸದಸ್ಯತನ ಹೊಂದುವಂತಿಲ್ಲವಾದುದರಿಂದ ಪುತ್ತೂರು ತಾಲೂಕು ಪತ್ರಕರ್ತರ ಸಂಘದಿಂದ ಅವರ ಸದಸ್ಯತನ ರದ್ಧಾಗಿ ಪುತ್ತೂರು ತಾಲೂಕು ಪತ್ರಕರ್ತರ ಸಂಘ ವಸ್ತುಶಃ ಬರ್ಖಾಸ್ತುಗೊಂಡು ಅನಾಥವಾಗಿದೆ. ಆ ಬೆಳವಣಿಗೆಯಿಂದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕದವರು ಲೆಕ್ಕಪತ್ರದ ಜವಾಬ್ದಾರಿ ವಹಿಸಕೊಳ್ಳಬೇಕಾದ ಹಿನ್ನೆಲೆಯಲ್ಲಿ ದೀಪಕ್ ಉಬಾರ್ ಅವರು ಇದೀಗ ಅವರಿಗೆ ಮನವಿ ಸಲ್ಲಿಸಿದ್ದಾರೆ.