ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಡವರಿಗೆ ನೆಮ್ಮದಿಯ ಜೀವನ ಸಿಗಲಿದೆ: ಶಕುಂತಳಾ ಶೆಟ್ಟಿ
- ಫೆ.14-ಬಿಎಲ್‌ಎ, ಬೂತ್ ಅಧ್ಯಕ್ಷರ ಸಮಾವೇಶ-ಎಂ.ಬಿ ವಿಶ್ವನಾಥ ರೈ
- ಭ್ರಷ್ಟ ಬಿಜೆಪಿ ಸರಕಾರದಿಂದ ಜನ ರೋಸಿ ಹೋಗಿದ್ದಾರೆ-ಅಶೋಕ್‌ಕುಮಾರ್ ರೈ
- ಯಾರಿಗೇ ಅವಕಾಶ ಸಿಕ್ಕಿದರೂ ಅಭ್ಯರ್ಥಿಯ ಗೆಲುವಿಗಾಗಿ ಕೆಲಸ-ಸತೀಶ್‌ಕುಮಾರ್ ಕೆಡೆಂಜಿ
ಪುತ್ತೂರು; ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾತ್ರ ಎಲ್ಲರಿಗೂ ನೆಮ್ಮದಿ ಅದರಲ್ಲೂ ವಿಶೇಷವಾಗಿ ಬಡವರಿಗೆ, ಮಧ್ಯಮವರ್ಗದ ಕುಟುಂಬಸ್ಥರಿಗೆ ಸಂತೋಷದಾಯಕ ದಿನಗಳು ಸಿಗಲಿದೆ ಎಂದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.
ಅವರು ಕುಂಬ್ರ ಅಕ್ಷಯ ಸಂಕೀರ್ಣ ಸಭಾಭವನದಲ್ಲಿ ನಡೆದ ಒಳಮೊಗ್ರು ಬೂತ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕಾಂಗ್ರೆಸ್ ಮುಂದಿನ ಬಾರಿ ಅಧಿಕಾರ ಪಡೆಯಬೇಕಾದರೆ ಪ್ರತಿಯೊಬ್ಬ ಕಾರ್ಯಕರ್ತನೂ ಶ್ರಮಪಡಬೇಕು. ಈಗಾಗಲೇ ಪ್ರಣಾಳಿಕೆಯ ಕೆಲವೊಂದು ವಿಚಾರಗಳನ್ನು ಜನರಿಗೆ ತಿಳಿಸಲಾಗಿದೆ. ಕುಟುಂಬದ ಗೃಹಿಣಿಗೆ ಮಾಸಿಕ 2000 ರೂ ಮತ್ತು 200 ಯುನಿಟ್ ವಿದ್ಯುತ್ ಉಚಿತವಾಗಿ ಕಾಂಗ್ರೆಸ್ ಸರಕಾರ ನೀಡಲಿದೆ. ಈ ಎರಡು ಭರವಸೆ ಈಡೇರಿದರೆ ಜನ ಬದುಕಬಹುದು ಎಂಬ ಧೈರ್ಯ ದಲ್ಲಿದ್ದಾರೆ. ಕಾಂಗ್ರೆಸ್ ಭರವಸೆ ಕೊಟ್ಟು ಎಂದೂ ಮೋಸ ಮಾಡಿಲ್ಲ. ಸರಕಾರದ ಮಾತನ್ನು ಪ್ರತೀ ಮನೆ ಮನೆಯಲ್ಲೂ ಪ್ರಚಾರ ಮಾಡಬೇಕಾಗಿದೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಮಾತನಾಡಿ ಫೆ. 14ರಂದು ಪಕ್ಷದ ಬಿಎಲ್‌ಎ ಮತ್ತು ಬೂತ್ ಅಧ್ಯಕ್ಷರ ಸಮಾವೇಶ ನಡೆಯಲಿದ್ದು ಪ್ರತೀ ಬೂತ್‌ನಿಂದ ಕಾರ್ಯಕರ್ತರು ಆಗಮಿಸುವಂತೆ ಮನವಿ ಮಾಡಿದರು. ಮುಂಬರುವ ಚುನಾವಣೆಯಲ್ಲಿ ಹೇಗೆ ಸಿದ್ದತೆ ಮಾಡಬೇಕು ಎಂಬುದರ ಬಗ್ಗೆ ಕಾರ್ಯಕರ್ತರು ಮತ್ತು ಬೂತ್ ಅಧ್ಯಕ್ಷರು ಹಾಗೂ ಬಿಎಲ್‌ಎ ಗಳಿಗೆ ತಿಳಿಸಲಾಗುವುದು. ಚುನಾವಣೆಗೆ ಸಿದ್ದತೆಗೊಳ್ಳುವ ಬಗ್ಗೆ ರೂಪುರೇಶೆಗಳನ್ನು ಸಿದ್ದಪಡಿಸಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಮಾತನಾಡಿ ಪುತ್ತೂರು ಸೇರಿದಂತೆ ರಾಜ್ಯಾದ್ಯಂತ ಕಾಂಗ್ರೆಸ್ ಅಲೆ ಇದೆ. ಭ್ರಷ್ಟ ಬಿಜೆಪಿ ಸರಕಾರದಿಂದ ಜನ ರೋಸಿ ಹೋಗಿದ್ದಾರೆ. ಬೆಲೆ ಏರಿಕೆಯಿಂದ ಜನ ಕಂಗಾಲಾಗಿದ್ದಾರೆ. ಬಿಜೆಪಿ ಆಡಳಿತದಲ್ಲಿ ಜನತೆಗೆ ನೆಮ್ಮದಿಯೇ ಇಲ್ಲದಂತಾಗಿದ್ದು ಬದುಕುವುದೇ ಕಷ್ಟ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. ಇದು ಕಾಂಗ್ರೆಸ್ ಕಾರ್ಯಕರ್ತರಿಗೆ ವರದಾನವಾಗಿದ್ದು ಬಡವರ ಪರ ಇರುವ ಕಾಂಗ್ರೆಸ್ ಸರಕಾರ ಬರಬೇಕಿದೆ ಅದಕ್ಕೆ ಬೇಕಾಗಿ ನಾವೆಲ್ಲರೂ ಸನ್ನದ್ದರಾಗಬೇಕು ಎಂದು ಹೇಳಿದರು. ಕೆಪಿಸಿಸಿ ಸದಸ್ಯರಾದ ಸತೀಶ್ ಕುಮಾರ್ ಕೆಡೆಂಜಿ ಮಾತನಾಡಿ ಎಂ ಬಿ ವಿಶ್ವನಾಥ ರೈ ನೇತೃತ್ವದಲ್ಲಿ ಪುತ್ತೂರಿನಲ್ಲಿ ಪಕ್ಷ ಬಲಿಷ್ಟವಾಗಿ ಬೆಳೆಯುತ್ತಿದೆ. ಟಿಕೆಟ್ ಆಕಾಂಕ್ಷಿಗಳು 14 ಮಂದಿ ಇದ್ದಾರೆ. ಯಾರಿಗೆ ಅವಕಾಶ ಸಿಕ್ಕಿದರೂ ನಾವು ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಕೆಲಸ ಮಾಡಬೇಕು. ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಿಷ್ಟಗೊಳಿಸಬೇಕು ಎಂದು ಹೇಳಿದರು. ಬ್ಲಾಕ್ ಉಪಾಧ್ಯಕ್ಷರಾದ ಶಶಿಕುಮಾರ್ ನೂಜಿಬೈಲು ವಂದಿಸಿದರು