ನೆಲ್ಯಾಡಿ: ಕಾರು ಡಿಕ್ಕಿಯಾಗಿ ಪಾದಚಾರಿಯೋರ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬಜತ್ತೂರು ಗ್ರಾಮದ ಬೆದ್ರೋಡಿ ತೂಗುಸೇತುವೆ ಬಳಿ ಫೆ.14ರಂದು ಸಂಜೆ ನಡೆದಿದೆ.
ಬಜತ್ತೂರು ಗ್ರಾಮದ ವಿದ್ಯಾನಗರ ನಿವಾಸಿ ಮಹಮ್ಮದ್ ಆಲಿ ಗಾಯಗೊಂಡವರಾಗಿದ್ದು ಇವರನ್ನು ಮಂಗಳೂರಿನ ಯುನಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಮ್ಮದ್ ಅಲಿ ಅವರು ಬೆದ್ರೋಡಿ ತೂಗುಸೇತುವೆ ಬಳಿಯಲ್ಲಿ ಹೆದ್ದಾರಿಯ ಒಂದು ಬದಿಯಿಂದ ಇನ್ನೊಂದು ಬದಿಗೆ ದಾಟುತ್ತಿದ್ದ ವೇಳೆ ನೆಲ್ಯಾಡಿಯಿಂದ ಉಪ್ಪಿನಂಗಡಿ ಕಡೆಗೆ ಅನ್ಸಿಫ್ ಕೆ.ಕೆ.ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಕಾರು (ಕೆಎ10 ಎಂಜೆ 0189) ಡಿಕ್ಕಿಯಾಗಿದೆ.
ಕಾರು ಚಾಲಕ ಅನ್ಸಿಫ್ ಕೆ.ಕೆ.ಅವರು, ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಹೆದ್ದಾರಿಯ ಎಡ ಬದಿಗೆ ಕಾರು ಚಲಾಯಿಸಿದ ಪರಿಣಾಮ ಕಾರು ಮಹಮ್ಮದ್ ಅಲಿ ಅವರಿಗೆ ಡಿಕ್ಕಿಯಾಗಿದೆ ಎಂದು ವರದಿಯಾಗಿದೆ. ಡಿಕ್ಕಿಯಿಂದಾಗಿ ಮಹಮ್ಮದ್ ಅಲಿ ಅವರ ಎಡ ಕೈ ರಟ್ಟೆ, ಕೋಲು ಕೈಗೆ, ಸೊಂಟಕ್ಕೆ, ತೊಡೆಸಂದಿಗೆ ಗಾಯವಾಗಿದ್ದು ಅವರಿಗೆ ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಯುನಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಗಾಯಾಳು ಮಹಮ್ಮದ್ ಅಲಿ ಅವರ ಪುತ್ರ ಮಹಮ್ಮದ್ ಇರ್ಷಾದ್ ಎಂಬವರು ನೀಡಿದ ದೂರಿನಂತೆ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಕಲಂ: 279 337 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.