ಪುತ್ತೂರು: ಪುತ್ತೂರು ತಾಲೂಕಿನ ಆರ್ಯಾಪು ಹಾಗೂ ಕಡಬ ಕುಟ್ರಪ್ಪಾಡಿ ಗ್ರಾ.ಪಂನ ಸದಸ್ಯರಿಬ್ಬರ ಮರಣದಿಂದಾಗಿ ತೆರವಾದ ಸ್ಥಾನಗಳ ಉಪ ಚುನಾವಣೆಗೆ ಫೆ.25ರಂದು ದಿನಾಂಕ ನಿಗದಿಗೊಳಿಸಿ ದ.ಕ ಜಿಲ್ಲಾಧಿಕಾರಿ ರವಿ ಕುಮಾರ್ ಎಂ.ಆರ್ ಆದೇಶ ಹೊರಡಿಸಿದ್ದಾರೆ.
ಆರ್ಯಾಪು ಗ್ರಾ.ಪಂನ ಆರ್ಯಾಪು 4ನೇ ವಾರ್ಡ್‌ನ ಸದಸ್ಯ ಗಿರೀಶ್ ಕೆ ಹಾಗೂ ಕುಟ್ರುಪ್ಪಾಡಿ ಗ್ರಾ.ಪಂನ ಬಲ್ಯ 1ನೇ ವಾರ್ಡ್‌ನ ಸದಸ್ಯ ಭಾಸ್ಕರ ಸನಿಲ್ ಮರಣದಿಂದಾಗಿ ತೆರವಾದ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಆರ್ಯಾಪು ಗ್ರಾ.ಪಂ 4ನೇ ವಾರ್ಡ್ ಸಾಮಾನ್ಯ ಸ್ಥಾನ ಕುಟ್ರುಪ್ಪಾಡಿ ಗ್ರಾ.ಪಂನ ಬಲ್ಯ 1ನೇ ವಾರ್ಡ್ ಹಿಂದುಳಿದ ವರ್ಗ `ಎ’ಗೆ ಮೀಸಲಿರಿಸಲಾಗಿದೆ.
ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಫೆ.8 ರಂದು ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಿದ್ದಾರೆ. ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನ ಫೆ.14 ಆಗಿರುತ್ತದೆ. ಫೆ.15 ರಂದು ನಾಮಪತ್ರಗಳನ್ನು ಪರಿಶೀಲನೆ ನಡದು ಫೆ.17ರಂದು ಅಭ್ಯರ್ಥಿಗಳು ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳುವ ಕೊನೆ ದಿನವಾಗಿರುತ್ತದೆ. ಎರಡೂ ಗ್ರಾ.ಪಂಗಳಲ್ಲೂ ಫೆ. 25ರಂದು ಮತದಾನ ನಡೆಯಲಿದ್ದು ಬೆ. 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ.
ಮತದಾನವು ಆಯಾ ಪಂಚಾಯತ್ ಕಚೇರಿಯಲ್ಲಿಯೇ ನಡೆಯಲಿದೆ. ಆವಶ್ಯವಿದ್ದರೆ ಫೆ.27ರಂದು ಮರು ಮತದಾನ ಹಾಗೂ ಫೆ.28ರಂದು ಮತ ಎಣಿಕೆ ನಡೆದು ಫಲಿತಾಂಶ ಘೋಷಣೆಯಾಗಲಿದೆ. ಅಧಿಸೂಚನೆ ಹೊರಡಿಸಿದ ಬಳಿಕ ಆಯಾ ಪಂಚಾಯತ್ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಅನ್ವಯವಾಗಲಿದೆ.
ಆರ್ಯಾಪು ಗ್ರಾ.ಪಂನ ಉಪ ಚುನಾವಣೆಯಲ್ಲಿ ಚುನಾವಣಾಧಿಕಾರಿಯಾಗಿ ಸಹಕಾರ ಸಂಘಗಳ ಸಹಾಯಕ ನಿಬಂಧಕಿ ತ್ರಿವೇಣಿ ಆರ್.ರಾವ್ ಹಾಗೂ ಆರ್ಯಾಪು ಗ್ರಾ.ಪಂ ಪಿಡಿಓ ನಾಗೇಶ್ ಉಪ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಕುಟ್ರುಪ್ಪಾಡಿ ಗ್ರಾ.ಪಂನಲ್ಲಿ ಚುನಾವಣಾಧಿಕಾರಿಯಾಗಿ ಕಡಬ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಸಲೀನ್ ಹಾಗೂ ಪಿಡಿಓ ಆನಂದ ಉಪ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.