‘ಅಣಬೆ’ ಎಂದು ಹೇಳಿದ್ದು ಯಾರಿಗೆ?-ಶಾಸಕರನ್ನು ಪ್ರಶ್ನಿಸಿದ ಪುತ್ತಿಲ ಅಭಿಮಾನಿಗಳು
ಕಾರ್ಯಕರ್ತರು, ಪುತ್ತಿಲ ಅಭಿಮಾನಿಗಳ ಮಧ್ಯೆ ಚಕಮಕಿ- ಸ್ಥಳದಿಂದ ತೆರಳಿದ ಶಾಸಕರು
ಪುತ್ತೂರು:ಕೇಂದ್ರ ಗೃಹ, ಸಹಕಾರ ಸಚಿವ ಅಮಿತ್ ಶಾ ಅವರು ಪುತ್ತೂರುಗೆ ಆಗಮಿಸುತ್ತಿರುವ ಸಂದರ್ಭ ಅವರ ಸ್ವಾಗತಕ್ಕೆ ಕೆಲವು ಮುಖಂಡರಿಂದ ಪ್ರತ್ಯೇಕ ಅಲಂಕಾರ ನಡೆಯುತ್ತಿರುವ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುವ ಸಂದರ್ಭ ಶಾಸಕರು ಹೇಳಿದ್ದ, ‘ಮಳೆಗಾಲ ಬಂದಾಗ ಅಣಬೆ ಹುಟ್ಟಿಕೊಳ್ಳುತ್ತದೆ…’ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಅರುಣ್ ಕುಮಾರ್ ಪುತ್ತಿಲ ಅಭಿಮಾನಿಗಳು ಈ ಕುರಿತು ಸ್ಪಷ್ಟನೆ ನೀಡುವಂತೆ ಶಾಸಕ ಸಂಜೀವ ಮಠಂದೂರು ಅವರನ್ನು ಒತ್ತಾಯಿಸಿದ, ಶಾಸಕರು ಯಾವುದೇ ಉತ್ತರ ನೀಡದೆ ಸ್ಥಳದಿಂದ ತೆರಳಿದ ಸಂದರ್ಭ ಪಕ್ಷದ ಕಾರ್ಯಕರ್ತರು ಮತ್ತು ಪುತ್ತಿಲ ಅಭಿಮಾನಿಗಳ ಮಧ್ಯೆ ಮಾತಿನ ಚಕಮಕಿ ನಡೆದ ಘಟನೆ, ಅಮಿತ್ ಶಾ ಭೇಟಿ ಕಾರ್ಯಕ್ರಮದ ಪ್ರಚಾರ ಜಾಥಾದ ಸಮಾರೋಪದಲ್ಲಿ ನಡೆದಿದೆ.
ಫೆ.11ರಂದು ಅಮಿತ್ ಶಾ ಅವರು ಪುತ್ತೂರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಸಂಜೀವ ಮಠಂದೂರು ಅವರ ನೇತೃತ್ವದಲ್ಲಿ ಪುತ್ತೂರು ಪೇಟೆಯಲ್ಲಿ ಬಿಜೆಪಿಯವರು ಪ್ರಚಾರ ಜಾಥಾ ನಡೆಸಿದರು. ದರ್ಬೆ ವೃತ್ತದ ಬಳಿಯಿಂದ ಹೊರಟ ಜಾಥಾ ಬೊಳುವಾರು ಆಂಜನೇಯ ಮಂತ್ರಾಲಯದ ಬಳಿ ಸಮಾರೋಪಗೊಂಡಿತ್ತು. ಜಾಥಾದಲ್ಲಿ ಪುತ್ತಿಲ ಅಭಿಮಾನಿಗಳು ಹಾಗೂ ನೂರಾರು ಬಿಜೆಪಿ ಕಾರ್ಯಕರ್ತರು, ಮುಖಂಡರು ದರ್ಬೆಯಿಂದ ಬೊಳುವಾರು ತನಕ ಜೊತೆಯಾಗಿಯೇ ಸಾಗಿದರು.