ತೆಂಕಿಲ ವಿವೇಕಾನಂದ ಶಾಲಾ ಮೈದಾನದಲ್ಲಿ `ಅಮಿತ್ ಶಾ’ ಸಮಾವೇಶ:ಭರದಿಂದ ನಡೆಯುತ್ತಿದೆ ಸಿದ್ಧತಾ ಕಾಮಗಾರಿ-ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಮೊಕ್ಕಾಂ

0

2 ಲಕ್ಷ ಚದರ ಅಡಿಯ ಜರ್ಮನ್ ಪೆಂಡಾಲ್

30 ಅಡಿ ಎತ್ತರದ ವೇದಿಕೆ ನಿರ್ಮಾಣ

1 ಲಕ್ಷ ಜನರಿಗೆ ಮೈದಾನದಲ್ಲಿ ವ್ಯವಸ್ಥೆ

ಮೈದಾನ ಹೊರತು ಪಡಿಸಿ ಅಲ್ಲಲ್ಲಿ ಎಲ್‌ಇಡಿ ಪರದೆ

ವೇದಿಕೆಯ ಮೇಲೂ ಬೃಹತ್ ಪರದೆ

ಎಸ್‌ಪಿಜಿ ತಂಡದ ವೀಕ್ಷಣೆ ಅಂತಿಮ

ಪುತ್ತೂರು: ಪ್ರತಿಷ್ಠಿತ ಅಂತರ್ ರಾಜ್ಯ ಸಹಕಾರಿ ಸಂಸ್ಥೆಯಾಗಿರುವ ಕ್ಯಾಂಪ್ಕೋದ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಫೆ.11ರಂದು ಕೇಂದ್ರ ಗೃಹ ಹಾಗೂ ಪ್ರಥಮ ಸಹಕಾರ ಸಚಿವರಾದ ಅಮಿತ್ ಶಾ ಅವರನ್ನು ಸ್ವಾಗತಿಸಲು ವಿವೇಕಾನಂದ ಶಾಲಾ ಮೈದಾನ ಅಣಿಯಾಗುತ್ತಿದೆ. ಸಮಾವೇಶಕ್ಕೆ ಬೃಹತ್ ವೇದಿಕೆ ಮತ್ತು ಜನರಿಗೆ ಬಿಸಿಲಿನ ತಾಪವನ್ನು ತಡೆಯಲು ಜರ್ಮನ್ ತಂತ್ರಜ್ಞಾನದ ಮಾದರಿಯಲ್ಲಿ ಬೃಹತ್ ಪೆಂಡಾಲ್ ನಿರ್ಮಿಸಲಾಗುತ್ತಿದೆ.


ತೆಂಕಿಲ ವಿವೇಕಾನಂದ ಶಾಲೆಯ ಸುಮಾರು 7 ಎಕರೆ ಜಾಗವನ್ನು ಸ್ವಚ್ಛಗೊಳಿಸಿ ರಸ್ತೆ, ಮೂಲ ಸೌಕರ್ಯ ಕಲ್ಪಿಸುವ ಕಾರ್ಯ ವೇಗದಲ್ಲಿ ನಡೆಯುತ್ತಿದೆ. ಗಿಡಗಂಟಿ, ಪೈಪ್‌ಗಳನ್ನು ತೆರವುಗೊಳಿಸಲಾಗಿದೆ. ಜೆಸಿಬಿ ಯಂತ್ರಗಳು ದಿನವಿಡೀ ಕೆಲಸ ಮಾಡುತ್ತಿದ್ದು, ನೆಲವನ್ನು ಸಮತಟ್ಟುಗೊಳಿಸುತ್ತಿವೆ. ಮಣ್ಣು, ಜಲ್ಲಿಪುಡಿ ಬಳಸಿ ಮೈದಾನವನ್ನು ಗಟ್ಟಿ ಮಾಡಲಾಗಿದೆ.


