ಬೆಟ್ಟಂಪಾಡಿ: ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಸುಮಾರು 1.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸುಸಜ್ಜಿತ ನೂತನ ಸಭಾಭವನ, ಅನ್ನಛತ್ರದ ಲೋಕಾರ್ಪಣಾ ಸಮಾರಂಭ ಫೆ. 23 ದೇವಾಲಯದ ಪ್ರತಿಷ್ಠಾ ದಿನದಂದು ನಡೆಯಿತು.
ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ದ್ವಾದಶ ನಾರಿಕೇಳ ಗಣಪತಿ ಹವನ, ಏಕಾದಶ ರುದ್ರಾಭಿಷೇಕ ಮತ್ತು ಸಾಮೂಹಿಕ ಆಶ್ಲೇಷ ಬಲಿ ಸೇವೆಯು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು.
ಉದ್ಘಾಟನಾ ಸಮಾರಂಭ
ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ವಿನಯ್ ಹೆಗ್ಡೆಯವರು ನೂತನ ಸಭಾಭವನವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಶಾಸಕ ಸಂಜೀವ ಮಠಂದೂರು ಹಿಂಗಾರ ಅರಳಿಸಿ ಅನ್ನಛತ್ರವನ್ನು ಉದ್ಘಾಟಿಸಲಿದರು. ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ ಉದ್ಯಮಿ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಿದ್ದರು. ಮುಂಬೈ ದೀಪಕ್ ಹಾಸ್ಪಿಟಲ್ ನ ಡಾ. ಭಾಸ್ಕರ ಶೆಟ್ಟಿ, ಪದ್ಮಶ್ರೀ ಅಮೈ ಮಹಾಲಿಂಗ ನಾಯ್ಕ್, ಎಸ್.ಕೆ.ಆರ್.ಡಿ.ಪಿ. ಬಿಸಿ ಟ್ರಸ್ಟ್ ಮುಖ್ಯಕಾರ್ಯನಿರ್ವಹಕಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್., ಪ್ರಗತಿಪರ ಕೃಷಿಕ ಮಿತ್ತೂರು ಪುರುಷೋತ್ತಮ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಅನ್ನಸಂತರ್ಪಣೆ
ಮಧ್ಯಾಹ್ನ ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ಜರಗಿ ನೂತನ ಅನ್ನಛತ್ರದಲ್ಲಿ ಸಾವಿರಕ್ಕೂ ಮಿಕ್ಕಿ ಭಕ್ತಾಭಿಮಾನಿಗಳು ಅನ್ನಪ್ರಸಾದ ಸ್ವೀಕರಿಸಿದರು.
ಮೊದಲ ಕಾರ್ಯಕ್ರಮ
ಸಭಾಭವನದ ಮೊದಲ ಕಾರ್ಯಕ್ರಮವಾಗಿ ವಿಠಲ ನಾಯಕ್ ಕಲ್ಲಡ್ಕ ಬಳಗದಿಂದ ‘ಗೀತಾ ಸಾಹಿತ್ಯ ಸಂಭ್ರಮ’ ಕಾರ್ಯಕ್ರಮ ನಡೆಯಿತು.
‘ಬಿಲ್ವಶ್ರೀ’ ಸಭಾಂಗಣ, ‘ಅನ್ನಬ್ರಹ್ಮ’ ಅನ್ನಛತ್ರ
ನೂತನ ಸಭಾಭವನಕ್ಕೆ ‘ಬಿಲ್ವಶ್ರೀ ಸಭಾಂಗಣ’ ಎಂದೂ ನೂತನ ಅನ್ನಛತ್ರಕ್ಕೆ ‘ಅನ್ನಬ್ರಹ್ಮ’ ಅನ್ನಛತ್ರ ಎಂದು ಹೆಸರಿಡಲಾಗಿದ್ದು, ಹೆಸರನ್ನು ಅಭಿವೃದ್ದಿ ಸಮಿತಿ ಗೌರವಾಧ್ಯಕ್ಷ ಅಶೋಕ್ ಕುಮಾರ್ ರೈ ಘೋಷಿಸಿದರು.