ಉಪ್ಪಿನಂಗಡಿ: ದಕ್ಷಿಣ ಕಾಶಿಯೆಂದೆನಿಸಿಕೊಂಡಿರುವ ಶ್ರೀ ಸಹಸ್ರಲಿಂಗೇಶ್ವರ – ಮಹಾಕಾಳಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಒಂದನೇ ಮಖೆಕೂಟದಂಗವಾಗಿ ನೇತ್ರಾವತಿ ನದಿ ಕಿನಾರೆಯಲ್ಲಿರುವ ಉದ್ಭವ ಲಿಂಗದ ಬಳಿ ಸ್ವಯಂ ಲಿಂಗಾಭಿಷೇಕ ಸೇವೆ ನಡೆಯಿತು.
ಶನಿವಾರ ಬೆಳಗ್ಗೆಯಿಂದಲೇ ಊರ-ಪರವೂರಿನಿಂದ ನೂರಾರು ಸಂಖ್ಯೆಯಲ್ಲಿ ಬಂದ ಭಕ್ತಾದಿಗಳು ಉದ್ಭವ ಲಿಂಗಕ್ಕೆ ತಮ್ಮ ಕೈಯಾರೆ ಅಭಿಷೇಕ ನೆರವೇರಿಸಿದರು. ಅಲ್ಲಿಯೇ ಶನಿವಾರ ಸೂರ್ಯೋದಯದಿಂದ ಅಖಂಡ ಭಜನಾ ಸೇವೆ ಆರಂಭಗೊಂಡಿದ್ದು, ಭಾನುವಾರ ಸೂರ್ಯೋದಯದ ತನಕ ನಿರಂತರ ಭಜನಾ ಸೇವೆ ನಡೆಯಲಿದೆ.
ಸಂಜೆ 7ರಿಂದ ಉದ್ಭವಲಿಂಗದ ಬಳಿ ಅರ್ಘ್ಯ, ಶಿವಪೂಜೆ, ಸೇವೆಗಳು ನಡೆಯಲಿವೆ. ರಾತ್ರಿ 8ರಿಂದ 9ರವೆಗೆ ಉದ್ಭವ ಲಿಂಗದ ಬಳಿ ‘ರುದ್ರಪಾರಾಯಣ’ ನಡೆಯಲಿದೆ. ರಾತ್ರಿ 8 ಕ್ಕೆ ದೇವಾಲಯದಲ್ಲಿ ಬಲಿ ಹೊರಟು ಉತ್ಸವ, ಮಹಾಪೂಜೆ ನಡೆಯಲಿದೆ. ಫೆ.19ರಂದು ಪ್ರಾತಃಕಾಲದಲ್ಲಿ ತೀರ್ಥಸ್ನಾನ ನಡೆಯಲಿದ್ದು, ಬೆಳಗ್ಗೆ 6:30ರಿಂದ ಬಲಿ ಹೊರಟು ರಥೋತ್ಸವ, ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆಯಾಗಿ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.
ಈ ಬಾರಿಯ ವಿಶೇಷವಾಗಿ ಎಸ್‌ಪಿವೈಎಸ್‌ಎಸ್ ಕರ್ನಾಟಕ ಇದರ ಯೋಗ ಸಮಿತಿಯ ವತಿಯಿಂದ ಫೆ.18ರ ಸಂಜೆ 6ರಿಂದ ಫೆ.19ರ ಬೆಳಗ್ಗೆ 7ರವರೆಗೆ ಶಿವಾಷ್ಟೋತ್ತರಶತನಾಮಾನಿ ಪಠಣ, ಪುಷ್ಪಾರ್ಚನೆ, ಶಿವರಾತ್ರಿ ಜಾಗರಣೆ, ಭಜನೆ, ಶಿವ ಪಂಚಾಕ್ಷರಿ ಜಪ, ಬಿಲ್ವಾರ್ಚನೆ, ಸಾಮೂಹಿಕ ಯೋಗ- ‘ಶಿವ ನಮಸ್ಕಾರ’ ಕಾರ್ಯಕ್ರಮಗಳು ನಡೆಯಲಿವೆ. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಫೆ.18ರ ರಾತ್ರಿ 7:30ರಿಂದ ಯಕ್ಷಶ್ರೀ ಹವ್ಯಾಸಿ ಬಳಗ ಪುತ್ತೂರು ಇವರಿಂದ ಯಕ್ಷಗಾನ ತಾಳಮದ್ದಳೆ, ರಾತ್ರಿ 9ರಿಂದ ಆಕರ್ಷಕ ಸುಡುಮದ್ದು ಪ್ರದರ್ಶನ, 10ರಿಂದ ಯಕ್ಷನಂದನ ಕಲಾ ಸಂಘ ಗೋಕುಲನಗರ ಇವರಿಂದ ‘ತ್ರಿಪುರ ಮಥನ’ ಯಕ್ಷಗಾನ ಬಯಲಾಟ ನಡೆಯಲಿದೆ.