ಬೊಳುವಾರಿನಲ್ಲಿ ನಡೆದ ಸಮಾರೋಪದಲ್ಲಿ ಶಾಸಕ ಸಂಜೀವ ಮಠಂದೂರು ಅವರು ಜಾಥಾದಲ್ಲಿ ಭಾಗವಹಿಸಿದವರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದಾಗ ಏಕಾಏಕಿ ಮಧ್ಯಪ್ರವೇಶಿಸಿ ಮಾತನಾಡಿದ ಪುತ್ತಿಲ ಅಭಿಮಾನಿಗಳು ‘ಅಣಬೆ’ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡುವಂತೆ ಶಾಸಕರಲ್ಲಿ ಆಗ್ರಹಿಸಿದರು. ಹೇಳಿಕೆ ನೀಡಿ 24 ಗಂಟೆ ಕಳೆದಿದೆ. ಯಾರಿಗೆ ಈ ರೀತಿ ಹೇಳಿದ್ದು ಎಂದು ಸ್ಪಷ್ಟನೆ ನೀಡಿ ಎಂದು ಪುತ್ತಿಲ ಅಭಿಮಾನಿಗಳು ಆಗ್ರಹಿಸುತ್ತಿದ್ದ ನಡುವೆಯೇ ಶಾಸಕರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ತೋರದೆ ಸ್ಥಳದಿಂದ ತೆರಳಿದರು. ಇದೇ ವೇಳೆ ಪುತ್ತಿಲ ಅಭಿಮಾನಿಗಳು ಹಾಗೂ ಬಿಜೆಪಿಯ ಕೆಲವು ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಪಕ್ಷದ ಪ್ರಮುಖರಾದ ಜೀವಂಧರ್ ಜೈನ್, ಚನಿಲ ತಿಮ್ಮಪ್ಪ ಶೆಟ್ಟಿ, ಅರುಣ್ ವಿಟ್ಲ, ಗೋಪಾಲಕೃಷ್ಣ ಹೇರಳೆ ಮೊದಲಾದವರು ಎರಡೂ ಕಡೆಯವರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರು. ಆದರೆ ಪುತ್ತಿಲ ಅಭಿಮಾನಿಗಳು ತಮ್ಮ ಆಕ್ರೋಶ ಮುಂದುವರಿಸಿದರು. ಕೆಲ ಹೊತ್ತಿನ ಬಳಿಕ ಅರುಣ್ ಕುಮಾರ್ ಪುತ್ತಿಲ ಅವರು ಆಗಮಿಸಿ ಎರಡೂ ಕಡೆಯವರನ್ನು ಸಮಾಧಾನ ಪಡಿಸುವ ಪ್ರಯತ್ನ ನಡೆಸಿದರು.
‘ಅಣಬೆ’ ಎಂದು ಹೇಳಿದ್ದು ಯಾರಿಗೆ?, ಅರುಣಣ್ಣ ಏನು ತಪ್ಪು ಮಾಡಿದ್ದಾರೆ?:
‘ಅಣಬೆ’ ಎಂಬ ಹೇಳಿಕೆ ನೀಡಲು ಅರುಣ್ ಕುಮಾರ್ ಪುತ್ತಿಲ ಏನು ತಪ್ಪು ಮಾಡಿದ್ದಾರೆ.ಕಳೆದ ಚುನಾವಣೆಯ ಸಂದರ್ಭದಲ್ಲಿ ಸಂಜೀವ ಮಠಂದೂರು ಅವರು ಅರುಣ್ ಕುಮಾರ್ ಪುತ್ತಿಲರವರ ಮನೆಗೆ ಹೋಗಿಲ್ಲವೇ?.