ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚನೆ ಪ್ರಕರಣ: ಸಂತ್ರಸ್ತೆ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿದ ಕೆ.ಪಿ.ನಂಜುಂಡಿ

0

ಪುತ್ತೂರು:ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚನೆ ಪ್ರಕರಣದ ಆರೋಪಿ ಶ್ರೀಕೃಷ್ಣ ಜೆ.ರಾವ್‌ಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿರುವ ಬೆನ್ನಲ್ಲೇ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ಕೆ.ಪಿ.ನಂಜುಂಡಿ ಅವರು ಸೆ.7ರಂದು ಮಧ್ಯಾಹ್ನ ಸಂತ್ರಸ್ತೆಯ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿದರು.ಬಳಿಕ ಮನೆ ಮಂದಿಯನ್ನು ಕಾಳಿಕಾಂಬ ದೇವಸ್ಥಾನಕ್ಕೆ ಕರೆದೊಯ್ದರು.


ಕೆ.ಪಿ.ನಂಜುಂಡಿ ಅವರು ಪತ್ನಿ,ಮಕ್ಕಳೊಂದಿಗೆ ಕುಟುಂಬ ಸಮೇತರಾಗಿ ಸಂತ್ರಸ್ತೆಯ ಮನೆಗೆ ಬಂದಿದ್ದರು.ಸಂತ್ರಸ್ತೆಯೊಂದಿಗೆ ಮಾತನಾಡಿ, ಬಳಿಕ ಮಗುವನ್ನು ಕೈಯಲ್ಲಿ ಎತ್ತಿ ಮುದ್ದಾಡಿಸಿದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಕೆ.ಪಿ.ನಂಜುಂಡಿ,ವಂಚನೆ ಪ್ರಕರಣದ ಅರೋಪಿ ಶ್ರೀಕೃಷ್ಣ ಅವರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.ಇದರಿಂದಾಗಿ ಸಂತ್ರಸ್ತೆ ಕುಟುಂಬದವರು ಭಯ ಮತ್ತು ಆತಂಕಕ್ಕೆ ಒಳಗಾಗಿದ್ದರು.ಕೋರ್ಟ್ ಜಾಮೀನು ಕೊಟ್ಟ ಕೂಡಲೇ ಆರೋಪಿ ನಿರಪರಾಧಿ ಎಂದು ಸಂತ್ರಸ್ತೆ ಮನೆಯವರು ಅಂದುಕೊಂಡಿದ್ದಾರೆ.ಅದಕ್ಕೆ ನಾನು ಅವರಿಗೆ ಕರೆ ಮಾಡಿ ವಿಚಾರ ಸ್ಪಷ್ಟ ಪಡಿಸಿದ್ದೇನೆ.ಎಂತೆಂಥ ಕೇಸ್‌ಗಳಲ್ಲಿ ಜಾಮೀನು ಆಗಿದೆ.ಅದೇ ರೀತಿ ಈ ಪ್ರಕರಣದಲ್ಲೂ ಜಾಮೀನು ಆಗಿದೆ.ಹಾಗಾಗಿ ಇದರಿಂದ ಭಯಪಡುವ ಅವಶ್ಯಕತೆ ಇಲ್ಲ.ಇನ್ನೂ ವಿಚಾರಣೆ ಇದೆ.ಡಿ.ಎನ್.ಎ ಪರೀಕ್ಷೆ ವರದಿ ಬರಬೇಕಾಗಿದೆ ಎಂದು ಹೇಳಿ ಸಂತ್ರಸ್ತೆ ಮನೆಯವರಿಗೆ ಧೈರ್ಯ ತುಂಬಿದ್ದೇನೆ ಎಂದರು.ಸಂತ್ರಸ್ತೆಯ ತಾಯಿ ನಮಿತಾ ಅವರು ಮಾತನಾಡಿ ಶ್ರೀಕೃಷ್ಣನಿಗೆ ಜಾಮೀನು ಆಗಿದೆ.ಆತ ಜೈಲಿನಲ್ಲಿ ಇರಬೇಕೆಂದು ನಾವು ಹೇಳಿಲ್ಲ.ಹೊರಗಡೆ ಬಂದು ಮದುವೆಯಾಗಲಿ ಎಂದು ಹೇಳುವುದು.ಡಿಎನ್‌ಎ ಪರೀಕ್ಷೆ ವರದಿ ಬರಬೇಕಷ್ಟೆ.ಏನಾಗುತ್ತೋ ಎಂಬ ಭಯವಿದೆ.ಆದರೆ ನೂರಕ್ಕೆ ನೂರು ನಮ್ಮ ಕಡೆಯೇ ನ್ಯಾಯ ಸಿಗುವ ಭರವಸೆ ಇದೆ.ಸರ್ ಇವತ್ತು ನಮಗೆ ಬಂದು ಧೈರ್ಯ ತುಂಬಿದ್ದಾರೆ ಎಂದು ಹೇಳಿದರು.

ಪ್ರಕರಣ ಸುಖಾಂತ್ಯ ಕಾಣಬೇಕೆಂಬ ಆಸೆ
ಸಮುದಾಯ ಆಗಲೀ,ಯಾವುದೇ ಸಂಘಟನೆಯಾಗಲೀ ಮಧ್ಯ ಪ್ರವೇಶ ಮಾಡುವುದಕ್ಕೆ ಅರ್ಥವಿಲ್ಲ.ಯಾಕೆಂದರೆ ಪ್ರಕರಣ ಈಗ ಕೋರ್ಟ್‌ನಲ್ಲಿದೆ.ಡಿಎನ್‌ಎ ವರದಿಯ ಮೂಲಕ ಮಗುವಿನ ತಂದೆ ಯಾರೆಂದು ಗೊತ್ತಾಗಬೇಕು.ಹೋರಾಟ ಕೊನೆಯಾಗಿ ಸುಖಾಂತ್ಯ ಕಾಣಬೇಕು.ಸಂತ್ರಸ್ತೆಗೆ ಮತ್ತು ಮಗುವಿಗೆ ನ್ಯಾಯ ಸಿಗಬೇಕು ಎಂಬುದು ನಮ್ಮ ಆಸೆ ಎಂದು ಕೆ.ಪಿ.ನಂಜುಂಡಿ ಹೇಳಿದರು.

LEAVE A REPLY

Please enter your comment!
Please enter your name here