2 ಲಕ್ಷ ಚದರ ಅಡಿಯ ಜರ್ಮನ್ ಪೆಂಡಾಲ್ :

ಸುಮಾರು 2 ಲಕ್ಷ ಚದರ ಅಡಿಯ ಜರ್ಮನ್ ತಂತ್ರಜ್ಞಾನದ ಪೆಂಡಾಲ್ ಅಳವಡಿಸಲಾಗುತ್ತಿದ್ದು, ಇದರಲ್ಲಿ ವೇದಿಕೆ ಸುಮಾರು 30 ಅಡಿ ಎತ್ತರವಾಗಲಿದೆ. ಅಲ್ಲಿಂದ ಡಿ ಜೋನ್, ಗಣ್ಯರ ಆಸನ, ಸಾರ್ವಜನಿಕರ ಆಸನಗಳಿಗೆ ಸಿದ್ದತೆ ನಡೆಯಲಿದ್ದು ಸುಮಾರು 1 ಲಕ್ಷ ಜನರಿಗೆ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ. ಮೈದಾನ ಬಿಟ್ಟು ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಸಭಾಂಗಣ, ಕನ್ನಡ ಮಾಧ್ಯಮ ಶಾಲೆಯ ಬಳಿ ಸೇರಿ ಒಟ್ಟು 9 ಕ್ಕೂ ಅಧಿಕ ಸ್ಥಳಗಳಲ್ಲಿ ಎಲ್‌ಇಡಿ ಪರದೆ ಅಳವಡಿಸಲಾಗುತ್ತದೆ. ಮೈದಾನದ ಅಲ್ಲಲ್ಲಿ ಎಲ್‌ಇಡಿ ಪರದೆ ಇರಲಿದೆ. ವೇದಿಕೆಯಲ್ಲಿ ಬೃಹತ್ ಎಲ್‌ಇಡಿ ಪರದೆ ಇರಲಿದೆ ಎಂದು ಮಾಹಿತಿ ಲಭ್ಯವಾಗಿದೆ.


ಪ್ರತ್ಯೇಕ ದಾರಿ:

ಸಮಾವೇಶ ಮೈದಾನಕ್ಕೆ ಪ್ರತ್ಯೇಕ ದಾರಿ ನಿರ್ಮಿಸಲಾಗುತ್ತಿದ್ದು, ಆ ದಾರಿಗೆ ಮುಗೆರೋಡಿ ಕನ್‌ಸ್ಟ್ರಕ್ಷನ್ ಅವರಿಂದ ಡಾಮರೀಕರಣ ಮಾಡಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಸಂಚಾರದಲ್ಲಿ ತಾತ್ಕಾಲಿಕವಾಗಿ ಮಾರ್ಪಾಡು ಮಾಡುವ ಸಾಧ್ಯತೆಗಳೂ ಇವೆ. ನಗರದ ಪ್ರಮುಖ ರಸ್ತೆಗಳ ಹೊಂಡ ಮುಚ್ಚುವ ಕೆಲಸ ಭರದಿಂದ ನಡೆಯುತ್ತಿದೆ. ಅಲ್ಲಲ್ಲಿ ಮರು ಡಾಮರೀಕರಣ ಕಾಮಗಾರಿಗಳೂ ಸಾಗಿವೆ.


ಎಸ್‌ಪಿಜಿ ತಂಡದ ವೀಕ್ಷಣೆ ಅಂತಿಮ:

ಹೆಲಿಪ್ಯಾಡ್, ವೇದಿಕೆ ಸೇರಿದಂತೆ ಅಮಿತ್ ಶಾ ಕಾರ್ಯಕ್ರಮಕ್ಕೆ ಎಲ್ಲ ಸಿದ್ಧತೆ ನಡೆದಿದ್ದರೂ, ಭದ್ರತೆಗೆ ಮೀಸಲಿರುವ ಎಸ್‌ಪಿಜಿ ತಂಡದ ವೀಕ್ಷಣೆಯ ನಂತರ ಎಲ್ಲವೂ ಅಂತಿಮಗೊಳ್ಳುತ್ತದೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here