ಸಂಟ್ಯಾರ್:ಕಾರು ಅಪಘಾತ ಪ್ರಕರಣ – ಮೃತ ಚಾಲಕನ ವಿರುದ್ಧ ಕೇಸು

0

ಪುತ್ತೂರು: ಫೋರ್ಡ್ ಕಾರೊಂದು ವಿದ್ಯುತ್ ಕಂಬಗಳಿಗೆ ಡಿಕ್ಕಿಯಾಗಿ ತೋಟಕ್ಕೆ ಬಿದ್ದ ಅವಘಡದಲ್ಲಿ ಕಾರಲ್ಲಿದ್ದ ಓರ್ವರು ಮೃತಪಟ್ಟ ಘಟನೆಗೆ ಸಂಬಂಧಿಸಿ ಮೃತನ ವಿರುದ್ಧವೇ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿವೃತ್ತ ಮುಖ್ಯಶಿಕ್ಷಕ ನಿಡ್ಪಳ್ಳಿ ಗ್ರಾಮದ ಮುಂಡೂರು ದಿ.ಶ್ರೀಧರ್ ಭಟ್ ಅವರ ಮಗ, ನಿಡ್ಪಳ್ಳಿ ಗ್ರಾಮ ಪಂಚಾಯತ್ ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದ ಮುರಳೀಕೃಷ್ಣ ಭಟ್(38ವ.)ಅವರು ಅಪಘಾತದಲ್ಲಿ ಮೃತಪಟ್ಟಿದ್ದರು. ಘಟನೆಗೆ ಸಂಬಂಧಿಸಿದಂತೆ ಮೃತ ಮುರಳೀಕೃಷ್ಣ ಅವರ ವಿರುದ್ಧವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಟ್ಟಂಪಾಡಿ ಕಕ್ಕೂರು ಮನೆ ಶಶಿಕುಮಾರ್(28ವ.)ಅವರು ನೀಡಿದ್ದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾನು ಪಿಡಬ್ಲ್ಯೂಡಿ ಗುತ್ತಿಗೆದಾರನಾಗಿ ಕೆಲಸ ಮಾಡಿಕೊಂಡಿದ್ದು ಫೆ.14ರಂದು ರಾತ್ರಿ 8.25ರ ಸುಮಾರಿಗೆ ನಾನು ಮತ್ತು ಬೆಟ್ಟಂಪಾಡಿಯ ದಿಲೀಪ್‌ರವರು ಪುತ್ತೂರು ದರ್ಬೆಯಿಂದ ಮುರಳೀಕೃಷ್ಣ ಭಟ್ ಅವರು ಚಲಾಯಿಸಿಕೊಂಡು ಬಂದಿದ್ದ ಕಾರಲ್ಲಿ(ಕೆಎ 21-ಪಿ.5049)ದೂಮಡ್ಕದ ನವನೀತ ಎಂಬವರನ್ನು ಕುಳ್ಳಿರಿಸಿಕೊಂಡು ಬರುತ್ತಿದ್ದಾಗ ರಾತ್ರಿ 8.30 ಗಂಟೆಗೆ ಆರ್ಯಾಪು ಗ್ರಾಮದ ಬಳಕ್ಕ ಎಂಬಲ್ಲಿ ತಲುಪಿದಾಗ ಮುರಳೀಕೃಷ್ಣ ಅವರು ಕಾರನ್ನು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಘಟನೆಯಿಂದ ನನ್ನ ಹಲ್ಲು ಮುರಿದಿದ್ದು, ತುಟಿ, ಬಲಕಣ್ಣಿನ ಮೇಲ್ಭಾಗ, ಬಲಕೋಲು ಕಾಲಿಗೆ ರಕ್ತಗಾಯವಾಗಿದೆ.ನವನೀತ್‌ರವರಿಗೆ ಕುತ್ತಿಗೆ ಬಳಿ ಗುದ್ದಿದ ರೀತಿಯ ನೋವುಂಟಾಗಿದೆ. ದಿಲೀಪ್‌ರವರ ಮುಖ, ಬಲಕೋಲು ಕಾಲಿನಲ್ಲಿ ರಕ್ತಗಾಯವಾಗಿದೆ. ಕಾರು ಚಾಲಕ ಮುರಳೀಕೃಷ್ಣರವರಿಗೆ ತಲೆ ಮತ್ತು ಇತರ ಕಡೆಗಳಲ್ಲಿ ತೀವ್ರ ಗಾಯವಾಗಿ ಮೃತಪಟ್ಟಿದ್ದರು. ಘಟನೆಗೆ ಸಂಬಂಧಿಸಿ ಮೃತ ಮುರಳೀಕೃಷ್ಣ ಅವರ ವಿರುದ್ಧ ಕಲಂ 279,337, 338, 304(ಎ)ಐಪಿಸಿಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here