ಪುತ್ತೂರು: ಪ್ರತಿ ಪಂಚಮಿಯಂದು ಕ್ಷೀರಾಭಿಷೇಕ, ತಂಬಿಲ ಸೇವೆಯನ್ನು ಸ್ವೀಕರಿಸಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಿರುವ ಪುತ್ತೂರು ನೆಲ್ಲಿಕಟ್ಟೆ ಖಾಸಗಿ ಬಸ್‌ನಿಲ್ದಾಣದ ಬಳಿಯಿರುವ ಶ್ರೀ ನಾಗ ದೇವರ ಸನ್ನಿಧಿಯಲ್ಲಿ ಫೆ. 24ರಂದು 20ನೇ ವರ್ಷದ ವಾರ್ಷಿಕ ಮಹಾಪೂಜೆ, ಆಶ್ಲೇಷ ಬಲಿ, ನಾಗ ತಂಬಿಲ ಮತ್ತು ಅನ್ನಸಂತರ್ಪಣೆಯು ನಡೆಯಿತು.
ಬ್ರಹ್ಮಶ್ರೀ ವೇ ಮೂ ಕೇಶವ ಜೋಗಿತ್ತಾಯ ಅವರ ಆಶೀರ್ವಾದೊಂದಿಗೆ ವೈದಿಕ ಕಾರ್ಯಕ್ರಮ ನೆರವೇರಿತು. ಬೆಳಿಗ್ಗೆ ಕಲಶಾಭಿಷೇಕ, ಪಂಚಾಮೃತಾಭಿಷೇಕ, ಆಶ್ಲೇಷಬಲಿ, ಮಧ್ಯಾಹ್ನ ಮಹಾಪೂಜೆ ನಡೆಯಿತು. ಇದೇ ಸಂದರ್ಭದಲ್ಲಿ ದೇವರಮಾರು ಗದ್ದೆಯಲ್ಲಿ ನಡೆಯುವ ಅನ್ನಪ್ರಸಾದ ವಿತರಣೆ ಪಲ್ಲಪೂಜೆ ನಡೆದ ಬಳಿಕ ಅನ್ನಪ್ರಸಾದ ವಿತರಣೆ ನಡೆಯಿತು. ವಾರ್ಷಿಕ ಮಹಾಪೂಜೆ ಸಂದರ್ಭ ಭಜನಾ ಕಾರ್ಯಕ್ರಮವು ನಡೆಯಿತು.
ಮಹಾಕ್ಷೇತ್ರವಾಗಿ ಬೆಳಗಲಿದೆ:
ಬ್ರಹ್ಮಶ್ರೀ ವೇ ಮೂ ಕೇಶವ ಜೋಗಿತ್ತಾಯವರ ಪುತ್ರ ಬ್ರಹ್ಮಶ್ರೀ ವೇ ಮೂ ಅನಂತರಾಮ ಜೋಗಿತ್ತಾಯವರು ಪೂಜೆಯ ಬಳಿಕ ಅಕ್ಷತೆಯ ಅರ್ಚನೆಯ ಸಂದರ್ಭದಲ್ಲಿ ಮಾತನಾಡಿ ಶುಕ್ಲಪಕ್ಷ ಪಂಚಮಿ ಉತ್ತರಾಯಣ ಕಾಲದ ಪಲ್ಗುನ ಮಾಸದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಬಹಳ ಮಹತ್ವವಿದೆ. ನನ್ನ ತಂದೆಯವರ ಮೂಲಕ 20 ವರ್ಷದ ಹಿಂದೆ ಇಲ್ಲಿ ಪ್ರತಿಷ್ಠಾಪಿಸಲ್ಪಟ್ಟ ನಾಗ ದೇವರ ಸನ್ನಿಧಿಯಲ್ಲಿ ಸಂತಾನ ಭಾಗ್ಯ, ವಿವಾಹ ಮತ್ತು ಚರ್ಮ ರೋಗಕ್ಕೆ ಸಂಬಂಧಿಸಿ ಅನೇಕ ಪ್ರಾರ್ಥನೆಗೆ ಫಲ ಸಿಕ್ಕಿದೆ. ಈ ಕ್ಷೇತ್ರ ಹಲವು ಮಂದಿಗೆ ಮೂಲ ನಾಗವಾಗಿದೆ. ಈ ನಿಟ್ಟಿನಲ್ಲಿ ಈ ಕ್ಷೇತ್ರ ಮಹಾಕ್ಷೇತ್ರವಾಗಿ ಬೆಳಗಲಿ. ಇದೇ ರೀತಿ ಭಕ್ತರ ಪ್ರಾರ್ಥನೆಯನ್ನು ನಾಗದೇವರು ಈಡೇರಿಸಲಿ, ಎಲ್ಲರು ಪ್ರಗತಿ ಕಾಣಲಿ ಎಂದು ಪ್ರಾರ್ಥನೆ ಸಲ್ಲಿಸಿದರು.
ಅದೇ ರೀತಿ ನಾಗ ದೇವರ ಸುವಸ್ತುಗಳನ್ನು ದಾಸ್ತಾನು ಮಾಡಲು ನೂತನ ಕಟ್ಟಡ ನಿರ್ಮಾಣ ಮಾಡುವಲ್ಲೂ ಭಕ್ತರ ಸಹಕಾರವನ್ನು ಅವರು ಯಾಚಿಸಿದರು. ಈ ಸಂದರ್ಭದಲ್ಲಿ ಭಕ್ತರು ಪೂಜೆಯಲ್ಲಿ ಪಾಲ್ಗೊಂಡು, ಅನ್ನಪ್ರಸಾದ ಸ್ವೀಕರಿಸಿದರು. ನೆಲ್ಲಿಕಟ್ಟೆ ಶ್ರೀ ನಾಗ ದೇವರ ಸನ್ನಿಧಿ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಪೂಜಾ ಕಾರ್ಯಕ್ರಮದ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.