ಶಾಸಕರು ‘ಅಣಬೆ’ ಎಂದು ಯಾರಿಗೆ ಹೇಳಿದ್ದು ಎಂದು ಸ್ಪಷ್ಟನೆ ನೀಡಬೇಕೆಂದು ನಾವು ಕಾರ್ಯಕರ್ತರಾಗಿ ಕೇಳುತ್ತಿದ್ದೇವೆ. ಆದರೆ ನಮ್ಮ ಪ್ರಶ್ನೆಗೆ ಉತ್ತರಿಸದೆ ಶಾಸಕರು ಎಲ್ಲಿಗೆ ಹೋದದ್ದು? ಆ ರೀತಿ ಹೇಳಿಕೆ ನೀಡಿದ್ದು ಯಾಕೆ, ಅವರು ಮಾಡಿದ ತಪ್ಪನ್ನು ಒಪ್ಪಿಕೊಳ್ಳಲಿ ಎಂದು ಮನೀಷ್ ಕುಲಾಲ್, ರಜನೀಶ್ ಸೇರಿದಂತೆ ಪುತ್ತಿಲ ಅವರ ಅಭಿಮಾನಿಗಳು ಅಲ್ಲಿದ್ದ ಮುಖಂಡರನ್ನುದ್ದೇಶಿಸಿ ಹೇಳಿದರು. ಪಕ್ಷದ ಪ್ರಮುಖರು ಅವರನ್ನು ಸಮಾಧಾನಪಡಿಸುತ್ತಿದ್ದರೂ ಶಾಸಕರ ವಿರುದ್ದ ಪುತ್ತಿಲ ಅಭಿಮಾನಿಗಳ ಆಕ್ರೋಶ ಮುಂದುವರಿದು ಬಳಿಕ ತಣ್ಣಗಾಯಿತು.
ಮಳೆಗಾಲದಲ್ಲಿ ಅಣಬೆಗಳು ಹುಟ್ಟಿಕೊಳ್ಳುವ ಹಾಗೆ…..
ಅಮಿತ್ ಶಾ ಅವರು ಪುತ್ತೂರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಸ್ವಾಗತ ಕೋರಿ ಕೆಲವರಿಂದ ವೈಯಕ್ತಿಕವಾಗಿ ಪ್ರತ್ಯೇಕ ಅಲಂಕಾರ ನಡೆಯುತ್ತಿರುವ ಕುರಿತು ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದ ಶಾಸಕ ಸಂಜೀವ ಮಠಂದೂರು, ‘ಚುನಾವಣೆ ಬಂದಾಗ ಇದೆಲ್ಲ ಇರುತ್ತದೆ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಎಲ್ಲ ಅವಕಾಶ ಇರುತ್ತದೆ. ಹೊಸ ಹೊಸ ವ್ಯಕ್ತಿಗಳು ಬರುತ್ತಾರೆ ಹೋಗುತ್ತಾರೆ. ಮಳೆಗಾಲದಲ್ಲಿ ಅಣಬೆಗಳು ಹುಟ್ಟಿಕೊಳ್ಳುವ ಹಾಗೆ. ಮಳೆ ಹೋದಾಗ ಅಣಬೆ ಕೂಡಾ ಇರುವುದಿಲ್ಲ..ಯಾರೇ ಪ್ರತ್ಯೇಕ, ಅಲಂಕಾರ, ಸ್ವಾಗತ ಮಾಡಲಿ ಬಿಜೆಪಿ ಅದನ್ನು ಸ್ವಾಗತಿಸುತ್ತದೆ’ ಎಂದು ಹೇಳಿದ್ದರು. ಅಮಿತ್ ಶಾ ಅವರಿಗೆ ಸ್ವಾಗತ ಕೋರಿ ಅರುಣ್ ಪುತ್ತಿಲ ಅವರ ಹೆಸರಲ್ಲಿ ಹಾಕಿರುವ ಬ್ಯಾನರ್ಗಳಿಗೆ ಸಂಬಂಧಿಸಿ ಶಾಸಕರು ಈ ಮಾತನ್ನು ಹೇಳಿದ್ದಾರೆ ಎಂದು ಉಲ್ಲೇಖಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದವು.ನಂತರದ ಬೆಳವಣಿಗೆಯಲ್ಲಿ ಫೆ.9ರಂದು ಈ ಘಟನೆ ನಡೆದಿದೆ.